×
Ad

ಶಿರೂರು ಮೂಲಮಠಕ್ಕೆ ಉಸ್ತುವಾರಿ ನೇಮಕ: ನಾಲ್ವರಿಗೆ ಮಾತ್ರ ಪ್ರವೇಶ

Update: 2018-07-24 20:08 IST
ಸುಬ್ರಹ್ಮಣ್ಯ ಭಟ್

ಉಡುಪಿ, ಜು.24: ಶಿರೂರು ಶ್ರೀಲಕ್ಷ್ಮೀವರ ತೀರ್ಥ ಸ್ವಾಮೀಜಿಯ ಸಾವಿನ ಹಿನ್ನೆಲೆಯಲ್ಲಿ ಹಿರಿಯಡ್ಕ ಸಮೀಪದ ಶಿರೂರು ಮೂಲ ಮಠಕ್ಕೆ ಸೋದೆ ಮಠಾ ಧೀಶ ಶ್ರೀ ವಿಶ್ವವಲ್ಲಭ ತೀರ್ಥ ಸ್ವಾಮೀಜಿ, ಮಠದ ಮಾಜಿ ಮ್ಯಾನೇಜರ್ ಸುಬ್ರಹ್ಮಣ್ಯ ಭಟ್ ಅವರನ್ನು ಉಸ್ತುವಾರಿಯಾಗಿ ನೇಮಕ ಮಾಡಿದ್ದಾರೆ.

ಜು.20ರಂದು ಮೂಲ ಮಠಕ್ಕೆ ಉಸ್ತುವಾರಿಯನ್ನು ಸೋದೆ ಸ್ವಾಮೀಜಿ ನೇಮಕ ಮಾಡಿದ್ದಾರೆ. ಇದೀಗ ಪ್ರತಿದಿನ ಬೆಳಗ್ಗೆ 7ಗಂಟೆಯಿಂದ 9ಗಂಟೆವರೆಗೆ ಹಾಗೂ ಸಂಜೆ ಐದು ಗಂಟೆಯಿಂದ ಆರು ಗಂಟೆಯವರೆಗೆ ಮೂಲ ಮಠದ ದೇವರಾದ ವಿಠಲ ಮತ್ತು ಪಟ್ಟಾಭಿರಾಮ, ಗ್ರಾಮ ದೇವರು ಹಾಗೂ ಪ್ರಧಾನ ದೇವರಾದ ಮುಖ್ಯ ಪ್ರಾಣನಿಗೆ ಇವರ ಮುಂದಾಳತ್ವದಲ್ಲೇ ನಿತ್ಯರಂಗ ಪೂಜೆ ನಡೆಯುತ್ತಿದೆ. ಪೂಜೆಗಾಗಿ ಸ್ಥಳೀಯ ಇಬ್ಬರು ಅರ್ಚಕರನ್ನು ನಿಯೋಜಿಸಲಾಗಿದೆ.

ಮೂಲ ಮಠ ಪೊಲೀಸ್ ಸುಪರ್ದಿಯಲ್ಲಿರುವುದರಿಂದ ಮಠದೊಳಗೆ ಹೋಗುವ ಅರ್ಚಕರು, ಉಸ್ತುವಾರಿ ಹಾಗೂ ಕೆಲಸದವರು ಪ್ರತ್ಯೇಕವಾಗಿ ಇರಿಸಲಾದ ರಿಜಿಸ್ಟ್ರಾರ್ ಬುಕ್‌ನಲ್ಲಿ ಸಹಿ ಮಾಡಬೇಕಾಗಿದೆ. ಅಲ್ಲದೆ ಹೋಗಿ ಬರುವ ಸಮಯವನ್ನು ಕೂಡ ಕಡ್ಡಾಯವಾಗಿ ನಮೂದಿಸಬೇಕಾಗಿದೆ.

