ಕೇಂದ್ರ ಸರಕಾರದ ವೈಫಲ್ಯತೆಯಿಂದ ರಾಷ್ಟ್ರೀಕೃತ ಬ್ಯಾಂಕುಗಳು ಮುಚ್ಚುವ ಹಂತಕ್ಕೆ ತಲುಪಿದೆ : ಪ್ರಶಾಂತ್ ಕಾಜವ

Update: 2018-07-24 17:32 GMT

ಉಳ್ಳಾಲ, ಜು. 24: ಹಲವಾರು ಹುಸಿ ಭರವಸೆಗಳನ್ನು ನೀಡಿ ಅಧಿಕಾರಕ್ಕೇರಿರುವ ಕೇಂದ್ರದ ಎನ್‌ಡಿಎ ಸರಕಾರದ ಆಡಳಿತ ವೈಫಲ್ಯದಿಂದ ರಾಷ್ಟ್ರೀಕೃತ ಬ್ಯಾಂಕ್ ಗಳು ನಷ್ಟದ ಹಾದಿಯಲ್ಲಿದ್ದು, ಮುಚ್ಚುವ ಹಂತಕ್ಕೆ ತಲುಪಿದೆ ಎಂದು ಮುಡಿಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಶಾಂತ್ ಕಾಜವ ಆರೋಪಿಸಿದ್ದಾರೆ.

ತೊಕ್ಕೊಟ್ಟುವಿನಲ್ಲಿ ಮಂಗಳವಾರ ಹಮ್ಮಿಕೊಂಡ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು ಯುಪಿಎ ಸರಕಾರದ ಅವಧಿಯಲ್ಲಿ ಇದ್ದಂತಹ ಕಚ್ಛಾ ತೈಲ ಬೆಲೆ ಇದೀಗ ಮೂರುಪಾಲು ಜಾಸ್ತಿಯಾಗಿದೆ. ಕರಾವಳಿಯ ಕೇಂದ್ರ ಬಿಂದು ರೈಲ್ವೇ ನಿಲ್ದಾಣವನ್ನು ವಿಶ್ವದರ್ಜೆಗೆ ಸೇರಿಸುವಲ್ಲಿ ಮತ್ತು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮಾನದಂಡಕ್ಕೆ ಅನುಸಾರವಾಗಿ ಬೆಳೆಯದೆ ಸಂಸದರ ವೈಫಲ್ಯತೆಯನ್ನು ಎತ್ತಿ ತೋರಿಸುತ್ತದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಡಿಯಲ್ಲಿ ಬರುವಂತಹ ರಸ್ತೆಗಳೆಲ್ಲಾ ಸಂಪೂರ್ಣ ಹೊಂಡಮಯವಾಗಿದೆ. ಪಂಪ್ ವೆಲ್ ತೊಕ್ಕೊಟ್ಟು ಫ್ಲೈಓವರ್ ಕಾಮಗಾರಿ ಅವ್ಯವಸ್ಥೆ ಮತ್ತು ವಿಳಂಬದಿಂದಾಗಿ ಹಲವು ಜೀವಗಳು ಬಲಿಯಾಗಿವೆ. ಇದರ ವಿರುದ್ಧ ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಸಿದ್ಧತೆ ನಡೆಸಿರುವ ಪ್ರತಿಭಟನೆಗೆ ಮುಡಿಪು ಬ್ಲಾಕ್ ಕೈಜೋಡಿಸುತ್ತದೆ. ಜನಧನ ಖಾತೆಯನ್ನು ತೆರೆಸಿ ಅದರಲ್ಲಿಯೂ ರೂ.3 ನ್ನೂ ಹಾಕಲು ಸರಕಾರ ವಿಫಲವಾಗಿದೆ. ಸುಳ್ಳು ಪ್ರಚಾರದಿಂದ ನಾಲ್ಕೂವರೆ ವರ್ಷಗಳನ್ನು ಕೇಂದ್ರ ಸರಕಾರ ಕಳೆದುಕೊಂಡಿದ್ದರೆ, ಒಂಭತ್ತು ವರ್ಷಗಳ ಅವಕಾಶ ಸಿಕ್ಕಂತಹ ಸಂಸದರು ಸರಿಯಾದ ಒಂದು ಯೋಜನೆಯನ್ನು ಜಿಲ್ಲೆಗೆ ತರಲು ವಿಫಲರಾಗಿದ್ದಾರೆ ಎಂದರು.

