×
Ad

ನಕಲಿ ಗೋರಕ್ಷಕರಿಂದ ಹತ್ಯಾ ಸರಣಿ: ಯುನಿವೆಫ್ ಖಂಡನೆ

Update: 2018-07-23 20:35 IST

ಮಂಗಳೂರು, ಜು. 23: ಇತ್ತೀಚಿನ ದಿನಗಳಲ್ಲಿ ದೇಶದಲ್ಲಿ ನಕಲಿ ಗೋರಕ್ಷಕರ ಅಟ್ಟಹಾಸ ಮಿತಿಮೀರುತ್ತಿದೆ. ಸುಪ್ರೀಂ ಕೋರ್ಟ್ ಈ ಬಗ್ಗೆ ಕಳವಳ ವ್ಯಕ್ತಪಡಿಸಿ ಕೇಂದ್ರ ಸರಕಾರಕ್ಕೆ ನಿರ್ದೇಶಗಳನ್ನು ನೀಡಿದರೂ ಅದನ್ನು  ಲೆಕ್ಕಿಸದೆ ಕಾನೂನನ್ನು ಕೈಗೆತ್ತಿಕೊಳ್ಳುವ ಇವರಿಗೆ ಕೇಂದ್ರ ಹಾಗು ಕೆಲವು ರಾಜ್ಯ ಸರಕಾರಗಳ ಮೌನ ತಮ್ಮ ಕೆಲಸವನ್ನು ಮುಂದುವರಿಸಲು ಉತ್ತೇಜನ ನೀಡುತ್ತಿದೆ ಇದು ಖಂಡನೀಯ ಎಂದು ಯುನಿವೆಫ್ ಕರ್ನಾಟಕ ತಿಳಿಸಿದೆ.

ಅಲ್ಪ ಸಂಖ್ಯಾತರನ್ನು ಹಾಗು ದಲಿತರನ್ನು ಗುರಿಯಾಗಿಸಿ ನಡೆಯುತ್ತಿರುವ ಈ ದಾಳಿಗಳು ಆಕಸ್ಮಿಕವಲ್ಲ, ಇವುಗಳ ಹಿಂದೆ ವ್ಯವಸ್ಥಿತವಾದ ಷಡ್ಯಂತ್ರವಿದೆ.  ಮೌಖಿಕ ಆದೇಶಗಳಿಂದ ಮತ್ತು ಹಾಹಾಕಾರದ ಹೇಳಿಕೆಗಳಿಂದ ಇದನ್ನು ನಿಯಂತ್ರಿಸಲು ಸಾಧ್ಯವಿಲ್ಲ . ತೇಪೆ ಹಚ್ಚುವ ಮತ್ತು  ಮೊಸಳೆ ಕಣ್ಣೀರು ಸುರಿಸುವುದನ್ನು ಬಿಟ್ಟು ಈ ಸಮಸ್ಯೆಯನ್ನು ಪರಿಹರಿಸಲು ಪ್ರಾಮಾಣಿಕ ಹಾಗು ನಿಷ್ಥುರ ಕ್ರಮಗಳನ್ನು ಕೈಗೊಳ್ಳಬೇಕೆಂದು ಕೇಂದ್ರ ಹಾಗು ರಾಜ್ಯಸರಕಾರಗಳನ್ನು ಯುನಿವೆಫ್ ಕರ್ನಾಟಕ ಒತ್ತಾಯಿಸಿದೆ.

ಸರಕಾರಗಳು ಕಠಿಣ ಕಾನೂನು ಕ್ರಮಗಳ ಮೂಲಕ ಇಂಥ ಕೃತ್ಯಗಳನ್ನು ಹತ್ತಿಕ್ಕಿ ಜನಸಾಮಾನ್ಯರಿಗೆ ರಕ್ಷೆ ನೀಡಬೇಕಾಗಿದೆ.  ಸರಕಾರಗಳ ವೈಫಲ್ಯ ದೇಶದಲ್ಲಿ  ತೀವ್ರ ರೀತಿಯ  ಅರಾಜಕತೆಗೆ ಕಾರಣವಾಗುವ ಭೀತಿ ಇದೆ. ಕೆಲವು ಸಂಘಟನೆಗಳು ಕಾನೂನಿಗಿಂತ ಮಿಗಿಲಾಗಿ  ವರ್ತಿಸುತ್ತಿರುವುದು ಈ ದೇಶದ ಕಾನೂನು ವ್ಯವಸ್ಥೆಗೆ ಕಪ್ಪು ಚುಕ್ಕೆಯಾಗಿದೆ. ಆದುದರಿಂದ ಇಂಥವರ ವಿರುದ್ಧ  ಕಠಿಣ ಕಾನೂನು ಕ್ರಮ ಜರಗಿಸುವಂತೆಯೂ ಯುನಿವೆಫ್ ಕರ್ನಾಟಕ ಅಧ್ಯಕ್ಷ ರಫೀಉದ್ದೀನ್ ಕುದ್ರೋಳಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News