×
Ad

ಐದು ತಂಡಗಳಿಂದ ತನಿಖೆ, ಯಾರನ್ನು ಬಂಧಿಸಿಲ್ಲ: ಐಜಿಪಿ ಚಕ್ರವರ್ತಿ

Update: 2018-07-24 19:55 IST

ಉಡುಪಿ, ಜು. 24: ಶಿರೂರು ಮಠಾಧೀಶ ಶ್ರೀ ಲಕ್ಷ್ಮೀವರ ತೀರ್ಥ ಸ್ವಾಮೀಜಿಯ ನಿಗೂಢ ಸಾವಿನ ಪ್ರಕರಣಕ್ಕೆ ಸಂಬಂಧಿಸಿ ಈಗಾಗಲೇ ಐದು ಪೊಲೀಸ್ ತಂಡಗಳನ್ನು ರಚಿಸಿ ತನಿಖೆ ನಡೆಸಲಾಗುತ್ತಿದೆ. ಈ ಸಂಬಂಧ ಈವರೆಗೆ ಯಾರನ್ನು ಕೂಡ ಬಂಧಿಸಿಲ್ಲ ಎಂದು ಮಂಗಳೂರು ಪಶ್ಚಿಮ ವಲಯ ಐಜಿಪಿ ಅರುಣ್ ಚಕ್ರವರ್ತಿ ತಿಳಿಸಿದ್ದಾರೆ.

ಉಡುಪಿ ಎಸ್ಪಿ ಕಚೇರಿಯಲ್ಲಿಂದು ಪ್ರಕರಣದ ತನಿಖೆಯ ಪ್ರಗತಿ ಕುರಿತು ಪರಿಶೀಲನೆ ಸಭೆ ನಡೆಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡುತಿ ದ್ದರು. ಪ್ರಕರಣದ ತನಿಖೆ ಮುಂದುವರಿಯುತ್ತಿದ್ದು, ಇದರ ಪ್ರಗತಿ ಪರಿಶೀಲನೆ ಮಾಡಲು ನಾನು ಬಂದಿದ್ದೇನೆ. ಶಿರೂರು ಮೂಲ ಮಠಕ್ಕೆ ಈ ಹಿಂದೆ ಒಂದು ಬಾರಿ ಭೇಟಿ ನೀಡಿದ್ದು, ಇದೀಗ ಮತ್ತೊಮ್ಮೆ  ಭೇಟಿ ನೀಡುತ್ತಿದ್ದೇನೆ ಎಂದರು.

ಮಾಧ್ಯಮಗಳಲ್ಲಿ ಬರುವ ವರದಿಗಳಲ್ಲಿ ಯಾವುದು ಊಹಾಪೋಹ ಮತ್ತು ಅದರಲ್ಲಿ ಯಾವುದನ್ನು ತಳ್ಳಿ ಹಾಕುತ್ತೀರಿ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ನಿಮಗೇ ಗೊತ್ತು ಅದರಲ್ಲಿ ಯಾವುದು ಊಹಾಪೋಹ ಮತ್ತು ಯಾವುದು ಸತ್ಯ ಎಂಬುದು. ಈ ಪ್ರಕರಣದಲ್ಲಿ ಈವರೆಗೆ ಯಾರನ್ನು ಬಂಧಿಸಿಲ್ಲ, ತನಿಖೆ ನಡೆಯುತ್ತಿದೆ ಎಂದಷ್ಟೇ ಹೇಳಿದರು.

ಶಿರೂರು ಮೂಲ ಮಠದಲ್ಲಿರುವ ಸಿಸಿಟಿವಿ ಫೂಟೇಜ್ ಬಗ್ಗೆ ಕೇಳಿದ ಪ್ರಶ್ನೆಗೆ, ಸಿಸಿಟಿವಿ ಸೇರಿದಂತೆ ಎಲ್ಲ ವಿಚಾರಗಳ ಬಗ್ಗೆಯೂ ತನಿಖೆ ನಡೆಯುತ್ತದೆ. ತನಿಖೆ ಯಾವ ಹಂತದಲ್ಲಿ ಇದೆ ಎಂದು ಪರಿಶೀಲನೆ ಮಾಡುತ್ತಿದ್ದೇನೆ ಎಂದರು. ಮರಣೋತ್ತರ ಪರೀಕ್ಷೆ ಹಾಗೂ ವಿಧಿ ವಿಜ್ಞಾನ ಪ್ರಯೋಗಾಲಯದ ವರದಿಗಳು ಯಾವಾಗ ಪೊಲೀಸರ ಕೈ ಸೇರಲಿದೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಐಜಿಪಿ, ಆ ವರದಿಗಳು ಬಂದ ಬಳಿಕ ಅವುಗಳ ಕುರಿತು ಮಾಹಿತಿ ನೀಡುತ್ತೇವೆ ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News