ಅಂಗನವಾಡಿಗಳಲ್ಲಿ ಸ್ವಚ್ಛತೆ, ಪೌಷ್ಠಿಕ ಆಹಾರ ನೀಡುವ ಬಗ್ಗೆ ಗಮನಹರಿಸಿ: ಸಚಿವೆ ಜಯಮಾಲ
ಮಂಗಳೂರು, ಜು. 24: ಅಂಗನವಾಡಿಗಳಲ್ಲಿ ಸ್ವಚ್ಛತೆ, ಪೌಷ್ಠಿಕ ಆಹಾರ ನೀಡುವ ಬಗ್ಗೆ ಗಮನಹರಿಸುವಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲ ಚೇತನರ ಮತ್ತು ಹಿರಿಯ ನಾಗರೀಕರ ಸಬಲೀಕರಣ ಇಲಾಖೆ ಹಾಗೂ ಕನ್ನಡ ಮತ್ತು ಸಂಸ್ಕತಿ ಇಲಾಖೆಯ ಸಚಿವೆ ಡಾ.ಜಯಮಾಲ ತಿಳಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯನ್ನುದ್ದೇಶಿಸಿ ಮಾತನಾಡುತ್ತಿದ್ದರು. ಅಂಗನವಾಡಿ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳನ್ನು ತುಂಬಲು ಕ್ರಮ ಕೈಗೊಳ್ಳಲು ಸಚಿವೆ ಸೂಚಿಸಿದ್ದಾರೆ. ಸಹಾಯಕಿಯರ ಹುದ್ದೆಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಆಗುತ್ತಿರುವ ಸಮಸ್ಯೆ ಬಗ್ಗೆ ಸಭೆಯಲ್ಲಿ ಗಮನಕ್ಕೆ ತಂದು ಸಮಸ್ಯೆ ಪರಿಹರಿಸಲು ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ. ಮಾತೃ ಪೂರ್ಣ ಯೋಜನೆ ಸರಕಾರದ ಮಹತ್ವದ ಯೋಜನೆಯಾಗಿದೆ. ಅದರ ಬಗ್ಗೆ ಮಹಿಳೆಯರಿಗೆ ಮನವರಿಕೆ ಮಾಡಬೇಕಾಗಿದೆ ಎಂದು ಸಚಿವೆ ಕರೆ ನೀಡಿದ್ದಾರೆ.
ಮಕ್ಕಳನ್ನು ಎಸೆಯಬೇಡಿ ಮಡಿಲು ಯೋಜನೆ ಮೂಲಕ ಮಕ್ಕಳ ರಕ್ಷಣೆಗೆ ಕ್ರಮ ಕೈಗೊಳ್ಳಬೇಕು. ದತ್ತು ಮಕ್ಕಳು ಸಾಯದಂತೆ ಸೂಕ್ತ ಚಿಕಿತ್ಸೆ ನೀಡಲು ಕ್ರಮಕೈಗೊಳ್ಳಬೇಕು ಎಂದು ಸಚಿವೆ ತಿಳಿಸಿದ್ದಾರೆ.
ಲಿಂಗತ್ವ ಅಲ್ಪಸಂಖ್ಯಾತರು ಸಮಾಜದಲ್ಲಿ ಎಲ್ಲರ ಜೊತೆ ಬದುಕಲು ಅವಕಾಶ ಕಲ್ಪಿಸಿಕೊಡಬೇಕು. ಅವರಿಗೆ ಉದ್ಯೋಗ, ವಸತಿ ನೀಡಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ರಾಜ್ಯದಲ್ಲಿ ವಿಕಲಚೇತನರಿಗೆ ಸುಸಜ್ಜಿತ ಕೇಂದ್ರ ನಿರ್ಮಾಣವಾಗಲಿದೆ. ಇದೇ ರೀತಿಯ ಕೇಂದ್ರವನ್ನು ಜಿಲ್ಲೆಯಲ್ಲಿ ನಿರ್ಮಾಣ ಮಾಡುವ ಬಗ್ಗೆ ಚಿಂತನೆ ಇದೆ. ಅಂಗನವಾಡಿಗಳಲ್ಲಿ ಬಯೋಮೆಟ್ರಿಕ್ ಅಳವಡಿಸಿ ಮಕ್ಕಳ ಬಗ್ಗೆ ಹೆಚ್ಚಿನ ಗಮನ ಹರಿಸುವಂತೆ ಮಾಡಲಾಗುವುದು ಎಂದು ಜಯಮಾಲ ತಿಳಿಸಿದ್ದಾರೆ.