ತುಳು ಭಾಷೆಯನ್ನು ಎಂಟನೆ ಪರಿಚ್ಛೇದಕ್ಕೆ ಸೇರಿಸಲು ಪ್ರಾಮಾಣಿಕ ಪ್ರಯತ್ನ: ಜಯಮಾಲ
ಮಂಗಳೂರು, ಜು. 23: ತುಳು ಭಾಷೆಯನ್ನು ಸಂವಿಧಾನದ ಎಂಟನೆ ಪರಿಚ್ಛೇದಕ್ಕೆ ಸೇರಿಸಲು ಪೂರಕವಾಗುವ ಎಲ್ಲಾ ಕೆಲಸವನ್ನು ಪ್ರಾಮಾಣಿಕವಾಗಿ ಮಾಡುತ್ತೇನೆ ಎಂದು ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಜಯಮಾಲ ತಿಳಿಸಿದ್ದಾರೆ.
ರಾಜ್ಯ ಸರಕಾರದ ಸಂಪುಟ ದರ್ಜೆಯ ಸಚಿವೆಯಾಗಿ ಆಯ್ಕೆಯಾದ ಬಳಿಕ ದಕ್ಷಿಣ ಕನ್ನಡ ಜಿಲ್ಲೆಗೆ ಪ್ರಥಮ ಬಾರಿಗೆ ಭೇಟಿ ನೀಡಿರುವ ಅವರು ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಭೇಟಿ ನೀಡಿದ ಸಂದರ್ಭ ಮಾತನಾಡಿದರು.
ಬ್ಯಾರಿ, ಕೊಂಕಣಿ ಸಾಹಿತ್ಯ ಅಕಾಡಮಿಗಳಿಗೆ ಕಟ್ಟಡ ನಿರ್ಮಾಣದ ಬಗ್ಗೆಯೂ ಗಮನಹರಿಸಲಾಗುವುದು. ದಕ್ಷಿಣ ಕನ್ನಡ ಜಿಲ್ಲೆಗೆ ರಂಗ ಮಂದಿರ ಆಗಬೇಕು ಎನ್ನುವ ಬೇಡಿಕೆಯನ್ನು ಆಧ್ಯತೆಯೊಂದಿಗೆ ಪರಿಗಣಿಸಲಾಗುವುದು ಎಂದು ಜಯಮಾಲ ತಿಳಿಸಿದರು.
ಇಂದಿರಾ ಗಾಂಧಿ ಸಶಕ್ತ ಮಹಿಳೆಗೆ ಒಂದು ಮಾದರಿಯಾದವರು: ದೇಶದ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಮಹಾನ್ ನಾಯಕಿ, ಅಲ್ಲದೆ ಓರ್ವ ಸಶಕ್ತ ಮಹಿಳೆ ದೇಶದಲ್ಲಿ ಯಾವ ಎತ್ತರದ ಸ್ಥಾನವನ್ನು ಏರಬಹುದು ಎಂದು ತೋರಿಸಿಕೊಟ್ಟ ಮಹಿಳೆಯಾಗಿದ್ದಾರೆ. ದೇಶದಲ್ಲಿ ಧ್ವನಿ ಇಲ್ಲದ ಮಹಿಳೆಯರ ಧ್ವನಿ ಪೆಟ್ಟಿಗೆಯಾಗಿದ್ದರು. ಅವರ ಮೂಲಕ ಮಹಿಳೆಯರ ಸಶಕ್ತತೆಗೆ ಹಲವು ಯೋಜನೆಗಳು ಜಾರಿಯಾದವು. ಕಳೆದ ಐದು ವರ್ಷಗಳ ಅವಧಿಯಲ್ಲಿ ರಾಜ್ಯದಲ್ಲಿ ಸಿದ್ದರಾಮಯ್ಯನವರ ನೇತೃತ್ವದ ಮೂಲಕ ರಾಜ್ಯದಲ್ಲಿ ಗರಿಷ್ಠ ಪ್ರಮಾಣದ ಯೋಜನೆಗಳು ಜಾರಿಯಾದವು ಎಂದು ಜಯಮಾಲ ತಿಳಿಸಿದ್ದಾರೆ.
