ಆರೋಪ ಸಾಬೀತಾದರೆ ತಕ್ಷಣ ಪೀಠ ತ್ಯಾಗ: ಪೇಜಾವರ ಶ್ರೀ

Update: 2018-07-23 14:40 GMT

ಉಡುಪಿ, ಜು.23: ಇತ್ತೀಚೆಗೆ ನಿಧನರಾದ ಶಿರೂರು ಮಠದ ಶ್ರೀ ಲಕ್ಷ್ಮೀವರ ತೀರ್ಥರ ಆಪ್ತವರ್ಗ ಬಹಿರಂಗಗೊಳಿಸಿದ ಆಡಿಯೊದಲ್ಲಿ ಶಿರೂರು ಶ್ರೀಗಳು ತಮ್ಮ ಬಗ್ಗೆ ಮಾಡಿದ ಆರೋಪಗಳೆಲ್ಲವೂ ಸಂಪೂರ್ಣ ಸುಳ್ಳು. ಆರೋಪ ಸಾಬೀತಾದರೆ ನಾನು ತಕ್ಷಣ ಪೀಠ ತ್ಯಾಗ ಮಾಡುತ್ತೇನೆ ಎಂದು ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥರು ತಿಳಿಸಿದ್ದಾರೆ.

ಪತ್ರಿಕೆಗಳಿಗೆ ಇಂದು ಬಿಡುಗಡೆಗೊಳಿಸಿದ ಹೇಳಿಕೆಯಲ್ಲಿ ಈ ವಿಷಯ ತಿಳಿಸಿರುವ ಪೇಜಾವರಶ್ರೀ, ಈ ಆಡಿಯೊದಲ್ಲಿ ತನಗೆ ತಾರುಣ್ಯದಲ್ಲಿ ಸ್ತ್ರೀಸಂಗ ವಿತ್ತು. ಪದ್ಮಾ ಎಂಬ ಹೆಣ್ಣು ಮಗಳು ತಮಿಳುನಾಡಿನಲ್ಲಿದ್ದಾಳೆಂಬ ಶುದ್ಧ ಸುಳ್ಳು ಸಂಗತಿಯನ್ನು ಉಲ್ಲೇಖಿಸಲಾಗಿದೆ. ಕಳೆದ ಡಿಸೆಂಬರ್ ತಿಂಗಳಲ್ಲಿ ಇವರೇ ಕಳುಹಿಸಿರಬಹುದಾದ ಪತ್ರದಲ್ಲಿ ಅವನು ಗಂಡು ಮಗನೆಂದು ಅವನ ಕುಲನಾಮವನ್ನು ಉಲ್ಲೇಖಿಸಲಾಗಿದೆ. ಈ ವ್ಯತ್ಯಾಸದಿಂದಲೇ ಇದು ಕಲ್ಪನೆಯೆಂದು ಗೊತ್ತಾಗುತ್ತದೆ ಎಂದು ಹೇಳಿದರು.

ದೇಶವೇ ನಂಬದು: ಆದುದರಿಂದ ಈ ಆರೋಪವನ್ನು ಈ ದೇಶದ ಯಾರೂ ನಂಬುವುದಿಲ್ಲವೆಂದು ನನಗೆ ಗೊತ್ತಿದೆ. ಈ ಬಗ್ಗೆ ವಿಚಾರಣೆ ಹಾಗೂ ಪರೀಕ್ಷೆಯನ್ನು ಎದುರಿಸಲು ನಾನು ಸಿದ್ಧನಿದ್ದೇನೆ. ಇದು ಬರೇ ಸುಳ್ಳು ಆರೋಪ. ಇದನ್ನು ಸಿದ್ಧಪಡಿಸಲು ಸಾಧ್ಯವೇ ಇಲ್ಲ. ಇದು ಸಿದ್ಧವಾದರೆ ನಾನು ತಕ್ಷಣ ಪೀಠ ತ್ಯಾಗ ಮಾಡುತ್ತೇನೆ ಎಂದವರು ಘೋಷಿಸಿದ್ದಾರೆ.

ನನ್ನ ಪಾತ್ರವಿಲ್ಲ: ಪಲಿಮಾರು ಮಠದ ಹಿಂದಿನ ಸ್ವಾಮೀಜಿಗಳಾದ ರಘುವಲ್ಲಭ ತೀರ್ಥರು, ಶಿರೂರು ಮಠದ ಹಿಂದಿನ ಯತಿಗಳಾದ ಮನೋಜ್ಞ ತೀರ್ಥರು ಹಾಗೂ ಸುಬ್ರಹ್ಮಣ್ಯ ಮಠದ ಸ್ವಾಮಿಗಳಾದ ವಿದ್ಯಾಭೂಷಣರು ಪೀಠ ತ್ಯಾಗ ಮಾಡಲು ನನ್ನ ಪಾತ್ರವೇನು ಇರಲಿಲ್ಲ. ಅವರನ್ನು ಪೀಠದಲ್ಲಿ ಉಳಿಸಲು ಎಲ್ಲಾ ಪ್ರಯತ್ನಗಳನ್ನು ಮಾಡಿದ್ದೇನೆ. ಅವರಾಗಿ ಸ್ವಇಚ್ಚೆಯಿಂದ ಹೋಗಿದ್ದಾರೆ. ಅದಕ್ಕಾಗಿ ನನ್ನನ್ನು ಹಂತಕನನ್ನಾಗಿಸುವುದು ಸರ್ವಥಾ ತಪ್ಪು.

