×
Ad

ಆರೋಗ್ಯ ಕರ್ನಾಟಕ ಯೋಜನೆ ನೋಂದಣಿ ಕೇಂದ್ರ ತೆರೆಯುವಂತೆ ಒತ್ತಾಯ

Update: 2018-07-23 20:43 IST

ಬಂಟ್ವಾಳ, ಜು. 23: ಪುದು ಗ್ರಾಮ ಪಂಚಾಯತ್‌ನ ಪ್ರಥಮ ಹಂತದ ಗ್ರಾಮ ಸಭೆಯು ಗ್ರಾಪಂ ಅಧ್ಯಕ್ಷ ರಮ್ಲಾನ್ ಅವರ ಅಧ್ಯಕ್ಷತೆಯಲ್ಲಿ ಸುಜೀರು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ನಡೆಯಿತು.

ಪುದು ವ್ಯಾಪ್ತಿಯಲ್ಲಿ ಕಸ ವಿಲೇವಾರಿ ಅಸಮರ್ಪಕವಾಗಿದೆ. ಈ ಬಗ್ಗೆ ಪಂಚಾಯತ್‌ನಲ್ಲಿ ಯಾವ ರೀತಿಯಾದ ವ್ಯವಸ್ಥೆಯನ್ನು ರೂಪಿಸಲಾಗಿದೆ ಎನ್ನುವ ಬಗ್ಗೆ ಗ್ರಾಮಸ್ಥ ದಿನೇಶ್ ಅವರು ಸಭೆಯಲ್ಲಿ ಪ್ರಸ್ತಾಪಿಸಿದರು.

ಇದಕ್ಕೆ ಅಧ್ಯಕ್ಷ ರಮ್ಲಾನ್ ಅವರು ಪ್ರತಿಕ್ರಿಯಿಸಿ, ತುಂಬೆ ಹಾಗೂ ಇನ್ನಿತರ ಪ್ರದೇಶಗಳಿಂದ ತ್ಯಾಜ್ಯಗಳನ್ನು ತಂದು ಫರಂಗಿಪೇಟೆ, ಸುತ್ತಮುತ್ತಲಿನ ಪ್ರದೇಶಕ್ಕೆ ಎಸೆದು ಹೋಗುತ್ತಿದ್ದಾರೆ. ಈ ಬಗ್ಗೆ ಗ್ರಾಮಸ್ಥರಿಂದ ದೂರುಗಳು ಕೇಳಿಬರುತ್ತಿದ್ದು, ಇಲ್ಲಿಗೆ ವಾಹನಗಳಲ್ಲಿ ತ್ಯಾಜ್ಯಗಳನ್ನು ಎಸೆಯುವವರ ಪತ್ತೆಹಚ್ಚಿ ಪೊಲೀಸ್ ದೂರು ನೀಡಲಾಗುವುದು ಎಂದು ಹೇಳಿದರು.

ಮಾರಿಪಳ್ಳ ಮಸೀದಿಯ ಸಮೀಪದಲ್ಲಿಯೇ ಕಸಗಳನ್ನು ರಾಶಿ ಹಾಕಲಾಗುತ್ತಿದೆ ಎಂದು ಹುಸೈನ್ ಅವರು ದೂರಿಕೊಂಡರು. ಪುದು ಗ್ರಾಪಂ ವ್ಯಾಪ್ತಿಯಲ್ಲಿ ಡಂಪಿಂಗ್ ಯಾರ್ಡ್ ನಿರ್ಮಾಣ ಮಾಡಲು ಸ್ಥಳದ ಅಭಾವಿದೆ. ಮಸೀದಿ ಕೊಂಚ ದೂರದಲ್ಲಿಯೇ ಕಸ ವಿಲೇವಾರಿಗೆ ಜಾಗ ಕಾಯ್ದಿಸಲಾಗುವುದು ಎಂದು ಅಧ್ಯಕ್ಷರು ಸಭೆಗೆ ತಿಳಿಸಿದಾಗ, ಇದಕ್ಕೆ ಗ್ರಾಮಸ್ಥ ದಿನೇಶ್ ಅವರು ಆಕ್ಷೇಪಿಸಿ, ಮಸೀದಿಯ ಕೊಂಚ ದೂರದಲ್ಲಿ ದೇವರ ಗುಡಿಯೊಂದಿದ್ದು, ಅಲ್ಲಿಯೂ ಹಾಕುವುದು ಸರಿಯಲ್ಲ ಎಂದರು.

ಇದಕ್ಕೆ ಸದಸ್ಯ ಹಾಶಿರ್ ಪ್ರತಿಕ್ರಿಯಿಸಿ, ಈ ಪರಿಸರದಲ್ಲಿ ಕಸ ಹಾಕಲು ಸರಿಯಾದ ಸ್ಥಳವಕಾಶ ಇಲ್ಲದ ಕಾರಣ ಜನರು ರಸ್ತೆಯ ಬದಿಯಲ್ಲಿಯೇ ಎಸೆದು ಹೋಗುತ್ತಿದ್ದಾರೆ. ಇಲ್ಲಿಂದ ಮಂಗಳೂರಿನ ತ್ಯಾಜ್ಯ ಘಟಕ್ಕೆ ಸಾಗಿಸಲಾಗುತ್ತದೆ. ಸ್ವಚ್ಛಭಾರತ ಪರಿಕಲ್ಪನೆಯಡಿ ಗ್ರಾಪಂ ವತಿಯಿಂದ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಇದಕ್ಕೆ ಗ್ರಾಮಸ್ಥರು ಕೈಜೋಡಿಸಬೇಕೆಂದರು.

