ಉಡುಪಿ: ಯುವಶಕ್ತಿ ಸಂಘ ಯೋಜನೆಗೆ ಅರ್ಜಿ ಆಹ್ವಾನ
ಉಡುಪಿ, ಜು.23: ಪ್ರತೀ ಜಿಲ್ಲೆಯಿಂದ ಅರ್ಹ ಒಂದು ಯುವ ಶಕ್ತಿ ಸಂಘಕ್ಕೆ ಸರಕಾರದಿಂದ 5 ಲಕ್ಷ ರೂ ಸುತ್ತು ನಿಧಿ ಸಾಲವನ್ನು ನೀಡಲಾಗುತ್ತಿದ್ದು, ನಿಬಂಧನೆ ಗೊಳಪಟ್ಟ ಅರ್ಹ ಸಂಘಗಳಿಂದ ಪ್ರಸ್ತಾವನೆಗಳನ್ನು ಆಹ್ವಾನಿಸಲಾಗಿದೆ.
ಸಂಘವು ನಿಯಮಾನುಸಾರ ಸೊಸೈಟಿ ನೊಂದಣಿ ಕಾಯ್ದೆ-1960ರಡಿ ಕಡ್ಡಾಯವಾಗಿ ನೊಂದಣಿಯಾಗಿರಬೇಕು. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಲ್ಲಿ ಮಾನ್ಯತೆ ಪಡೆದು ಕಾಲಕಾಲಕ್ಕೆ ನವೀಕರಿಸಬೇಕು. ಸಂಘದಲ್ಲಿ ಸದಸ್ಯರ ವಯೋಮಿತಿ 15ರಿಂದ 35 ವರ್ಷದೊಳಗಿರಬೇಕು. ಕಡ್ಡಾಯವಾಗಿ ಸ್ಥಳೀಯ ರಾಷ್ಟ್ರೀಕೃತ ಬ್ಯಾಂಕ್‌ನಲ್ಲಿ ಸಂಘದ ಅಧ್ಯಕ್ಷರ ಮತ್ತು ಕಾರ್ಯದರ್ಶಿ ಹೆಸರಿನಲ್ಲಿ ಜಂಟೀ ಖಾತೆಯನ್ನು ಹೊಂದಿರಬೇಕು.
ಸುತ್ತು ನಿಧಿ ಪಡೆದ ದಿನದಿಂದ ಕಾಲಕಾಲಕ್ಕೆ ಹಂತ ಹಂತವಾಗಿ ಸುತ್ತುನಿಧಿಯ ಬಂಡವಾಳ ವೆಚ್ಚವನ್ನು ಸರಕಾರಕ್ಕೆ ಹಿಂದಿರುಗಿಸಬೇಕು. ಆಯಾ ಆರ್ಥಿಕ ವರ್ಷಾಂತ್ಯಕ್ಕೆ ಲೆಕ್ಕ ಪತ್ರ ಆಡಿಟ್ ವರದಿಯನ್ನು ಸಹಾಯಕ ನಿರ್ದೇಶಕರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಉಡುಪಿ ಇವರಿಗೆ ಸಲ್ಲಿಸಬೇಕು.
ಸುತ್ತು ನಿಧಿಯನ್ನು ನಿಗದಿತ ಅವಧಿಯೊಳಗೆ ಸರಕಾರಕ್ಕೆ ಮರುಪಾವತಿಸದೇ ಇದ್ದಲ್ಲಿ ಸಂಘದ ಎಲ್ಲಾ ಸದಸ್ಯರಿಂದ ಬಾಕಿ ಹಣವನ್ನು ಭೂಕಂದಾಯ ಬಾಕಿ ಎಂದು ಪರಿಗಣಿಸಿ ವಸೂಲಿ ಮಾಡಲಾಗುವುದು. ಜಿಲ್ಲಾಧಿಕಾರಿಗಳ ಅಧ್ಯಕ್ಷತೆ ಯಲ್ಲಿರುವ ಜಿಲ್ಲಾ ಮಟ್ಟದ ಆಯ್ಕೆ ಸಮಿತಿ ತೀರ್ಮಾನವೇ ಅಂತಿಮವಾಗಿದೆ.
ಅರ್ಜಿ ಸಲ್ಲಿಸಲು ಆ.4 ಕೊನೆಯ ದಿನವಾಗಿದೆ. ಅರ್ಜಿ ನಮೂನೆ ಮತ್ತು ಹೆಚ್ಚಿನ ಮಾಹಿತಿಗಾಗಿ ಸಹಾಯಕ ನಿರ್ದೇಶಕರು,ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಮಹಾತ್ಮಗಾಂಧಿ ಜಿಲ್ಲಾ ಕ್ರೀಡಾಂಗಣ, ಅಜ್ಜರಕಾಡು, ಉಡುಪಿ (ದೂರವಾಣಿ: 0820-2521324, 9480886467) ಇವರನ್ನು ಸಂಪರ್ಕಿಸುವಂತೆ ಇಲಾಖೆಯ ಪ್ರಕಟಣೆ ತಿಳಿಸಿದೆ.