ಪೊಲೀಸ್ ಕಸ್ಟಡಿಯಲ್ಲಿ ಅಕ್ಬರ್ ಸಾವು ಎಂದ ರಾಜಸ್ಥಾನ ಗೃಹಸಚಿವ
ಜೈಪುರ, ಜು.24: ಶುಕ್ರವಾರ ನಕಲಿ ಗೋರಕ್ಷಕರಿಂದ ದಾಳಿಗೊಳಗಾಗಿದ್ದ ಅಕ್ಬರ್ ಖಾನ್ ಮೃತಪಟ್ಟಿದ್ದು ಪೊಲೀಸ್ ಕಸ್ಟಡಿಯಲ್ಲಿ ಎಂದು ರಾಜಸ್ಥಾನದ ಗೃಹಸಚಿವರು ಹೇಳಿದ್ದಾರೆ.
"ಇದು ಕಸ್ಟಡಿ ಸಾವು ಎಂದು ನಾವು ಕಲೆಹಾಕಿದ ಸಾಕ್ಷಿಗಳು ತಿಳಿಸುತ್ತವೆ. ಅವರು ವ್ಯರ್ಥ ಮಾಡಿದ ಸಮಯವೇ ಸಾವಿಗೆ ಕಾರಣ" ಎಂದು ಗೃಹಸಚಿವ ಗುಲಾಬ್ ಚಾಂದ್ ಕಟಾರಿಯಾ ಹೇಳಿದ್ದಾರೆ.
"ಗೋವುಗಳನ್ನು ಮೊದಲು ಗೋಶಾಲೆಗೆ ಸಾಗಿಸುವ ಕೆಲಸವನ್ನು ಪೊಲೀಸರು ಮಾಡಿದ್ದರು ಎನ್ನುವುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಅವರು ಅದನ್ನು ಮಾಡಬಾರದಿತ್ತು" ಎಂದು ಚಾಂದ್ ಹೇಳಿದ್ದಾರೆ.
ಹಾಲು ಮಾರಾಟಕ್ಕಾಗಿ ಎರಡು ಹಸುಗಳನ್ನು ಖರೀದಿಸಿದ್ದ ಅಕ್ಬರ್ ಖಾನ್ ಹಾಗು ಸ್ನೇಹಿತ ಅಸ್ಲಂ ಮನೆಗೆ ಹಿಂದಿರುಗುತ್ತಿದ್ದಾಗ ನಕಲಿ ಗೋರಕ್ಷಕರು ದಾಳಿ ನಡೆಸಿದ್ದರು. ಗಂಭೀರವಾಗಿ ಗಾಯಗೊಂಡಿದ್ದ ಅಕ್ಬರ್ ಆಸ್ಪತ್ರೆಗೆ ಸಾಗಿಸುವ ಮೊದಲೇ ಮೃತಪಟ್ಟಿದ್ದರು. ಆದರೆ ಅಕ್ಬರ್ ರನ್ನು ಆಸ್ಪತ್ರೆಗೆ ದಾಖಲಿಸುವಲ್ಲಿ ಪೊಲೀಸರು ನಿರ್ಲಕ್ಷ್ಯ ವಹಿಸಿದ್ದರು ಎನ್ನುವ ಆರೋಪಗಳೂ ಕೇಳಿಬಂದಿತ್ತು.