ದೇಶದ ಘನತೆಗೆ ಧಕ್ಕೆ: ರಾಹುಲ್ ಗಾಂಧಿ ವಿರುದ್ಧ ಹರಿಹಾಯ್ದ ವಿತ್ತ ಸಚಿವ ಪಿಯೂಶ್ ಗೋಯಲ್

Update: 2018-07-24 17:24 GMT

ಹೊಸದಿಲ್ಲಿ, ಜು.24: ಆಧಾರರಹಿತ ವರದಿಗಳನ್ನು ಮುಂದಿಟ್ಟು ಸ್ವಿಸ್ ಬ್ಯಾಂಕ್‌ನಲ್ಲಿ ಭಾರತೀಯರ ಠೇವಣಿ ಹೆಚ್ಚಾಗಿದೆ ಎಂದು ಹೇಳುವ ಮೂಲಕ ರಾಹುಲ್ ಗಾಂಧಿ ದೇಶದ ಘನತೆಗೆ ಕುಂದುಂಟು ಮಾಡಿದ್ದಾರೆ ಎಂದು ಆರೋಪಿಸಿ ವಿತ್ತ ಸಚಿವ ಪಿಯೂಶ್ ಗೋಯೆಲ್, ರಾಹುಲ್ ವಿರುದ್ಧ ಮಂಗಳವಾರ ಟೀಕಾಪ್ರಹಾರ ಮಾಡಿದ್ದಾರೆ.

ವಾಸ್ತವದಲ್ಲಿ ಸ್ವಿಸ್ ಬ್ಯಾಂಕ್‌ನಲ್ಲಿ ಭಾರತೀಯರ ಠೇವಣಿ 2017ರಲ್ಲಿ ಶೇ. 34ರಷ್ಟು ಇಳಿಕೆಯಾಗಿ 524 ಮಿಲಿಯನ್ ಡಾಲರ್‌ಗೆ ಕುಸಿದಿದೆ ಎಂದು ಗೋಯಲ್ ತಿಳಿಸಿದ್ದಾರೆ. ಇದಕ್ಕೂ ಮೊದಲು ಪ್ರಕಟವಾದ ವರದಿಗಳಲ್ಲಿ, 2017ರಲ್ಲಿ ಸ್ವಿಸ್ ಬ್ಯಾಂಕ್‌ನಲ್ಲಿ ಭಾರತೀಯರ ಠೇವಣಿ ಶೇ. 50 ಏರಿಕೆ ಕಂಡಿದ್ದು 7,000 ಕೊಟಿ ರೂ. ತಲುಪಿದೆ ಎಂದು ತಿಳಿಸಲಾಗಿತ್ತು. ಆಧಾರರಹಿತ ವರದಿಗಳನ್ನು ಮುಂದಿಟ್ಟು ದೇಶದ ಮಾನವನ್ನು ಯಾಕೆ ಹರಾಜು ಮಾಡುತ್ತಿದ್ದಾರೆ ಎಂಬುದನ್ನು ರಾಹುಲ್ ಗಾಂಧಿ ದೇಶಕ್ಕೆ ತಿಳಿಸಬೇಕು ಎಂದು ವಿತ್ತ ಸಚಿವರು ತಿಳಿಸಿದ್ದಾರೆ.

ರಾಹುಲ್ ಗಾಂಧಿಗೆ ವಾಸ್ತವಾಂಶವನ್ನು ತಿಳಿಯದೆಯೇ ಮಾತನಾಡುವ ಅಭ್ಯಾಸವಿದೆ ಎಂಬುದು ನಮಗೆ ತಿಳಿದಿದೆ. ಅವಿಶ್ವಾಸ ನಿರ್ಣಯ ಮಂಡನೆಯ ಸಮಯದಲ್ಲೂ ಕಾಂಗ್ರೆಸ್ ಆಧಾರರಹಿತ ಆರೋಪಗಳನ್ನು ಮಾಡಿತ್ತು. ಅದಕ್ಕೆ ಸರಿಯಾದ ಉತ್ತರವನ್ನೂ ನೀಡಲಾಗಿತ್ತು ಎಂದು ಗೋಯಲ್ ತಿಳಿಸಿದ್ದಾರೆ. 2017ರಲ್ಲಿ ಭಾರತೀಯರ ಠೇವಣಿ ಶೇ. 34ರಷ್ಟು ಇಳಿಕೆಯಾಗಿದೆ ಎಂದು ಸ್ವಿಸ್ ಬ್ಯಾಂಕ್ ಅಧಿಕಾರಿಗಳೇ ತಿಳಿಸಿದ್ದಾರೆ. ಕಪ್ಪು ಹಣ ಹೊಂದಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಸರಕಾರ ಹಿಂಜರಿಯುವುದಿಲ್ಲ ಎಂದು ಅವರು ಇದೇ ಸ್ಪಷ್ಟಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News