ಇರಾನ್ ಉನ್ನತ ಅಧಿಕಾರಿಗಳ ವಿರುದ್ಧ ದಿಗ್ಬಂಧನಕ್ಕೆ ಹಿಂಜರಿಯುವುದಿಲ್ಲ: ಮೈಕ್ ಪಾಂಪಿಯೊ ಎಚ್ಚರಿಕೆ

Update: 2018-07-24 11:33 GMT

ವಾಶಿಂಗ್ಟನ್, ಜು. 23: ಇರಾನ್ ಸರಕಾರದ ಅತ್ಯುನ್ನತ ಮಟ್ಟದ ಅಧಿಕಾರಿಗಳ ವಿರುದ್ಧ ದಿಗ್ಬಂಧನ ವಿಧಿಸಲು ಅಮೆರಿಕ ಹಿಂಜರಿಯುವುದಿಲ್ಲ ಎಂದು ಅಮೆರಿಕದ ವಿದೇಶ ಕಾರ್ಯದರ್ಶಿ ಮೈಕ್ ಪಾಂಪಿಯೊ ರವಿವಾರ ಹೇಳಿದ್ದಾರೆ.

ಜಾಗತಿಕ ಶಕ್ತಿಗಳೊಂದಿಗೆ ಇರಾನ್ ಮಾಡಿಕೊಂಡಿರುವ ಒಪ್ಪಂದದಿಂದ ಅಮೆರಿಕ ಹಿಂದೆ ಸರಿದ ಬಳಿಕ, ಮೇ 21ರಂದು ಪಾಂಪಿಯೊ ಇರಾನ್‌ಗೆ ಸಂಬಂಧಿಸಿ ‘ನೂತನ ತಂತ್ರಗಾರಿಕೆ’ಯೊಂದನ್ನು ಪ್ರಕಟಿಸಿದ್ದರು. ಒಂದು ಡಝನ್ (ಹನ್ನೆರಡು)ನಷ್ಟು ಕಠಿಣ ಬೇಡಿಕೆಗಳಿಗೆ ಒಪ್ಪುವಂತೆ ಇರಾನನ್ನು ಬಲವಂತಪಡಿಸುವುದು ಈ ತಂತ್ರಗಾರಿಕೆಯ ಉದ್ದೇಶವಾಗಿದೆ.

‘‘ಇರಾನ್ ಸರಕಾರದ ಅತ್ಯುನ್ನತ ಅಧಿಕಾರಿಗಳನ್ನು ಮಣಿಸಲು ನಾವು ಹಿಂಜರಿಯುವುದಿಲ್ಲ’’ ಎಂದು ಕ್ಯಾಲಿಫೋರ್ನಿಯದಲ್ಲಿ ಮಾಡಿದ ಭಾಷಣವೊಂದರಲ್ಲಿ ಅವರು ಹೇಳಿದರು. ಜನವರಿಯಲ್ಲಿ ಇರಾನ್ ನ್ಯಾಯಾಂಗದ ಮುಖ್ಯಸ್ಥ ಸಾದಿಕ್ ಲರಿಜನಿ ವಿರುದ್ಧ ಅಮೆರಿಕ ವಿಧಿಸಿರುವ ದಿಗ್ಬಂಧನಗಳನ್ನು ಅವರು ಈ ಮೂಲಕ ಪ್ರಸ್ತಾಪಿಸಿದ್ದಾರೆ.

ಇರಾನ್‌ನಿಂದ ಮಾಡುವ ಪೆಟ್ರೋಲಿಯಂ ಉತ್ಪನ್ನಗಳ ಆಮದನ್ನು ಎಲ್ಲ ದೇಶಗಳು ನವೆಂಬರ್ 4ರ ವೇಳೆಗೆ ‘ಸಾಧ್ಯವಿರುವಷ್ಟು ಶೂನ್ಯ’ಕ್ಕೆ ಇಳಿಸಬೇಕು ಎಂಬುದಾಗಿ ಅಮೆರಿಕ ಬಯಸುತ್ತದೆ ಎಂಬುದಾಗಿಯೂ ಅವರು ಈ ಸಂದರ್ಭದಲ್ಲಿ ನುಡಿದರು.

