ಕಾಡ್ಗಿಚ್ಚಿನಿಂದ ರಕ್ಷಿಸಿಕೊಳ್ಳಲು ಸಮುದ್ರಕ್ಕೆ ಜಿಗಿದರು!
ಅಥೆನ್ಸ್ (ಗ್ರೀಸ್), ಜು. 24: ಗ್ರೀಸ್‌ನಲ್ಲಿ ಕಾಣಿಸಿಕೊಂಡಿರುವ ಸರಣಿ ಕಾಡ್ಗಿಚ್ಚಿನಲ್ಲಿ ಮೃತಪಟ್ಟವರ ಸಂಖ್ಯೆ ಮಂಗಳವಾರ 50ಕ್ಕೆ ಏರಿದೆ.
ಇದಕ್ಕೂ ಮುನ್ನ, ರಾಜಧಾನಿ ಅಥೆನ್ಸ್ ವಲಯದಲ್ಲಿ ಕಾಡ್ಗಿಚ್ಚಿನಿಂದಾಗಿ 24 ಮಂದಿ ಮೃತಪಟ್ಟಿದ್ದಾರೆ ಹಾಗೂ 150ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ ಎಂಬುದಾಗಿ ಅಧಿಕಾರಿಗಳು ಘೋಷಿಸಿದ್ದರು. ಬಳಿಕ, ಅಥೆನ್ಸ್‌ನಿಂದ 29 ಕಿ.ಮೀ. ದೂರದಲ್ಲಿರುವ ಮಾಟಿ ಕರಾವಳಿ ಪಟ್ಟಣದ ವಿಲ್ಲಾವೊಂದರಲ್ಲಿ 26 ಮಂದಿ ಮೃತಪಟ್ಟಿರುವುದನ್ನು ರೆಡ್‌ಕ್ರಾಸ್ ಅಧಿಕಾರಿಯೊಬ್ಬರು ಪತ್ತೆಹಚ್ಚಿದ್ದಾರೆ.
ರಫಿನ ವಲಯದಲ್ಲಿರುವ ಮಾಟಿ ಪಟ್ಟಣವು ಸ್ಥಳೀಯ ಪ್ರವಾಸಿಗರ ನೆಚ್ಚಿನ ತಾಣವಾಗಿದೆ. ಇಲ್ಲಿನ ಹಾಲಿಡೇ ಶಿಬಿರಗಳಲ್ಲಿ ನಿವೃತ್ತ ಉದ್ಯೋಗಿಗಳು ಮತ್ತು ಮಕ್ಕಳು ರಜೆ ಕಳೆಯುತ್ತಾರೆ.
ಕಾಡ್ಗಿಚ್ಚು ಸಮುದ್ರತೀರವನ್ನು ಕ್ರಮಿಸಿದಾಗ ಬೆಂಕಿಯ ಕೆನ್ನಾಲಿಗೆಯಿಂದ ತಪ್ಪಿಸಿಕೊಳ್ಳಲು ನೂರಾರು ಮಂದಿ ಸಮುದ್ರಕ್ಕೆ ಜಿಗಿದರು. ಅಲ್ಲಿಂದ ಹಾದುಹೋದ ದೋಣಿಗಳು ಅವರನ್ನು ಹತ್ತಿಸಿಕೊಂಡವು.
ದೇಶದ ಹಲವಾರು ಭಾಗಗಳಲ್ಲಿ ನಿಯಂತ್ರಣ ಮೀರಿ ಧಾವಿಸುತ್ತಿರುವ ಬೆಂಕಿಯನ್ನು ನಂದಿಸಲು ಸಹಾಯ ಮಾಡುವಂತೆ ಗ್ರೀಸ್ ತುರ್ತು ಮನವಿ ಮಾಡಿದೆ.
ಈಗಾಗಲೇ 100ಕ್ಕೂ ಅಧಿಕ ಮನೆಗಳು ಬೆಂಕಿಗೆ ಆಹುತಿಯಾಗಿವೆ.