ಇಂದು ಪಾಕ್ ಸಂಸತ್ತು, ವಿಧಾನಸಭೆಗಳಿಗೆ ಚುನಾವಣೆ: 3.70 ಲಕ್ಷಕ್ಕೂ ಅಧಿಕ ಸೈನಿಕರ ನಿಯೋಜನೆ
ಇಸ್ಲಾಮಾಬಾದ್, ಜು. 24: ಪಾಕಿಸ್ತಾನದ ರಾಷ್ಟ್ರೀಯ ಸಂಸತ್ತು ಮತ್ತು ಪ್ರಾಂತೀಯ ವಿಧಾನಸಭೆಗಳಿಗೆ ನಾಳೆ (ಬುಧವಾರ) ಚುನಾವಣೆ ನಡೆಯಲಿದ್ದು, ಬಂದೋಬಸ್ತ್‌ಗಾಗಿ ದೇಶಾದ್ಯಂತ 3.70 ಲಕ್ಷಕ್ಕೂ ಅಧಿಕ ಸೈನಿಕರನ್ನು ನಿಯೋಜಿಸಲಾಗಿದೆ.
ಪ್ರಮುಖ ಪಕ್ಷಗಳ ನಾಯಕರು ಮತ್ತು ಕೆಲವು ಅಭ್ಯರ್ಥಿಗಳು ಗಂಭೀರ ಬೆದರಿಕೆಗಳನ್ನು ಎದುರಿಸುತ್ತಿದ್ದಾರೆ ಎಂದು ಭದ್ರತಾ ಪಡೆಗಳು ಎಚ್ಚರಿಸಿವೆ.
ಚುನಾವಣಾ ಪ್ರಚಾರದ ಅವಧಿಯಲ್ಲಿ, ಅಭ್ಯರ್ಥಿಗಳು ಮತ್ತು ಚುನಾವಣಾ ಸಭೆಗಳ ಮೇಲೆ ಹಲವು ಭಯೋತ್ಪಾದಕ ದಾಳಿಗಳು ನಡೆದಿವೆ. ಜುಲೈ 13ರಂದು ಬಲೂಚಿಸ್ತಾನದಲ್ಲಿ ನಡೆದ ಭೀಕರ ದಾಳಿಯಲ್ಲಿ 151 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.
ಮಾಜಿ ಪ್ರಧಾನಿ ನವಾಝ್ ಶರೀಫ್ ನೇತೃತ್ವದ ಪಿಎಂಎಲ್-ಎನ್ ಮತ್ತು ಕ್ರಿಕೆಟಿಗ ಇಮ್ರಾನ್ ಖಾನ್ ನೇತೃತ್ವದ ಪಾಕಿಸ್ತಾನ್ ತೆಹ್ರೀಕೆ ಇನ್ಸಾಫ್ ಪಕ್ಷಗಳ ನಡುವೆ ಪ್ರಮುಖ ಸ್ಪರ್ಧೆ ನಡೆಯುತ್ತಿದೆ.
ಅದೇ ವೇಳೆ, ಚುನಾವಣೆಯಲ್ಲಿ ಸೇನೆ ನಡೆಸುತ್ತಿದೆಯೆನ್ನಲಾದ ಹಸ್ತಕ್ಷೇಪದ ಬಗ್ಗೆ ವ್ಯಾಪಕ ಟೀಕೆಗಳು ಕೇಳಿಬರುತ್ತಿವೆ.
ಇಮ್ರಾನ್ ಪಕ್ಷವನ್ನು ಗೆಲ್ಲಿಸಲು ಸೇನೆ ಚಟುವಟಿಕೆಗಳನ್ನು ನಡೆಸುತ್ತಿದೆ ಎಂದು ಆರೋಪಿಸಲಾಗಿದೆ.