ರಾಜ್ಯದಲ್ಲಿ ಈಗಾಗಲೇ ಅನುಷ್ಠಾನದಲ್ಲಿರುವ ರಾಜೀವ್ ಗಾಂಧಿ ಆರೋಗ್ಯ ಭಾಗ್ಯ, ವಾಜಪೇಯಿ ಆರೋಗ್ಯಶ್ರೀ, ರಾಷ್ಟ್ರೀಯ ಸ್ವಾಸ್ಥ್ಯ ಭೀಮಾ ಯೋಜನೆ, ಯಶಸ್ವಿನಿ ಯೋಜನೆ, ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಕಾರ್ಯಕ್ರಮ, ಇಂದಿರಾ ಸುರಕ್ಷಾ ಯೋಜನೆ ಹಾಗೂ ಮುಖ್ಯಮಂತ್ರಿ ಸಾಂತ್ವಾನ ಹರೀಶ್ ಯೋಜನೆ ಮುಂತಾದ ಯೋಜನೆಗಳನ್ನು ಒಗ್ಗೂಡಿಸಿ ಎಲ್ಲ ಜನರಿಗೂ ಪರಿಪೂರ್ಣ ಆರೋಗ್ಯ ಒದಗಿಸುವ ಮಹತ್ವದ ಗುರಿ ಈ ಆರೋಗ್ಯ ಕರ್ನಾಟಕ ಯೋಜನೆ ಹೊಂದಿದೆ. ಪಡಿತರ ಚೀಟಿ ತೋರಿಸಿ ಮಂಗಳೂರು ವೆನ್‌ಲಾಕ್ ಆಸ್ಪತ್ರೆಯಲ್ಲಿ ನೋದಣಿ ಮಾಡಿಕೊಳ್ಳಬಹುದ ಎಂದು ಆರೋಗ್ಯ ಅಧಿಕಾರಿ ಸುದರ್ಶನ್ ಅವರು ಮಾಹಿತಿ ನೀಡಿದರು.

ಇದಕ್ಕೆ ಹುಸೈನ್ ಅವರು ಪ್ರತಿಕ್ರಿಯಿಸಿ, ಈ ಮೊದಲು ತಾನು ಆರೋಗ್ಯ ಕರ್ನಾಟಕ ಯೋಜನೆಯ ನೋಂದಣಿಗೆ ಮಂಗಳೂರಿಗೆ ತೆರಳಿದ್ದು, ಅಲ್ಲಿಯ ಸಿಬ್ಬಂದಿ ಆಯಾ ತಾಲೂಕು ಆರೋಗ್ಯ ಕೇಂದ್ರಕ್ಕೆ ಹೋಗುವಂತೆ ತಿಳಿಸಿದ್ದು, ಇದರಿಂದ ಜನರಿಗೆ ಗೊಂದಲ ಉಂಟಾಗಿದೆ ಎಂದು ಸಭೆಯ ಗಮನ ಸೆಳೆದರು. ಯೋಜನೆಯಡಿಯಲ್ಲಿ ಹಲವಾರು ಜನರು ನೋಂದಣಿ ಮಾಡಿದ್ದು, ಇತ್ತೀಚಿನ ದಿನಗಳಲ್ಲಿ ವಿವಿಧೆಡೆ ಸರ್ವರ್ ಸಮಸ್ಯೆ ಉಂಟಾಗಿತ್ತು. ಅದಕ್ಕಾಗಿ ಮಂಗಳೂರಿನ ವೆನ್‌ಲಾಕ್ ಆಸ್ಪತ್ರೆಯಲ್ಲಿ ಮಾತ್ರ ನೋಂದಣಿ ಮಾಡಲಾಗುತ್ತಿದೆ. ಮುಂದಿನ ತಿಂಗಳುಗಳಲ್ಲಿ ಆಯಾ ತಾಲೂಕು ಆಸ್ಪತ್ರೆಗಳಲ್ಲಿ ನೋಂದಣಿ ಪ್ರಕ್ರಿಯೆ ಪ್ರಾರಂಭ ಮಾಡಲಾಗುವುದು ಎಂದು ಆರೋಗ್ಯ ಅಧಿಕಾರಿ ಅವರು ಮಾಹಿತಿ ನೀಡಿದರು.

ಆಧಾರ್‌ಕಾರ್ಡ್ ಕೇಂದ್ರವನ್ನು ಪುದು ಗ್ರಾಮ ಪಂಚಾಯತ್‌ನಲ್ಲಿ ಪ್ರಾರಂಭಿಸಬೇಕು. ಮತದಾರರ ಹೆಸರು ನೋಂದಣಿಯಲ್ಲಿ ಅಸಮರ್ಪಕತೆ, ಮೆಸ್ಕಾಂ ಸಮಸ್ಯೆ ಪರಿಹರಿಸುವ ಒತ್ತಾಯ, ರುದ್ರಭೂಮಿಯ ಸ್ವಚ್ಛತಾ ಕಾರ್ಯಕ್ರಮ, ಸುಜೀರು ಆರೋಗ್ಯ ಕೇಂದ್ರ ಹೀಗೆ ಮುಂತಾದ ಸಮಸ್ಯೆಗಳ ಬಗ್ಗೆ ಗ್ರಾಮಸ್ಥರು ಸಭೆಯಲ್ಲಿ ಒತ್ತಾಯಿಸಿದರು.

ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಅವರು ನೋಡೆಲ್ ಅಧಿಕಾರಿಯಾಗಿ ಸಭೆಯ ನೇತೃತ್ವ ವಹಿಸಿದ್ದರು. ಈ ಸಂದರ್ಭದಲ್ಲಿ ಗ್ರಾಪಂ ಉಪಾಧ್ಯಕ್ಷೆ ಲೀಡಿಯೋ ಪಿಂಟೋ, ಸದಸ್ಯರಾದ ಇಕ್ಬಾಲ್ ಸುಜೀರು ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News