×
Ad

ಉಡುಪಿ: ಉಚಿತ ಬಸ್‌ಪಾಸ್‌ಗೆ ಪಾಲಿಟೆಕ್ನಿಕ್ ವಿದ್ಯಾರ್ಥಿಗಳಿಂದ ಧರಣಿ

Update: 2018-07-25 16:33 IST

ಮಣಿಪಾಲ, ಜು.25: ಸರ್ವ ಕಾಲೇಜು ವಿದ್ಯಾರ್ಥಿ ಸಂಘ ಉಡುಪಿ ಜಿಲ್ಲೆ ಇದರ ಆಶ್ರಯದಲ್ಲಿ ಸಂಪೂರ್ಣ ಕ್ಯಾರಿ ಓವರ್ ಪದ್ಧತಿ ಜಾರಿಗೆ ಹಾಗೂ ಖಾಸಗಿ ಶಾಲಾ ಕಾಲೇಜುಗಳ ಬಡ ವಿದ್ಯಾರ್ಥಿಗಳಿಗೆ ಉಚಿತ ಬಸ್‌ಪಾಸ್ ನೀಡುವಂತೆ ಆಗ್ರಹಿಸಿ ಉಡುಪಿಯ ವಿವಿಧ ಪಾಲಿಟೆಕ್ನಿಕ್ ಕಾಲೇಜುಗಳ ವಿದ್ಯಾರ್ಥಿಗಳು ಮಣಿಪಾಲ ಈಶ್ವರ ನಗರ ಬಸ್ ನಿಲ್ದಾಣದಲ್ಲಿ ಧರಣಿ ನಡೆಸಿದರು.

ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದ ಸಂಘದ ರಾಜ್ಯಾಧ್ಯಕ್ಷ ದಿನಕರ ಶೆಟ್ಟಿ, ಕ್ಯಾರಿ ಓವರ್ ಪದ್ಧತಿಯಿಂದ ಪಾಲಿಟೆಕ್ನಿಕ್ ವಿದ್ಯಾರ್ಥಿಗಳು ಸಮಸ್ಯೆ ಅನುಭವಿಸುತ್ತಿದ್ದಾರೆ. ಇದರಿಂದ ಪ್ರತಿವರ್ಷ ಸಾವಿರಾರು ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಪಾಲಿಟೆಕ್ನಿಕ್ ವಿದ್ಯಾರ್ಥಿಗಳು ಈ ದೇಶದ ಬೆನ್ನೆಲುಬು. ಇವರಿಂದ ಮಾತ್ರ ದೇಶದ ತಂತ್ರಜ್ಞಾನ ಅಭಿವೃದ್ಧಿ ಸಾಧ್ಯ. ಆದುದರಿಂದ ಪಾಲಿ ಟೆಕ್ನಿಕ್ ವಿದ್ಯಾರ್ಥಿಗಳಿಗೆ ಸಂಪೂರ್ಣ ಕ್ಯಾರಿ ಓವರ್ ನೀಡಬೇಕೆಂದು ಎಂದು ಆಗ್ರಹಿಸಿದರು.

ಸರಕಾರಿ ಶಾಲಾಕಾಲೇಜುಗಳ ವಿದ್ಯಾರ್ಥಿಗಳಿಗೆ ಮಾತ್ರ ಬಸ್ ಪಾಸ್ ನೀಡುವ ಸರಕಾರ, ಮೊದಲು ಸರಕಾರಿ ವಿದ್ಯಾಸಂಸ್ಥೆಗಳಿಗೆ ಬೇಕಾದ ಮೂಲ ಭೂತ ಸೌರ್ಕಯಗಳನ್ನು ಒದಗಿಸುವ ಕೆಲಸ ಮಾಡಬೇಕು. ಖಾಸಗಿ ಕಾಲೇಜು ಗಳ ವಿದ್ಯಾರ್ಥಿಗಳು ಸಾಲ ಮಾಡಿ ಶಿಕ್ಷಣ ಪಡೆಯುತ್ತಿದ್ದಾರೆ. ಇಲ್ಲಿಯೂ ಬಡವರಿದ್ದಾರೆ. ಪ್ರತಿದಿನ ಸಾಕಷ್ಟು ಹಣ ವ್ಯಯ ಮಾಡಿ ಶಾಲೆಗಳಿಗೆ ಬರುವ ಪರಿಸ್ಥಿತಿ ರಾಜ್ಯದಲ್ಲಿದೆ. ಆದುದರಿಂದ ಖಾಸಗಿ ಶಾಲೆಯಲ್ಲಿರುವ ಬಡವರಿಗೆ ಬಸ್‌ಪಾಸ್ ನೀಡಬೇಕು ಎಂದು ಅವರು ಒತ್ತಾಯಿಸಿದರು.

ಧರಣಿಯಲ್ಲಿ ಮಣಿಪಾಲ ಟಿ.ಎಂ.ಎ.ಪೈ ಪಾಲಿಟೆಕ್ನಿಕ್ ಕಾಲೇಜು, ಉಡುಪಿ ಕಡಿಯಾಳಿ ಇಂದಿರಾ ಶಿವರಾವ್ ಪಾಲಿಟೆಕ್ನಿಕ್ ಕಾಲೇಜು ಹಾಗೂ ಮಣಿಪಾಲ ದಲ್ಲಿರುವ ಸರಕಾರಿ ಪಾಲಿಟೆಕ್ನಿಕ್ ಕಾಲೇಜುಗಳ ವಿದ್ಯಾರ್ಥಿಗಳು ಪಾಲ್ಗೊಂಡಿ ದ್ದರು. ಬಳಿಕ ವಿದ್ಯಾರ್ಥಿಗಳು ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಈ ಕುರಿತ ಮನವಿ ಯನ್ನು ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಅವರಿಗೆ ಸಲ್ಲಿಸಿದರು.

ಧರಣಿಯನ್ನುದ್ದೇಶಿಸಿ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ರಘುವೀರ್ ಸೂಟರ್‌ಪೇಟೆ, ಉದ್ಯಮಿ ರೋಹನ್ ಕುಮಾರ್ ಶೆಟ್ಟಿ ಮಾತನಾಡಿದರು. ಈ ಸಂದರ್ಭದಲ್ಲಿ ಸಂಘದ ರಾಜ್ಯ ಕಾರ್ಯದರ್ಶಿ ಸೂರಜ್ ಇಂದ್ರಾಳಿ, ವಿದ್ಯಾರ್ಥಿ ನಾಯಕರಾದ ರಂಜನ್, ಸಚಿನ್, ಅಭಿರಾಜ್ ಮನೋಜ್, ಮೋಹಿತ್ ಮೊದಲಾದವರು ಉಪಸ್ಥಿತರಿದ್ದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News