ಮಾನಸಿಕ ಯುದ್ಧಕ್ಕೆ ಸಮ: ಇರಾನ್ ಕಮಾಂಡರ್

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್ ವಿರುದ್ಧ ಹಾಕಿರುವ ಬೆದರಿಕೆಯು ‘ಮಾನಸಿಕ ಯುದ್ಧ’ಕ್ಕೆ ಸಮವಾಗಿದೆ ಹಾಗೂ ತನ್ನ ಶತ್ರುಗಳ ವಿರುದ್ಧದ ಹೋರಾಟವನ್ನು ಇರಾನ್ ಮುಂದುವರಿಸುವುದು ಎಂದು ಇರಾನ್‌ನ ರೆವಲೂಶನರಿ ಗಾರ್ಡ್ಸ್‌ನ ಹಿರಿಯ ಕಮಾಂಡರ್ ಗುಲಾಮ್ ಹುಸೈನ್ ಹೇಳಿದ್ದಾರೆ.

‘‘ನಮ್ಮ ಕ್ರಾಂತಿಕಾರಿ ನಂಬಿಕೆಗಳನ್ನು ನಾವೆಂದೂ ತೊರೆಯುವುದಿಲ್ಲ. ಶತ್ರುಗಳಿಂದ ಎದುರಾಗುವ ಒತ್ತಡವನ್ನು ನಾವು ಪ್ರತಿರೋಧಿಸುತ್ತೇವೆ. ಇರಾನನ್ನು ನಾಶಪಡಿಸುವುದೇ ಅಮೆರಿಕದ ಗುರಿ. ಆದರೆ, ಇರಾನ್‌ಗೆ ಹಾನಿ ತರುವ ಯಾವುದೇ ಕೆಲಸವನ್ನು ಮಾಡಲು ಟ್ರಂಪ್‌ಗೆ ಸಾಧ್ಯವಿಲ್ಲ’’ ಎಂದು ಗುಲಾಮ್ ಹುಸೈನ್ ಹೇಳಿರುವುದಾಗಿ ಇರಾನಿಯನ್ ಸ್ಟೂಡೆಂಟ್ ನ್ಯೂಸ್ ಏಜನ್ಸಿ (ಇಸ್ನ) ವರದಿ ಮಾಡಿದೆ.

ಇನ್ನೊಮ್ಮೆ ನಮಗೆ ಬೆದರಿಕೆ ಹಾಕಬೇಡಿ: ಟ್ರಂಪ್ ಎಚ್ಚರಿಕೆ

ಇರಾನ್ ಅಮೆರಿಕಕ್ಕೆ ಬೆದರಿಕೆ ಹಾಕಿದರೆ, ಇತಿಹಾಸದಲ್ಲಿ ಯಾರೂ ಅನುಭವಿಸದಂಥ ಪರಿಣಾಮವನ್ನು ಅದು ಎದುರಿಸಬೇಕಾಗುತ್ತದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ಚರಿಸಿದ್ದಾರೆ.

‘‘ಇನ್ನೊಮ್ಮೆ ಅಮೆರಿಕಕ್ಕೆ ಬೆದರಿಕೆ ಹಾಕಬೇಡಿ. ನಾವೀಗ ನಿಮ್ಮ ಹಿಂಸೆ ಮತ್ತು ಸಾವಿನ ಬೆದರಿಕೆಗಳನ್ನು ಸಹಿಸಿಕೊಳ್ಳುವ ದೇಶವಲ್ಲ’’ ಎಂದು ಟ್ರಂಪ್ ಟ್ವಿಟರ್‌ನಲ್ಲಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News