ಶಿರೂರು ಮಠದ ಲೆಕ್ಕಾಚಾರ: ಉತ್ತರಾಧಿಕಾರಿ ನೇಮಕಕ್ಕೆ ಅಡ್ಡಿ ?

Update: 2018-07-23 17:37 GMT

ಉಡುಪಿ, ಜು. 23: ಶಿರೂರು ಮಠಕ್ಕೆ ಸಂಬಂಧಿಸಿದ ಸಾಲ, ಆದಾಯ, ಬ್ಯಾಂಕ್ ಸೇರಿದಂತೆ ವಿವಿಧ ಹಣಕಾಸು ಲೆಕ್ಕಾಚಾರಗಳ ದಾಖಲೆಗಳು ಇನ್ನು ಶಿರೂರು ಮಠದ ದ್ವಂದ್ವ ಮಠವಾಗಿರುವ ಸೋದೆ ಮಠದ ಕೈಸೇರಿಲ್ಲ. ಮುಂದಿನ ಉತ್ತರಾಧಿಕಾರಿ ನೇಮಕ ಸುಗಮವಾಗಬೇಕಾದರೆ ಈ ಆರ್ಥಿಕ ಲೆಕ್ಕಾಚಾರ ಸರಿಪಡಿಸಬೇಕಾಗಿರುವುದು ಸೋದೆ ಮಠದ ಜವಾಬ್ದಾರಿಯಾಗಿದೆ.

‘ಶಿರೂರು ಮಠದ ಹಣಕಾಸಿನ ದಾಖಲೆಗಳ ಪುಸ್ತಕವೇ ಸಿಕ್ಕಿಲ್ಲ. ಅದಕ್ಕಾಗಿ ಹುಡುಕಾಟ ಮಾಡುತ್ತಿದ್ದೇವೆ. ಆ ಪುಸ್ತಕದಲ್ಲಿ ಯಾರಿಗೆ ಎಷ್ಟು ಹಣ ಕೊಡಲಾಗಿದೆ. ಎಷ್ಟು ಬಾಡಿಗೆ ಹಣ ಬರುತ್ತಿದೆ. ಅದರಲ್ಲಿ ಮಠಕ್ಕೆ ಎಷ್ಟು ಬರುತ್ತಿದೆ. ಬ್ಯಾಂಕ್ ಖಾತೆಗೆ ಎಷ್ಟು ಹಣ ಹೋಗುತ್ತಿದೆ. ಅವರ ಕೈಯಲ್ಲಿ ಹಣ ಎಷ್ಟು ಇತ್ತು. ಯಾವ ಮಾಹಿತಿಯೂ ಗೊತ್ತಿಲ್ಲ. ಸದ್ಯ ಬೆಂಗಳೂರಿನಲ್ಲಿರುವ ಸೋದೆ ಸ್ವಾಮೀಜಿ ಉಡುಪಿಗೆ ಬಂದ ನಂತರ ಎಲ್ಲರನ್ನು ಕರೆಸಿ ಈ ಕುರಿತು ಮಾಹಿತಿ ಪಡೆದುಕೊಳ್ಳಲಿದ್ದಾರೆ’ ಎಂದು ಸೋದೆ ಮಠದ ಪ್ರತಿನಿಧಿಯೊಬ್ಬರು ತಿಳಿಸಿದ್ದಾರೆ.

ಶಿರೂರು ಸ್ವಾಮೀಜಿಯ ಕೆಲವೊಂದು ಯೋಜನೆಗಳನ್ನು ಮುಂದುವರಿಸಬೇಕಾದರೆ ಮತ್ತು ಉತ್ತರಾಧಿಕಾರಿ ನೇಮಕ ಮಾಡಲು ಮುಖ್ಯವಾಗಿ ಮಠದ ಹಣಕಾಸು ವ್ಯವಹಾರ ಸರಿಪಡಿಸಬೇಕಾಗಿದೆ. ಈ ಸಮಸ್ಯೆಗಳೆಲ್ಲ ಇದ್ದರೆ ಯಾರು ಉತ್ತರಾಧಿಕಾರಿಯಾಗಿ ಮುಂದೆ ಬರಲ್ಲ. ಅದಕ್ಕೆ ನಾವು ಮೊದಲು ಈ ಸಮಸ್ಯೆ ಯನ್ನು ಪರಿಹರಿಸಬೇಕಾಗಿದೆ. ಈ ರೀತಿ ಆರ್ಥಿಕ ತೊಂದರೆ ಇದ್ದರೆ ಮುಂದೆ ಬರುವ ಉತ್ತರಾಧಿಕಾರಿಗಳಿಗೆ ಮಠ ನಡೆಸಲು ಸಮಸ್ಯೆ ಯಾಗಬಹುದು ಎಂದು ಅವರು ಹೇಳಿದ್ದಾರೆ.

ಶಿರೂರು ಮಠದಲ್ಲಿ ಈ ಹಿಂದೆ ನಡೆಯುತ್ತಿದ್ದ ದೈನಂದಿನ ಚಟುವಟಿಕೆ ಹಾಗೂ ಪೂಜೆಗಳನ್ನು ಸೋದೆ ಮಠದಿಂದ ಮುಂದುವರಿಸಲಾಗುತ್ತಿದೆ. ಈ ಸಂಬಂಧ ನೇಮಕ ಮಾಡಿರುವ ಸಮಿತಿಯ ಉಸ್ತುವಾರಿಯಲ್ಲಿ ಸೋದೆ ಮಠದ ಕೆಲಸದವರು ಆ ಕಾರ್ಯಗಳನ್ನು ಮಾಡುತ್ತಿದ್ದಾರೆ. ಮೊದಲು ಯಾವ ರೀತಿ ಪೂಜೆ ನಡೆಯುತ್ತಿತ್ತೊ, ಅವೆಲ್ಲವೂ ಈಗಲೂ ನಡೆಯುತ್ತಿವೆ. ಯಾವುದನ್ನು ನಿಲ್ಲಿಸಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News