ರಾಹುಲ್ ಅಪ್ಪುಗೆಯನ್ನು ಪ್ರೀತಿ ಮತ್ತು ಘನತೆಯಿಂದ ಸ್ವೀಕರಿಸಿ
ಹೊಸದಿಲ್ಲಿ,ಜು.24: “ಪ್ರೀತಿಯ ಅಪ್ಪುಗೆಯಲ್ಲಿ ಅಷ್ಟೊಂದು ದೊಡ್ಡ ರಂಪ ಮಾಡುವುದೇನಿದೆ” ಎಂದು ಬಿಜೆಪಿ ಸಂಸದ ಶತ್ರುಘ್ನ ಸಿನ್ಹಾ ಅವರು ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಮಂಗಳವಾರ ನಡೆಸಿರುವ ಟ್ವಿಟರ್ ದಾಳಿಯಲ್ಲಿ ಅಚ್ಚರಿಯನ್ನು ವ್ಯಕ್ತಪಡಿಸಿದ್ದಾರೆ.
ಕಳೆದ ಶುಕ್ರವಾರ ಲೋಕಸಭೆಯಲ್ಲಿ ಅವಿಶ್ವಾಸ ನಿರ್ಣಯದ ಮೇಲಿನ ಚರ್ಚೆಯ ಸಂದರ್ಭ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ತನ್ನನ್ನು ದಿಢೀರ್ ಆಗಿ ಅಪ್ಪಿಕೊಂಡಿದ್ದಕ್ಕೆ ಮೋದಿಯವರ ಪ್ರತಿಕ್ರಿಯೆಯನ್ನು ಸಿನ್ಹಾ ತನ್ನ ಟ್ವಿಟರ್ ಪೋಸ್ಟ್‌ನಲ್ಲಿ ಟೀಕಿಸಿದ್ದಾರೆ.
ರಾಹುಲ್ ಅವರ ನಡೆಯನ್ನು ಪ್ರಶಂಸನೀಯ ಎಂದಿರುವ ಸಿನ್ಹಾ,ಅದನ್ನು ಪ್ರೀತಿ ಮತ್ತು ಘನತೆಯಿಂದ ಒಪ್ಪಿಕೊಳ್ಳುವಂತೆ ಮೋದಿ ಅವರಿಗೆ ಕಿವಿಮಾತು ಹೇಳಿದ್ದಾರೆ.
ವಿದೇಶಿ ಗಣ್ಯರನ್ನು ಅಪ್ಪಿಕೊಂಡು ಸ್ವಾಗತಿಸುವುದು ಪ್ರಧಾನಿಯವರ ಟ್ರೇಡ್ ಮಾರ್ಕ್ ಆಗಿದೆ. ರಾಹುಲ್ ಅದನ್ನೇ ಮಾಡಿದ್ದಾರೆ. ಅದರಲ್ಲಿ ತಪ್ಪೇನಿದೆ ಎಂದು ಸಿನ್ಹಾ ಪ್ರಶ್ನಿಸಿದ್ದಾರೆ.
ರಾಹುಲ್ ತನ್ನನ್ನು ಅಪ್ಪಿಕೊಂಡಿದ್ದರ ಬಗ್ಗೆ ಸದನದಲ್ಲಿ ಅಣಕವಾಡಿದ್ದ ಮೋದಿ,ಪ್ರಧಾನಿ ಹುದ್ದೆಗೇರಲು ಅವರಿಗೇಕಿಷ್ಟು ಅವಸರ ಎಂದು ಗೇಲಿ ಮಾಡಿದ್ದರು. ಮರುದಿನ ಬಹಿರಂಗ ಸಭೆಯೊಂದರಲ್ಲಿಯೂ ಅವರು ರಾಹುಲ್ ವರ್ತನೆಯನ್ನು ಟೀಕಿಸಿದ್ದರು.