ಶಿರೂರು ಮೂಲ ಮಠವು ಒಟ್ಟು ಸುಮಾರು 2200 ಎಕರೆ ಜಾಗವನ್ನು ವಿವಿಧೆಡೆಗಳಲ್ಲಿ ಹೊಂದಿದ್ದು, ಇವುಗಳಲ್ಲಿ ಹೆಚ್ಚಿನ ಭೂಮಿಗಳಿಗೆ ಯಾವುದೇ ದಾಖಲೆ ಹಾಗೂ ಸಾಕ್ಷಿ ಇಲ್ಲವಾಗಿದೆ. ಇವುಗಳು ಬಹಳಷ್ಟು ಇತರರ ಪಾಲಾಗಿವೆ. ಸದ್ಯ ಇರುವ ಆಸ್ತಿಪಾಸಿಗಳ ಗುರುತಿಸುವ ಕಾರ್ಯ ಇನ್ನು ಮಾಡಬೇಕಾಗಿದೆ. ಶಿರೂರು ಮೂಲ ಮಠದಲ್ಲಿ ನಡೆಯುವ ವಿಶೇಷ ರಂಗಪೂಜೆಗೆ 500 ಕ್ಕೂ ಅಧಿಕ ಭಕ್ತರು ಆಗಮಿಸುತ್ತಿದ್ದರು.

ಶಿರೂರು ಸ್ವಾಮೀಜಿ ಮೂಲ ಮಠದಲ್ಲಿ ಗೋವು ಕೇಂದ್ರವನ್ನು ಸ್ಥಾಪಿಸಿದ್ದು, ಆರಂಭದಲ್ಲಿ 50 ಇದ್ದ ಜಾನುವಾರುಗಳ ಸಂಖ್ಯೆ ಈಗ 125ಕ್ಕೆ ಏರಿಕೆಯಾಗಿದೆ. ಅದನ್ನು ನಿರ್ವಹಣೆ ಮಾಡುವುದು ಕಷ್ಟವಾಗಿದೆ. ಪ್ರತಿದಿನ 2000 ರೂ.ವರೆಗೆ ವೆಚ್ಚ ತಗಲುತ್ತದೆ. ಮಠದ ಹೊರಭಾಗದ ಕೆಲವು ಕಡೆ ಗೋಡೆಗೆ ನೀರು ಬೀಳು ತ್ತಿದ್ದು, ಅವುಗಳ ದುರಸ್ತಿ ಕಾರ್ಯವನ್ನು ಮಾಡಲಾಗುತ್ತಿದೆ ಎಂದು ಮಠದ ಉಸ್ತುವಾರಿ ಸುಬ್ರಹ್ಮಣ್ಯ ಭಟ್ ತಿಳಿಸಿದ್ದಾರೆ.

ಶಿರೂರು ಮಠದ ದ್ವಂದ್ವ ಮಠವಾಗಿರುವ ಸೋದೆ ಮಠಾಧೀಶರ ಆದೇಶ ದಂತೆ ನಾನು ಮೂಲ ಮಠದ ಉಸ್ತುವಾರಿಯನ್ನು ವಹಿಸಿಕೊಂಡಿ ದ್ದೇನೆ. ಸ್ವಾಮೀಜಿಯ ಸಾವು ಸಂಶಯಾಸ್ಪದವಾಗಿರುವುದರಿಂದ ಮಠದ ಸುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿದೆ. ಪ್ರತಿದಿನ ಇಬ್ಬರು ಅರ್ಚಕರು, ಒಬ್ಬ ಸಿಬ್ಬಂದಿ, ಒಬ್ಬ ಶುದ್ಧದವರು ಮಾತ್ರ ಒಳಗೆ ಹೋಗಲು ಪ್ರವೇಶ ಕಲ್ಪಿಸಲಾಗಿದೆ. ಒಳಗೆ ಹೊರಗೆ ಹೋಗುವಾಗ ಪುಸ್ತಕಕ್ಕೆ ಸಹಿ ಹಾಕಬೇಕು. ಬೆಳಗ್ಗೆ ಮತ್ತು ಸಂಜೆ ಪೂಜೆಗೆ ಅವಕಾಶ ನೀಡಲಾಗಿದೆ. ಹಿಂದೆ ನಡೆಯುತ್ತಿದ್ದ ರೀತಿಯಲ್ಲಿ ಪೂಜೆಯನ್ನು ಸಮಪರ್ಕವಾಗಿ ಮುನ್ನಡೆಸಿಕೊಂಡು ಹೋಗುವ ಜವಾಬ್ದಾರಿ ನಮ್ಮ ಮೇಲಿದೆ. ಪೊಲೀಸ್ ಇಲಾಖೆಯವರು ಉತ್ತಮ ರೀತಿಯಲ್ಲಿ ಸಹಕಾರ ನೀಡುತ್ತಿದ್ದಾರೆ.

-ಸುಬ್ರಹ್ಮಣ್ಯ ಭಟ್, ಉಸ್ತುವಾರಿಗಳು, ಶಿರೂರು ಮೂಲಮಠ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News