ರಿಕ್ಷಾ ಚಾಲಕರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ
ಉಡುಪಿ, ಜು.23: ಕುತ್ಪಾಡಿ ಶ್ರೀಧರ್ಮಸ್ಥಳ ಮಂಜುನಾಥೇಶ್ವರ ಆಯು ರ್ವೇದ ಕಾಲೇಜು ಮತ್ತು ಆಸ್ಪತ್ರೆ ಹಾಗೂ ಕುತ್ಪಾಡಿ ರಿಕ್ಷಾ ಚಾಲಕರ, ಮಾಲಕರ ಸಂಘದ ಸಹಯೋಗದೊಂದಿಗೆ ಉಚಿತ ಆರೋಗ್ಯ ಮಾಹಿತಿ ಹಾಗೂ ತಪಾ ಸಣಾ ಶಿಬಿರವು ಇತ್ತೀಚೆಗೆ ಆಸ್ಪತ್ರೆಯಲ್ಲಿ ಜರಗಿತು.
ಶಿಬಿರವನ್ನು ಉದ್ಘಾಟಿಸಿದ ಉಡುಪಿ ಕಾರ್ಪೋರೇಶನ್ ಬ್ಯಾಂಕ್ ಸಹಾಯಕ ಪ್ರಬಂಧಕ ಡೇಲಿಯಾ ಎ.ಡಯಾಸ್ ಮಾತನಾಡಿ, ಸಮಾಜಕ್ಕಾಗಿ ಅಹರ್ನಿಶಿ ದುಡಿಯುತ್ತಿರುವ ರಿಕ್ಷಾ ಚಾಲಕರು ಅವಿಶ್ರಾಂತ ಜೀವನದಲ್ಲಿ ಅನೇಕ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದು, ಅದನ್ನು ಕಡೆಗಣಿಸದೆ ಸೂಕ್ತ ಸಮಯದಲ್ಲಿ ಚಿಕಿತ್ಸೆಯನ್ನು ಪಡೆಯುವುದು ಹಾಗೂ ಮುಂದೆ ಸಮಸ್ಯೆಗಳು ಬಾರದಂತೆ ಮುಂಜಾಗೃತಾ ಕ್ರಮಗಳನ್ನು ಅನುಸರಿಸುವುದು ಅಗತ್ಯವಾಗಿದೆ ಎಂದರು.
ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಡಾ.ಜಿ.ಶ್ರೀನಿವಾಸ ಆಚಾರ್ಯ ವಹಿಸಿದ್ದರು. ರಿಕ್ಷಾ ಚಾಲಕರು ಹಾಗೂ ಮಾಲಕರ ಸಂಘದ ಅಧ್ಯಕ್ಷ ಆರೀಫ್ ಉಪಸ್ಥಿತರಿದ್ದರು. ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕಿ ಡಾ.ಮಮತ ಕೆ.ವಿ. ಪ್ರಾ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು.
ರೋಗ ನಿದಾನ ವಿಭಾಗದ ಡಾ.ಪ್ರಸನ್ನ ಮೊಗಸಾಲೆ, ಶಲ್ಯತಂತ್ರ ವಿಭಾಗದ ಉಪನ್ಯಾಸಕ ಡಾ.ಪ್ರಶಾಂತ್ ಕೆ., ಡಾ.ಸಪ್ನ ಭಂಡಾರಿ, ಪಥ್ಯಾಹಾರ ತಜ್ಞ ಡಾ.ವಿಜಯ ನೆಗ್ಳೂರ್ ಆರೋಗ್ಯ ಮಾಹಿತಿ ನೀಡಿದರು. ನೂರಕ್ಕೂ ಅಧಿಕ ರಿಕ್ಷಾ ಚಾಲಕರು ತಮ್ಮ ಅನೇಕ ರೀತಿಯ ಸಮಸ್ಯೆಗಳಿಗೆ ಸೂಕ್ತ ತಪಾಸಣೆ ಹಾಗು ಚಿಕಿತ್ಸೆಯನ್ನು ಪಡೆದರು. ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಜಯಕೃಷ್ಣ ನಾಯಕ್ ವಂದಿಸಿದರು. ಡಾ.ಲಿಖಿತಾ ಡಿ.ಎನ್. ಮತ್ತು ಡಾ.ಶ್ರೀನಿಧಿ ಧನ್ಯ ಕಾರ್ಯ ಕ್ರಮ ನಿರೂಪಿಸಿದರು.