ಉಳ್ಳಾಲ: ಸಮುದ್ರದ ಅಲೆಗಳ ಕಾರಣದಿಂದ ರೋಬೋ ಪ್ರಾತ್ಯಕ್ಷಿಕೆ ಮೊಟಕು
ಉಳ್ಳಾಲ, ಜು. 23: ಉಳ್ಳಾಲ ಸಮೀಪದ ಮೊಗವೀರಪಟ್ಣದಲ್ಲಿ ಬೆಂಗಳೂರು ಮೂಲದ ಸಿಟಿ ಕಂಟ್ರೋಲ್ ಟೆಕ್ನಾಲಜಿ (ಇಂಡಿಯಾ) ಪ್ರೈ. ಲಿ ಇವರು ರಚಿಸಿದ ರೋಬೊ ಕೋಸ್ಟಲ್ ಅಬ್ಸರ್ವರ್ ( ರೋಬೊ ಕರಾವಳಿ ವೀಕ್ಷಕ ) ಮತ್ತು ರೋಬೊ ಲೈಫ್ ಸೇವರ್ ( ರೋಬೊ ಜೀವರಕ್ಷಕ) ಇದರ ಪ್ರಾತ್ಯಕ್ಷಿಕೆಯನ್ನು ಸೋಮವಾರ ಸಂಜೆ ನಡೆಸಲು ತೀರ್ಮಾನಿಸಲಾಗಿದ್ದರೂ ಸಮುದ್ರದ ಅಲೆಗಳ ಕಾರಣದಿಂದ ಮೊಟಕುಗೊಳಿಸಲಾಗಿದ್ದು, ಮಂಗಳವಾರದಂದು ಸುಲ್ತಾನ್ ಬತ್ತೇರಿಯಲ್ಲಿ ಮತ್ತೆ ಬೋಟಿನ ಮುಖೇನ ಸಮುದ್ರಕ್ಕೆ ಇಳಿಸಿ ಪ್ರಾತ್ಯಕ್ಷಿಕೆಯನ್ನು ನಡೆಸಲು ಸಂಸ್ಥೆಯವರು ತೀರ್ಮಾನಿಸಿದ್ದಾರೆ.
ಜಿಲ್ಲಾಡಳಿತದ ನಿರ್ದೇಶನದಂತೆ ಗೃಹರಕ್ಷಕ ದಳ, ಪ್ರವಾಸೋದ್ಯಮ, ಅಗ್ನಿ ಶಾಮಕ ದಳ, ಕರಾವಳಿ ಕಾವಲು ಪಡೆಯ ಉಪಸ್ಥಿತಿಯಲ್ಲಿ ಸಮುದ್ರ ಪಾಲಾದ ವರನ್ನು ದಡದಿಂದಲೇ ರಿಮೋಟ್ ಮುಖೇನ ನಿಯಂತ್ರಿಸಿ ಅಪಾಯದಲ್ಲಿರುವವರನ್ನು ರೋಬೊ ಲೈಫ್ ಸೇವರ್ ( ರೋಬೊ ಜೀವರಕ್ಷಕ) ಉಪಕರಣದ ಮೂಲಕ ರಕ್ಷಿಸಬಹುದಾಂತಹ ತಂತ್ರಜ್ಞಾನದ ಪ್ರಾತ್ಯಕ್ಷಿಕೆಯನ್ನು. ಉಳ್ಳಾಲದ ಮೊಗವೀರಪಟ್ನ ಸಮುದ್ರ ತೀರದಲ್ಲಿ ನಡೆಸಲು ಶಿವಾಜಿ ಜೀವರಕ್ಷಕ ಸಂಘದ ಈಜುಗಾರರ ಸಹಾಯದೊಂದಿಗೆ ನಡೆಸಲು ಮುಂದಾದಾಗ ಸಮುದ್ರದ ಅಲೆಗಳಿಂದ ತೊಂದರೆಯಾದಾಗ ಪ್ರಾತ್ಯಕ್ಷಿಕೆಯನ್ನು ಮೊಟಕುಗೊಳಿಸಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಿಟಿ ಕಂಟ್ರೋಲ್ ಟೆಕ್ನಾಲಜಿ (ಇಂಡಿಯಾ) ಪ್ರೈ. ಲಿ ಇದರ ನಿರ್ದೇಶಕ ಸುಮಂತ್ ಪ್ರತಿಕ್ರಿಯಿಸಿ ರೋಬೋವನ್ನು ಬೋಟಿನ ಮುಖೇನ ಸಮುದ್ರಕ್ಕೆ ಇಳಿಸಬೇಕಿದೆ. ಸದ್ಯ ಮಳೆಗಾಲದ ಸಮಯವಾಗಿರುವುದರಿಂದ ಇಳಿಸಲು ಅಸಾಧ್ಯವಾಗಿದೆ. ಚೆನ್ನೈನಲ್ಲಿ ಬೋಟಿನ ಮುಖೇನ ಸಮುದ್ರಕ್ಕೆ ಇಳಿಸಿ ರಕ್ಷಣಾ ಕಾರ್ಯಾಚರಣೆ ನಡೆಸುವ ಮೂಲಕ ಪರೀಕ್ಷಾರ್ಥ ಪ್ರಯೋಗ ಯಶಸ್ವಿಯಾಗಿ ನಡೆಸಲಾಗಿದೆ ಎಂದರು.
ಈ ಸಂದರ್ಭ ಜಿಲ್ಲಾ ವಿಪತ್ತು ನಿರ್ವಹಣಾ ಅಧಿಕಾರಿ ವಿಜಯಕುಮಾರ್, ಕರಾವಳಿ ಕಾವಲು ಪಡೆ ನಿರೀಕ್ಷಕ ಗಂಗೀರೆಡ್ಡಿ, ಅಗ್ನಿ ಶಾಮಕ ದಳ ಮುಖ್ಯ ಅಧಿಕಾರಿ ಶಿವಶಂಕರ್ , ಗೃಹರಕ್ಷಕದ ದಳದ ಕಮಾಂಡೆಂಟ್ ಡಾ ಮುರಳೀ ಮೋಹನ್ ಚೂಂತಾರು, ಉಪಕಮಾಂಡೆಂಟ್ ರಮೇಶ್ ಕುಮಾರ್ , ಕಂಪೆನಿಯ ಪ್ರಾಜೆಕ್ಟ್ ಮೆನೇಜರ್ ಪ್ರಸೂಲ್, ಇಂಜಿನಿಯರುಗಳಾದ ಜಾಸೀರ್, ಅಭಿಷೇಕ್ ಮೊದಲಾದವರು ಉಪಸ್ಥಿತರಿದ್ದರು.