ಕಾಂಗ್ರೆಸ್ ಸಂಸದರು ಗೆದ್ದು ಬಂದರೆ ಒಂದೇ ವರ್ಷದೊಳಗೆ ಚತುಷ್ಪಥ ರಸ್ತೆ ನಿರ್ಮಾಣ: ಅಭಯಚಂದ್ರ
ಮೂಡುಬಿದಿರೆ, ಜು. 23: ಕಳೆದ 10 ವರ್ಷಗಳಿಂದ ಈ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಸಂಸದ ನಳಿನ್ ಕುಮಾರ್ ಕಟೀಲು ಅವರು ಮಂಗಳೂರು - ಮೂಡುಬಿದಿರೆ ರಾಷ್ಟ್ರೀಯ ಹೆದ್ದಾರಿಯನ್ನು ಚತುಷ್ಪಥಗೊಳಿಸುವಲ್ಲಿ ವಿಫಲರಾಗಿದ್ದಾರೆ. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಸಂಸದರು ಗೆದ್ದು ಬಂದರೆ ಒಂದೇ ವರ್ಷದೊಳಗೆ ಚತುಷ್ಪಥ ರಸ್ತೆಯನ್ನು ನಿರ್ಮಿಸುತ್ತೇವೆ ಎಂದು ಮಾಜಿ ಶಾಸಕ ಕೆ. ಅಭಯಚಂದ್ರ ಜೈನ್ ಅವರು ಹೇಳಿದರು.
ಇಲ್ಲಿನ ಪ್ರೆಸ್‌ಕ್ಲಬ್‌ನಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಕೇಂದ್ರ ಸರ್ಕಾರದ ವೈಫಲ್ಯವನ್ನು ವಿವರಿಸಿದರು. ಕೇಂದ್ರ ಸರ್ಕಾರವು ಹೊಸ ಉದ್ಯೋಗ ಸೃಷ್ಟಿ ಮಾಡುವಲ್ಲಿ ವಿಫಲವಾಗಿರುವುದಲ್ಲದೆ ಪೆಟ್ರೋಲ್, ಡೀಸಲ್, ಗ್ಯಾಸ್ ದರವನ್ನು ಹೆಚ್ಚಿಸಿ ಬಡ, ಮಧ್ಯಮ ವರ್ಗದವರನ್ನು ಸಂಕಷ್ಟಕ್ಕೀಡು ಮಾಡಿದೆ. ಬಡಜನರ ಜೀವನಕ್ಕೆ ಪೂರಕವಾದ ಯಾವುದೇ ಯೋಜನೆಯನ್ನು ರೂಪಿಸದೆ ರೈತರ ಸಾಲ ಮನ್ನಾ ಮಾಡುವ ಬದಲು ಉದ್ಯಮಿಗಳ ಸಾಲ ಮನ್ನಾ ಮಾಡುತ್ತಿದೆ ಆರೋಪಿಸಿದರು.
ಮೋದಿ ಪ್ರಧಾನಿಯಾಗಿದ್ದಾಗ 2 ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ಭರವಸೆ ನೀಡಿದ್ದು ಈಡೇರಿಲ್ಲ. ಮೋದಿ ಅಧಿಕಾರಕ್ಕೆ ಬಂದ ಬಳಿಕ ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿದಿರುವುದಲ್ಲದೆ ತೈಲ ಮತ್ತು ತೈಲೋತ್ಪನ್ನಗಳ ದರ ಅಧಿಕವಾಗಿದೆ. ಈಗ ಜನರು ಮೋದಿ ಆಡಳಿತದಿಂದ ನಿರಾಶರಾಗಿದ್ದು ಸಂಖ್ಯಾಬಲದ ಆಡಳಿತ ಹೆಚ್ಚು ಸಮಯ ಉಳಿಯಲು ಸಾಧ್ಯವಿಲ್ಲ. ಮನಮೋಹನ ಸಿಂಗ್ ಜಿಎಸ್‌ಟಿಯನ್ನು ಜಾರಿಗೆ ತರಲು ಮುಂದಾದಾಗ ಬಿಜೆಪಿ ಅದನ್ನು ವಿರೋಧಿಸಿತ್ತು. ಬಿಜೆಪಿ ಪ್ರತಿಭಟನೆ ಮಾಡಿದರೆ ದೇಶಪ್ರೇಮ, ಬಿಜೆಪಿಯನ್ನು ವಿರೋಧಿಸಿ ಪ್ರತಿಭಟನೆ ನಡೆಸಿದರೆ ಅದನ್ನು ದೇಶದ್ರೋಹಿ ಎಂದು ವ್ಯವಸ್ಥಿತವಾಗಿ ಬಿಂಬಿಸುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ. ಒಂದು ತಿಂಗಳೊಳಗೆ ಪೆಟ್ರೋಲ್, ಡೀಸೆಲ್, ಗ್ಯಾಸ್ ದರವನ್ನು ಇಳಿಸದಿದ್ದಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಧರಣಿ, ಪ್ರತಿಭಟನೆ ನಡೆಸುವುದಾಗಿ ಅವರು ಎಚ್ಚರಿಸಿದರು.