ಸೋತು ಗೆದ್ದವರು..:- ಜಿಲ್ಲೆಯ ಪ್ರಮುಖ ನಾಯಕರಿಗೆ ಕಳೆದ ಚುನಾವಣೆಯಲ್ಲಿ ಸೋಲಾಗಿರಬಹುದು ಆದರೆ ಅವರು ತಮ್ಮ ಅಧಿಕಾರಾವಧಿಯಲ್ಲಿ ಮಾಡಿರುವ ಸಾಧನೆಯನ್ನು ಪರಿಗಣಿಸಿದಾಗ ತಮ್ಮ ಹುದ್ದೆಗೆ ನ್ಯಾಯ ಒದಗಿಸಿ ಗೆದ್ದವರು ಆದರೆ ಕಳೆದ ಚುನಾವಣೆಯಲ್ಲಿ ಅವರಿಗೆ ಸೊಲಾಗಿದೆ. ಅದು ಕ್ಷಣಿಕ ಅವರು ಸೋತು ಗೆದ್ದ ನಾಯಕರು ಎಂದು ಜಯಮಾಲ ಜಿಲ್ಲೆಯ ಕಾಂಗ್ರೆಸ್ ಮುಖಂಡರಾದ ರಮಾನಾಥ ರೈ, ಅಭಯ ಚಂದ್ರ ಜೈನ್ ಶಕುಂತಳಾ ಶೆಟ್ಟಿಯವರನ್ನು ಶ್ಲಾಘಿಸಿದರು.
ಜಿಲ್ಲೆಯ ಋಣ ನನ್ನ ಮೇಲಿದೆ:- ದಕ್ಷಿಣ ಕನ್ನಡ ಜಿಲ್ಲೆಯವಲಾದ ನನ್ನ ಮೇಲೆ ಜಿಲ್ಲೆಯ ಋಣ ಇದೆ. ಅದನ್ನು ತೀರಿಸಲು ಸಾಧ್ಯವಿಲ್ಲ. ಅದು ತಾಯಿಯ ಋಣ ಇದ್ದಂತೆ ಸ್ವಲ್ಪ ವಾದರೂ ಕೊಡುಗೆ ನೀಡಲು ಪ್ರಯತ್ನಿಸುತ್ತೇನೆ ಎಂದು ಜಯಮಾಲ ತಿಳಿಸಿದರು.
''ಎನ್ನ ಅಪ್ಪೆಗ್ ತುಳು ಬುಡುಂಡ ಬೇತೆ ಬಾಸೆ ಗೊತ್ತಿಜಾಂಡ್'' :-‘‘ ಎನ್ನ ಅಪ್ಪೆಗ್ ತುಳು ಬುಡುಂಡ ಬೇತೆ ಬಾಸೆ ಗೊತ್ತಿಜಾಂಡ್. ತುಳು ಬಾಸೆನ್ ಮರಪರೆ ಉಂಡಾ ’’(ನನ್ನ ತಾಯಿಗೆ ತುಳು ಭಾಷೆ ಬಿಟ್ಟರೆ ಬೇರೆ ಭಾಷೆ ಬರುತ್ತಿರಲಿಲ್ಲ.ಆ ಭಾಷೆಯನ್ನು ಮರೆಯಲು ಸಾಧ್ಯ ಉಂಟೆ ..?) ಎನ್ನುತ್ತಾ ತುಳು ಭಾಷೆಯ ಬಗ್ಗೆ ಜಯಮಾಲ ಅಭಿಮಾನದಿಂದ ಮಾತನಾಡಿದರು.
ಸಮಾರಂಭದಲ್ಲಿ ಮಾಜಿ ಸಚಿವರಾದ ಬಿ. ರಮಾನಾಥ ರೈ, ಅಭಯ ಚಂದ್ರ ಜೈನ್, ಮಾಜಿ ಶಾಸಕಿ ಶಕುಂತಳಾ ಶೆಟ್ಟಿ, ದ.ಕ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್, ಶಾಸಕ ಐವನ್ ಡಿ ಸೋಜ, ಮಂಗಳೂರು ತಾಲೂಕು ಪಂಚಾಯತ್ ಅಧ್ಯಕ್ಷ ಮುಹಮ್ಮದ್ ಮೋನು, ಪಕ್ಷದ ಇತರ ಮುಖಂಡರಾದ ಸುರೇಶ್ ಬಲ್ಲಾಳ್, ರಾಜಶೇಖರ ಕೋಟ್ಯಾನ್, ಸದಾಶಿವ ಉಳ್ಳಾಲ್, ರಕ್ಷಿತ್,ಪಿ.ವಿ., ಮೋಹನ್, ಎಂ.ಎಸ್.ಮುಹಮ್ಮದ್, ಮಮತಾ ಗಟ್ಟಿ, ಶಾಲೆಟ್ ಪಿಂಟೋ, ತುಳು ಅಕಾಡಮಿಯ ಅಧ್ಯಕ್ಷ ಎ.ಸಿ .ಭಂಡಾರಿ ಮೊದಲಾದವರು ಉಪಸ್ಥಿತರಿದ್ದರು.