ಗುಂಡೂರಿ ಹೊಳೆಯಲ್ಲಿ ವ್ಯಕ್ತಿಯ ಮೃತದೇಹ ಪತ್ತೆ
ಬೆಳ್ತಂಗಡಿ, ಜು. 24: ತಾಲೂಕಿನ ವೇಣೂರು ಠಾಣಾ ವ್ಯಾಪ್ತಿಯ ಗುಂಡೂರಿ ಸಮೀಪ ಹೊಸಪಟ್ಣದಿಂದ ನಾಪತ್ತೆಯಾಗಿದ್ದ ವ್ಯಕ್ತಿಯ ಶವ ಮಂಗಳವಾರ ಗುಂಡೂರಿ ಗ್ರಾಮದ ಹೇಡ್ಮೆ ಹೊಳೆಯಲ್ಲಿ ಪತ್ತೆಯಾಗಿದೆ.
ಹೊಸಪಟ್ಣ ದರ್ಖಾಸು ಮನೆ ನಿವಾಸಿ ಬಾಲಪ್ಪ (35) ಮೃತಪಟ್ಟವರಾಗಿದ್ದಾರೆ. ಅವಿವಾಹಿತರಾಗಿದ್ದ ಇವರು ಜು. 22ರಂದು ಎಂದಿನಂತೆ ಕೂಲಿ ಕೆಲಸಕ್ಕೆಂದು ಮನೆಯಿಂದ ಹೋದವರು ವಾಪಾಸು ಮನೆಗೆ ಬಾರದೆ ನಾಪತ್ತೆಯಾಗಿದ್ದರು. ಕೆಲಸಕ್ಕೆ ತೆರಳಿದ ಕಡೆಗಳಲ್ಲಿ ಹಾಗೂ ಸಂಬಂಧಿಕರಲ್ಲಿ ವಿಚಾರಿಸಿದರೂ ಬಾಲಪ್ಪ ಪತ್ತೆಯಾಗಲಿಲ್ಲ.
ಮಂಗಳವಾರ ಮುಂಜಾನೆ ಗುಂಡೂರಿ ಗ್ರಾಮದ ಹೇಡ್ಮೆ ಬಳಿಯ ಹೊಳೆಯಲ್ಲಿ ಮೃತದೇಹವೊಂದು ನೀರಿನಲ್ಲಿ ತೇಲುತ್ತಿದ್ದ ಬಗ್ಗೆ ಸ್ಥಳೀಯರು ವೇಣೂರು ಪೊಲೀಸರಿಗೆ ಮಾಹಿತಿ ತಿಳಿಸಿದ್ದರು. ಊರವರ ಸಹಕಾರದಲ್ಲಿ ಪೊಲೀಸರು ಮೃತದೇಹವನ್ನು ಮೇಲಕ್ಕೆತ್ತಿದ್ದು, ಬಾಲಪ್ಪ ಮೃತದೇಹ ಎಂದು ಖಚಿತಪಡಿಸಲಾಗಿದೆ. ಬೆಳ್ತಂಗಡಿ ಸರಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಮೃತದೇಹವನ್ನು ಹಸ್ತಾಂತರಿಸಲಾಗಿದೆ. ಹೊಳೆಗೆ ತೆರಳಿದ ಬಾಲಪ್ಪ ಕಾಲುಜಾರಿ ನೀರಿನ ಸೆಳೆತಕ್ಕೆ ಸಿಲುಕಿಕೊಚ್ಚಿಹೋಗಿ ಮೃತಪಟ್ಟಿರಬೇಕೆಂದು ಶಂಕಿಸಲಾಗಿದ್ದು, ವೇಣೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.