×
Ad

ಪ್ರಧಾನಿ ಹುದ್ದೆಗೆ ಸ್ಪರ್ಧೆಯಲ್ಲಿ ರಾಹುಲ್ ಗಾಂಧಿ ಮಾತ್ರವಲ್ಲ,ಇತರರೂ ಇದ್ದಾರೆ:ತೇಜಸ್ವಿ ಯಾದವ್

Update: 2018-07-24 19:53 IST

ಪಾಟ್ನಾ,ಜು.24: ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರೊಬ್ಬರೇ ಪ್ರತಿಪಕ್ಷದ ವತಿಯಿಂದ ಪ್ರಧಾನಿ ಹುದ್ದೆಗೆ ಸ್ಪರ್ಧೆಯಲ್ಲಿರುವ ನಾಯಕರಲ್ಲ ಎಂದು ಆರ್‌ಜೆಡಿ ನಾಯಕ ಹಾಗೂ ಬಿಹಾರದ ಮಾಜಿ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್ ಅವರು ಮಂಗಳವಾರ ಇಲ್ಲಿ ತಿಳಿಸಿದರು.

 ಪ್ರಧಾನಿ ಹುದ್ದೆಗೆ ಅಭ್ಯರ್ಥಿಯನ್ನು ನಿರ್ಧರಿಸಲು ಎಲ್ಲ ಪ್ರತಿಪಕ್ಷಗಳು ಒಂದಾಗಿ ಚರ್ಚಿಸಲಿವೆ. ರಾಹುಲ್ ಗಾಂಧಿ ಅವರೊಬ್ಬರೇ ಸ್ಪರ್ಧೆಯಲ್ಲಿರುವ ನಾಯಕರಲ್ಲ ಎಂದ ಅವರು,ಪ.ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು,ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ ಮತ್ತು ಬಿಎಸ್‌ಪಿ ನಾಯಕಿ ಮಾಯಾವತಿ ಅವರಂತಹ ಇತರ ಪ್ರತಿಪಕ್ಷ ನಾಯಕರೂ ಇದ್ದಾರೆ ಎಂದರು.

ಸಂಯುಕ್ತ ಪ್ರತಿಪಕ್ಷವು ಪ್ರಧಾನಿ ಹುದ್ದೆಗೆ ಅಭ್ಯರ್ಥಿಯಾಗಿ ಹೆಸರಿಸುವ ಯಾವುದೇ ನಾಯಕನನ್ನು ತನ್ನ ಪಕ್ಷವು ಬೆಂಬಲಿಸುತ್ತದೆ ಎಂದು ತೇಜಸ್ವಿ ಸ್ಪಷ್ಟಪಡಿಸಿದರು.

ಪ್ರತಿಪಕ್ಷಗಳು ಸಂವಿಧಾನವನ್ನು ರಕ್ಷಿಸುವ ನಾಯಕನನ್ನು ಹೆಸರಿಸಬೇಕು ಎನ್ನ್ನುವುದು ನಮ್ಮ ಮುಖ್ಯ ಕಾಳಜಿಯಾಗಿದೆ. ರಾಹುಲ್ ಅವರು ಆ ನಾಯಕನಾಗಿರಬಹುದು. ಪ್ರಬಲ ಮಹಾ ಮೈತ್ರಿಕೂಟವನ್ನು ರಚಿಸಲು ರಾಹುಲ್ ಅವರು ಇತರ ಎಲ್ಲ ಬಿಜೆಪಿಯೇತರ ಪಕ್ಷಗಳನ್ನು ಒಗ್ಗೂಡಿಸಬೇಕಾಗಿದೆ ಎಂದ ಅವರು, ಕಾಂಗ್ರೆಸ್ ಭಾರತದಾದ್ಯಂತ ಅಸ್ತಿತ್ವ ಹೊಂದಿದೆ ಎಂದರು.

ಪ್ರಧಾನಿ ಹುದ್ದೆಯು ಒಂದು ಸಮಸ್ಯೆಯಲ್ಲ,ದೇಶವನ್ನು ಕಾಡುತ್ತಿರುವ ಹಲವಾರು ನಿಜವಾದ ಸಮಸ್ಯೆಗಳಿವೆ ಎಂದು ತೇಜಸ್ವಿ ನುಡಿದರು. ಆರ್‌ಜೆಡಿ ಬಿಹಾರದಲ್ಲಿ ಕಾಂಗ್ರೆಸ್‌ನ ಪ್ರಮುಖ ಮಿತ್ರಪಕ್ಷವಾಗಿದ್ದು,ಲಾಲು ಪ್ರಸಾದ್ ಯಾದವ್ ಮತ್ತು ತೇಜಸ್ವಿ ಸದಾ ಅದನ್ನು ಬಲವಾಗಿ ಬೆಂಬಲಿಸಿಕೊಂಡು ಬಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News