×
Ad

ಶಿರೂರು ಮೂಲಮಠದಲ್ಲಿ ಎಸ್ಪಿಯಿಂದ ತನಿಖೆ: ಮಾಹಿತಿ ಸಂಗ್ರಹ

Update: 2018-07-23 21:14 IST

ಉಡುಪಿ, ಜು.23: ಶಿರೂರು ಶ್ರೀಲಕ್ಷ್ಮೀವರ ತೀರ್ಥ ಸ್ವಾಮೀಜಿ ನಿಗೂಢ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಲಕ್ಷ್ಮಣ್ ನಿಂಬರಗಿ ಇಂದು ಹಿರಿಯಡ್ಕ ಸಮೀಪದಲ್ಲಿರುವ ಶಿರೂರು ಮೂಲ ಮಠಕ್ಕೆ ತೆರಳಿ ತನಿಖೆ ನಡೆಸಿದ್ದಾರೆ.

ಸ್ವಾಮೀಜಿ ಸಾವಿನ ಪ್ರಕರಣದ ತನಿಖೆಯು ಎಸ್ಪಿ ನಿರ್ದೇಶನದಲ್ಲಿ ಮುಂದು ವರೆಯುತ್ತಿದ್ದು, ಈ ಹಿನ್ನೆಲೆಯಲ್ಲಿ ಅವರು ಮೂಲಮಠಕ್ಕೆ ಭೇಟಿ ನೀಡಿದ್ದಾರೆನ್ನ ಲಾಗಿದೆ. ಮಠದ ಕೆಲವೊಂದು ಕೋಣೆಗಳಿಗೆ ತೆರಳಿ ಪರಿಶೀಲನೆ ನಡೆಸಿರುವ ಎಸ್ಪಿ, ಸಿಸಿ ಕ್ಯಾಮೆರಾ ಹಾಗೂ ಡಿವಿಆರ್ ಸಂಬಂಧ ಮಾಹಿತಿ ಕಲೆ ಹಾಕಿದ್ದಾರೆ ಎನ್ನಲಾಗಿದೆ. ಅಲ್ಲದೆ ಮಠಕ್ಕೆ ಸಂಬಂಧಿಸಿದವರನ್ನು ಕೂಡ ಅವರು ವಿಚಾರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಎಸ್ಪಿ ಸ್ಪಷ್ಟನೆ

ಸ್ವಾಮೀಜಿಗೆ ಮಹಿಳೆಯೊಬ್ಬರು ವಿಷ ಉಣಿಸಿ ಸಾಯಿಸಿರುವುದಾಗಿ ಒಪ್ಪಿಕೊಂಡಿದ್ದಾರೆ ಎಂಬ ಸುದ್ದಿ ಸಂಪೂರ್ಣ ಸುಳ್ಳಾಗಿದ್ದು, ನಾವು ಈವರೆಗೆ ಯಾವುದೇ ಮಹಿಳೆಯನ್ನು ವಶಕ್ಕೆ ತೆಗೆದುಕೊಂಡಿಲ್ಲ ಹಾಗೂ ವಿಚಾರಣೆ ಮಾಡಿಲ್ಲ ಎಂದು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಲಕ್ಷ್ಮಣ್ ನಿಂಬರಗಿ ಸ್ಪಷ್ಟಪಡಿಸಿದ್ದಾರೆ.

ಅಲ್ಲದೆ ಶಿರೂರು ಮೂಲ ಮಠದಲ್ಲಿರುವ ಸಿಸಿ ಕ್ಯಾಮೆರಾದ ಡಿವಿಆರ್ ನಾಪತ್ತೆಯಾಗಿರುವ ವಿಚಾರವನ್ನು ನಿರಾಕರಿಸಿರುವ ಎಸ್ಪಿ ಲಕ್ಷ್ಮಣ್ ನಿಂಬರಗಿ, ಸ್ವಾಮೀಜಿಯ ಸಾವಿಗೆ ಸಂಬಂಧಿಸಿ ಹರಡುತ್ತಿರುವ ಸುದ್ದಿಗಳೆಲ್ಲವೂ ಸುಳ್ಳು ಎಂದು ಪತ್ರಿಕೆಗೆ ತಿಳಿಸಿದ್ದಾರೆ.

ಪೊಲೀಸ್ ತಂಡ ಎಲ್ಲಿಗೂ ಹೋಗಿಲ್ಲ

ಸ್ವಾಮೀಜಿಯ ಸಾವು ಹೇಗೆ ಸಂಭವಿಸಿದೆ ಎಂಬುದು ಇನ್ನೂ ನಿಖರವಾಗಿರದ ಹಿನ್ನೆಲೆಯಲ್ಲಿ ಪೊಲೀಸರು ಮರಣೋತ್ತರ ಪರೀಕ್ಷೆ ವರದಿ ಹಾಗೂ ವಿಧಿ ವಿಜ್ಞಾನ ಪ್ರಯೋಗಾಲಯದ ವರದಿಯ ನಿರೀಕ್ಷೆಯಲ್ಲಿದ್ದಾರೆ. ಈ ಎರಡು ವರದಿಗಳು ಕೈಸೇರದೆ ಯಾವ ದಿಕ್ಕಿನಲ್ಲಿ ತನಿಖೆ ಮುಂದುವರೆಸಬೇಕೆಂಬುದು ಪೊಲೀಸರಿಗೆ ದೊಡ್ಡ ತೊಡಕಾಗಿ ಪರಿಣಮಿಸಿದೆ.

‘ಪ್ರಕರಣಕ್ಕೆ ಸಂಬಂಧಿಸಿ ತನಿಖೆ ಮುಂದುವರಿದಿದ್ದು, ಮರಣೋತ್ತರ ಹಾಗೂ ಎಫ್‌ಎಸ್‌ಎಲ್ ವರದಿ ಬಾರದೆ ಯಾವುದೇ ಹೆಜ್ಜೆ ಇಡಲು ಆಗುವುದಿಲ್ಲ. ಈ ಮಧ್ಯೆ ಮಾಹಿತಿ ಕಲೆ ಹಾಕುವುದಕ್ಕಾಗಿ ಕೆಲವರನ್ನು ವಿಚಾರಣೆ ನಡೆಸಲಾಗುತ್ತಿದೆ. ಅದು ಬಿಟ್ಟು ಯಾರನ್ನು ಕೂಡ ವಶಕ್ಕೆ ತೆಗೆದುಕೊಂಡಿಲ್ಲ ಹಾಗೂ ಪೊಲೀಸ್ ತಂಡ ಜಿಲ್ಲೆ ಬಿಟ್ಟು ಎಲ್ಲೂ ಹೊರಗೆ ಹೋಗಿಲ್ಲ’ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಪತ್ರಿಕೆಗೆ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News