ರಘುವಲ್ಲಭರಿಗೆ ನಾನು ಐದು ಲಕ್ಷ ರೂ. ಕೊಟ್ಟಿರುವೆನೆಂದು ಆರೋಪಿಸಿರುವುದೂ ಸಂಪೂರ್ಣ ಸುಳ್ಳು. ಅವರಿಗೆ ಇದಕ್ಕಾಗಿ ಒಂದು ಪೈಸೆಯನ್ನು ಕೂಡಾ ಕೊಟ್ಟಿಲ್ಲ. ವಿಶ್ವವಿಜಯರನ್ನು ನಾನು ಕಳುಹಿಸಿಯೇ ಇಲ್ಲ. ಅವರಾಗಿಯೇ ಹೋಗಿದ್ದಾರೆ. ಹೋದರೆ ಅನೇಕ ಸಮಸ್ಯೆಗಳಾಗುವುದೆಂದು ನಾನು ಹೇಳಿದ್ದೆ. ಆದರೂ ಅವರು ಹೋದರು. ಬಂದ ಮೇಲೆ ಸೂಕ್ತ ವ್ಯವಸ್ಥೆ ಮಾಡುವುದಾಗಿ ಹೇಳಿದ್ದೆ. ಆದರೆ ಅವರು ನನಗೆ ತಿಳಿಸದೇ ಪೀಠ ತ್ಯಾಗ ಮಾಡಿದ್ದಾರೆ.
ಇನ್ನು ವ್ಯಾಸರಾಜ ಸ್ವಾಮಿಗಳ ಆಶ್ರಮ, ಸುವಿದ್ಯೇಂದ್ರದ ಆಶ್ರಮ ಸ್ವೀಕಾರ ಮತ್ತು ಪೀಠತ್ಯಾಗದಲ್ಲಿ ನನ್ನ ಪಾತ್ರ ಕಿಂಚಿತ್ತೂ ಇಲ್ಲ. ಆದರೂ ಇವೆಲ್ಲವುಗಳಿಗೂ ನಾನೇ ಕಾರಣವೆಂದು ದೂಷಿಸುವುದು ಸರ್ವಥಾ ಸರಿಯಲ್ಲ. ಶಿರೂರು ಸ್ವಾಮಿಗಳಿಂದ ನಾನು ಯಾವುದೇ ರೀತಿಯ ಹಣವನ್ನು ಅಪೇಕ್ಷಿಸಿಯೂ ಇಲ್ಲ, ಕೇಳಲೂ ಇಲ್ಲ. ಇವೆಲ್ಲದರ ಬಗ್ಗೆಯೂ ಬಹಿರಂಗ ವಿಚಾರಣೆಗೆ ನಾನು ಯಾವಾಗಲೂ ಸಿದ್ಧ ಎಂದು ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಹೇಳಿಕೆಯಲ್ಲಿ ಸ್ಪಷ್ಟ ಪಡಿಸಿದ್ದಾರೆ.

ಅನಿವಾರ್ಯವಾಗಿ ವಿವರಣೆ

ಶಿರೂರುಶ್ರೀಗಳ ನಿಧನದ ನಂತರ ಅವರ ಅವ್ಯವಹಾರ ಕುರಿತು ಹೇಳಿಕೆ ಸರಿಯಲ್ಲವೆಂದು ಕೆಲವರು ಆಕ್ಷೇಪಿಸಿದ್ದಾರೆ. ಅಲ್ಲದೇ ಅವರಿಗೆ ಪಟ್ಟದ ವಿಠಲ ದೇವರನ್ನು ಯಾಕೆ ಕೊಟ್ಟಿಲ್ಲ ? ಅವರ ಅಂತ್ಯದರ್ಶನಕ್ಕೆ ಯಾಕೆ ಹೋಗಿಲ್ಲ ಮುಂತಾದ ಪ್ರಶ್ನೆ ಹಾಗೂ ಆಕ್ಷೇಪವನ್ನು ಪತ್ರಿಕಾಗೋಷ್ಠಿಯಲ್ಲಿ ಪತ್ರಕರ್ತರು ಮಾಡಿದ್ದರಿಂದ, ಅದಕ್ಕೆ ಉತ್ತರವಾಗಿ ಸನ್ಯಾಸ ಧರ್ಮವನ್ನು ಪೂರ್ಣವಾಗಿ ಉಲ್ಲಂಘಿಸಿದ್ದಾರೆಂಬುದನ್ನು ನಾನು ಅನಿವಾರ್ಯವಾಗಿ ವಿವರಿಸಬೇಕಾಯಿತು ಎಂದು ಪೇಜಾವರಶ್ರೀ ನುಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News