ರುವಾಂಡಕ್ಕೆ 1,400 ಕೋಟಿ ರೂ. ಸಾಲ: ಮೋದಿ ಘೋಷಣೆ

Update: 2018-07-24 17:39 GMT

ಕಿಗಾಲಿ (ರುವಾಂಡ), ಜು. 24: ರುವಾಂಡ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಆ ದೇಶಕ್ಕೆ 20 ಕೋಟಿ ಡಾಲರ್ (ಸುಮಾರು 1,400 ಕೋಟಿ ರೂಪಾಯಿ) ಸಾಲ ಘೋಷಿಸಿದ್ದಾರೆ. ಅದೇ ವೇಳೆ, ದೇಶದಲ್ಲಿ ಭಾರತದ ಪ್ರಥಮ ರಾಯಭಾರ ಕಚೇರಿಯನ್ನು ಸ್ಥಾಪಿಸುವುದಾಗಿ ಪ್ರಕಟಿಸಿದ್ದಾರೆ.

ಅದೇ ವೇಳೆ, ರುವಾಂಡದಲ್ಲಿ ಕೈಗಾರಿಕಾ ವಸಾಹತುಗಳನ್ನು ಸ್ಥಾಪಿಸಲು ಮತ್ತು ವಿಶೇಷ ಆರ್ಥಿಕ ವಲಯಗಳನ್ನು ವಿಸ್ತರಿಸಲು 10 ಕೋಟಿ ಡಾಲರ್ ಮೌಲ್ಯದ ಒಪ್ಪಂದಕ್ಕೆ ಭಾರತ ಮತ್ತು ರುವಾಂಡಗಳು ಸಹಿ ಹಾಕಿವೆ.

ಮೋದಿ ಮತ್ತು ರುವಾಂಡ ಅಧ್ಯಕ್ಷ ಪೌಲ್ ಕಗಮೆ ನಡುವೆ ರಾಜಧಾನಿ ಕಿಗಾಲಿಯಲ್ಲಿ ಸೋಮವಾರ ಮಾತುಕತೆ ನಡೆದ ಬಳಿಕ ಈ ಒಪ್ಪಂದಕ್ಕೆ ಸಹಿ ಹಾಕಲಾಗಿದೆ.

ಬಳಿಕ ಕಗಮೆ ಜೊತೆ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮೋದಿ, ದ್ವಿಪಕ್ಷೀಯ ಸಂಬಂಧವನ್ನು ಇನ್ನಷ್ಟು ಎತ್ತರಕ್ಕೆ ಒಯ್ಯಲು ಉಭಯ ದೇಶಗಳು ಉತ್ಸುಕವಾಗಿವೆ ಎಂದು ಹೇಳಿದರು.

ತನ್ನ ಆಫ್ರಿಕದ ಮೂರು ದೇಶಗಳ ಪ್ರವಾಸದ ಭಾಗವಾಗಿ ಮೋದಿ ಸೋಮವಾರ ಸಂಜೆ ಕಿಗಾಲಿ ತಲುಪಿದರು. ಭಾರತದ ಪ್ರಧಾನಿಯೊಬ್ಬರು ರುವಾಂಡಕ್ಕೆ ಭೇಟಿ ನೀಡಿರುವುದು ಇದೇ ಮೊದಲ ಬಾರಿಯಾಗಿದೆ.

ರಕ್ಷಣೆ, ಕೃಷಿ, ಹೈನು ಉತ್ಪಾದನೆ ಮತ್ತು ವ್ಯಾಪಾರ ಸೇರಿದಂತೆ 8 ಒಪ್ಪಂದಗಳಿಗೆ ಉಭಯ ದೇಶಗಳು ಸಹಿ ಹಾಕಿವೆ.

200 ಕುಟುಂಬಗಳಿಗೆ ದನ ಉಡುಗೊರೆ

ಮಹತ್ವದ ಬೆಳವಣಿಗೆಯೊಂದರಲ್ಲಿ, ರುವಾಂಡದ 200 ಕುಟುಂಬಗಳಿಗೆ ಪ್ರಧಾನಿ ನರೇಂದ್ರ ಮೋದಿ ದನಗಳನ್ನು ಉಡುಗೊರೆಯಾಗಿ ನೀಡಿದ್ದಾರೆ.

 ರುವಾಂಡ ಸರಕಾರದ ‘ಗಿರಿಂಕ’ ಸಾಮಾಜಿಕ ಭದ್ರತೆ ಯೋಜನೆಯಡಿ ಈ ದನಗಳನ್ನು ನೀಡಲಾಗಿದೆ.

ದಾನ ನೀಡಲಾದ ದನಗಳನ್ನು ರುವಾಂಡದಲ್ಲೇ ಖರೀದಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News