ಪ್ರಸ್ತುತ ಕಾಂಗ್ರೆಸ್, ಜೆಡಿಎಸ್ ಸಮ್ಮಿಶ್ರ ಸರ್ಕಾರ ರಾಜ್ಯದಲ್ಲಿ ಅಧಿಕಾರದಲ್ಲಿದ್ದು ರೈತರ ಸಾಲ ಮನ್ನಾ ಮಾಡುವಲ್ಲಿ ಯಶಸ್ವಿಯಾಗಿದೆ. ಹೀಗಾಗಿ ಬಿಜೆಪಿಯೂ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಿ ರೈತರ ಸಾಲ ಮನ್ನಕ್ಕೆ ಅನುದಾನ ಬಿಡುಗಡೆಗೊಳಿಸಲು ಪ್ರಯತ್ನಿಸಲಿ ಎಂದರು.
ಚುನಾವಣೆಗೆ ಸ್ಪರ್ಧಿಸೆನು
ಮುಂದಿನ ದಿನಗಳಲ್ಲಿ ಪಕ್ಷವನ್ನು ಗಟ್ಟಿಗೊಳಿಸಲು ಶಕ್ತಿ ಮೀರಿ ಶ್ರಮಿಸುತ್ತೇನೆ. ಯುವಕರಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ಕಲ್ಪಿಸಬೇಕು. ನಾನು ಮುಂದಿನ ಯಾವುದೇ ಚುನಾವಣೆಗಳಲ್ಲಿ ಸ್ಪರ್ಧಿಸುವುದಿಲ್ಲ. ಮೂರು ವರ್ಷಗಳ ಹಿಂದೆಯೇ ಈ ನಿರ್ಧಾರ ಕೈಗೊಂಡಿದ್ದರೂ ಕಳೆದ ಚುನಾವಣೆಯಲ್ಲಿ ಅನಿವಾರ್ಯವಾಗಿ ಸ್ಪರ್ಧಿಸಬೇಕಾಯಿತು ಎಂದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಲೇರಿಯನ್ ಸಿಕ್ವೇರಾ, ಕಾರ್ಯದರ್ಶಿ ರತ್ನಾಕರ ಸಿ ಮೊಲಿ, ಮಹಿಳಾ ಘಟಕದ ಅಧ್ಯಕ್ಷೆ ಸುಪ್ರಿಯಾ ಡಿ.ಶೆಟ್ಟಿ. ಯುವ ಕಾಂಗ್ರೆಸ್ ಅಧ್ಯಕ್ಷ ಚಂದ್ರಹಾಸ ಸನಿಲ್, ಪುರಸಭಾ ಸದಸ್ಯ ಸುರೇಶ್ ಕೋಟ್ಯಾನ್, ಮುಖಂಡರುಗಳಾದ ರಾಘು ಪೂಜಾರಿ, ಅರುಣ್ ಶೆಟ್ಟಿ, ರುಕ್ಕಯ್ಯ ಪೂಜಾರಿ, ರೊನಾಲ್ಡ್, ಕರೀಂ ಉಪಸ್ಥಿತರಿದ್ದರು.