ಅಮೆರಿಕ: ಮಕ್ಕಳಿಲ್ಲದೇ 463 ಅಕ್ರಮ ವಲಸಿಗ ಹೆತ್ತವರ ಗಡಿಪಾರು!
ವಾಶಿಂಗ್ಟನ್, ಜು. 24: ಅಕ್ರಮ ಪ್ರವೇಶಕ್ಕಾಗಿ ಅಮೆರಿಕದಲ್ಲಿ ಬಂಧನಕ್ಕೊಳಗಾಗಿರುವವರ ಪೈಕಿ ಸುಮಾರು 463 ಹೆತ್ತವರನ್ನು ಮಕ್ಕಳಿಲ್ಲದೇ ಗಡಿಪಾರು ಮಾಡಲಾಗಿದೆ ಎಂದು ಹೇಳಲಾಗಿದೆ.
ಈ 463 ಹೆತ್ತವರ ಅನುಪಸ್ಥಿತಿಯ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಸರಕಾರಿ ವಕೀಲರು ಹೇಳಿದ್ದಾರೆ. ಇದರಿಂದಾಗಿ, ನ್ಯಾಯಾಲಯವೊಂದು ನೀಡಿರುವ ಆದೇಶದಂತೆ ಗುರುವಾರದ ಒಳಗೆ ಪ್ರತ್ಯೇಕಿತ ಕುಟುಂಬಗಳನ್ನು ಒಗ್ಗೂಡಿಸಲು ಸಾಧ್ಯವಾಗದು ಎನ್ನಲಾಗಿದೆ.
ಸೋಮವಾರದವರೆಗೆ, 879 ಹೆತ್ತವರನ್ನು ಅವರ ಮಕ್ಕಳೊಂದಿಗೆ ಒಗ್ಗೂಡಿಸಲಾಗಿದೆ.
ಅಮೆರಿಕದ ಡೊನಾಲ್ಡ್ ಟ್ರಂಪ್ ಆಡಳಿತವು ಎಪ್ರಿಲ್ ತಿಂಗಳಲ್ಲಿ ‘ಅಕ್ರಮ ಪ್ರವೇಶಕ್ಕೆ ಶೂನ್ಯ ಸಹನೆ’ ನೀತಿಯನ್ನು ಘೋಷಿಸಿದ ಬಳಿಕ ಸುಮಾರು 2,500 ಮಕ್ಕಳನ್ನು ಹೆತ್ತವರಿಂದ ಪ್ರತ್ಯೇಕಿಸಲಾಗಿದೆ. ಹೆತ್ತವರನ್ನು ವಿವಿಧ ಬಂಧನ ಕೇಂದ್ರಗಳಿಗೆ ಕಳುಹಿಸಿದರೆ, ಮಕ್ಕಳನ್ನು ಶಿಶು ಕೇಂದ್ರಗಳಲ್ಲಿ ಇರಿಸಲಾಗಿತ್ತು.
ಈ ಬಗ್ಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಕ್ರೋಶ ವ್ಯಕ್ತವಾದಾಗ, ಜೂನ್‌ನಲ್ಲಿ ಈ ನೀತಿಯನ್ನು ಹಿಂದಕ್ಕೆ ಪಡೆಯಲಾಗಿತ್ತು.
ಮಕ್ಕಳನ್ನು ಕಳುಹಿಸಿಕೊಡೆ ಹೆತ್ತವರನ್ನು ಮಾತ್ರ ಗಡಿಪಾರುಗೊಳಿಸಿರುವುದಕ್ಕೆ ವಲಸೆ ವಕೀಲರು ಆತಂಕ ವ್ಯಕ್ತಪಡಿಸಿದ್ದಾರೆ. ಇದು ಮಕ್ಕಳ ವಲಸೆ ಪ್ರಕರಣಗಳಲ್ಲಿ ಸಮಸ್ಯೆ ಸೃಷ್ಟಿಸಬಹುದು ಎಂದು ಅವರು ಹೇಳಿದ್ದಾರೆ.