ಕುರ್ನಾಡು ಜಿ.ಪಂ ಸದಸ್ಯೆ ಮಮತಾ ಡಿ.ಯಸ್ ಗಟ್ಟಿ ಮಾತನಾಡಿ ಕಾಂಗ್ರೆಸ್ ಆಡಳಿತ ನಡೆಸಿದಂತಹ ರಾಜ್ಯದಲ್ಲಿ ಮಾತ್ರ ಅನ್ನಭಾಗ್ಯ ಯೋಜನೆ ಜಾರಿಗೊಳಿಸಲಾಗಿದೆ. ಕೇಂದ್ರದಿಂದ ಸಿಗುವ ಸರ್ವ ಶಿಕ್ಷಣ ಅಭಿಯಾನದಡಿ ಜಿಲ್ಲೆಗೆ ಬರುವ ಅನುದಾನಗಳು, ಗ್ರಾಮೀಣ ರಸ್ತೆಗಳ ನಿರ್ಮಾಣದ ಅನುದಾನ ಗಳು ಕಡಿಮೆಯಾಗಿದೆ. ಹುತಾತ್ಮರಾಗುವ ಯೋಧರ ಸಂಖ್ಯೆಯಲ್ಲಿ ಏರಿಕೆಯಾಗಿದೆ. ಮಹಿಳೆಯರ ದೌರ್ಜನ್ಯ ವಿರುದ್ಧ ಕಠಿಣ ಕಾನೂನು ಮತ್ತು ಯೋಜನೆಗಳನ್ನು ಜಾರಿಗೊಳಿಸುವಲ್ಲಿ ಕೇಂದ್ರ ಸರಕಾರ ಸಂಪೂರ್ಣ ವಿಫಲವಾಗಿದೆ. ಉದ್ಯೋಗವಿಲ್ಲದೆ ಯುವಸಮುದಾಯ ಕಂಗೆಟ್ಟಿದೆ. ಪಂಪ್ ವೆಲ್, ತೊಕ್ಕೊಟ್ಟು ಫ್ಲೈಓವರ್ ಕಾಮಗಾರಿ ಇನ್ನು ಐದು ವರ್ಷಗಳಾದರೂ ಪೂರ್ಣಗೊಳ್ಳುವುದು ಸಂಶಯ. ಹೆದ್ದಾರಿ ಅವ್ಯವಸ್ಥೆಯಿಂದ ಸಾವನ್ನಪ್ಪಿದವರ ಕುಟುಂಬಗಳಿಗೆ ಕನಿಷ್ಟ ಪರಿಹಾರವನ್ನು ಒದಗಿಸುವ ಕೆಲಸ ಆಗಿಲ್ಲ ಎಂದು ಆರೋಪಿಸಿದರು.

ಬಂಟ್ವಾಳ ತಾ.ಪಂ. ಅಧ್ಯಕ್ಷ ಚಂದ್ರಹಾಸ್ ಕರ್ಕೇರ, ಮುಡಿಪು ಬ್ಲಾಕ್ ಪ್ರಧಾನ ಕಾರ್ಯದರ್ಶಿ ಜಲೀಲ್ ಮೋಂಟುಗೋಳಿ, ಕಚೇರಿ ಕಾರ್ಯದರ್ಶಿ ಅಬ್ದುಲ್ ಸತ್ತಾರ್ ಕೈರಂಗಳ, ಬಾಳೆಪುಣಿ ಗ್ರಾ. ಪಂ ಸದಸ್ಯ ನಾಸೀರ್ ನಡುಪದವು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News