×
Ad

ಡಾ. ಸಂತೋಷ್ ಸೋನ್ಸ್ ಗೆ 'ಏಷ್ಯನ್ ಪೀಡಿಯಾಟ್ರಿಶಿಯನ್ ಪ್ರಶಸ್ತಿ 2018’

Update: 2018-07-25 17:04 IST

ಮಂಗಳೂರು, ಜು. 25: ನಗರದ ತಜ್ಞ ಮಕ್ಕಳ ವೈದ್ಯ ಡಾ. ಸಂತೋಷ್ ಸೋನ್ಸ್ ಪ್ರತಿಷ್ಠಿತ 'ಏಷ್ಯನ್ ಪೀಡಿಯಾಟ್ರಿಶಿಯನ್ ಪ್ರಶಸ್ತಿ 2018’ಗೆ ಆಯ್ಕೆ ಆಗಿದ್ದಾರೆ.

ಪೀಡಿಯಾಟ್ರಿಕ್ಸ್ ಕ್ಷೇತ್ರದಲ್ಲಿ ಮಾಡಿರುವ ಅತ್ಯುತ್ತಮ ಕೊಡುಗೆಯನ್ನು ಗುರುತಿಸುವ ಮೂಲಕ ಏಷ್ಯಾ ಪೆಸಿಫಿಕ್ ಪೀಡಿಯಾಟ್ರಿಕ್ ಅಸೋಸಿಯೇಶನ್ ಈ ಪ್ರಶಸ್ತಿಯನ್ನು ನೀಡಿದೆ. ಭಾರತ ಸೇರಿದಂದೆ ಏಷ್ಯಾ ಪೆಸಿಫಿಕ್ ಪೀಡಿಯಾಟ್ರಿಕ್ ಅಸೋಸಿಯೇಷನ್ ಆಸ್ಟ್ರೇಲಿಯಾ, ಜಪಾನ್, ಚೀನಾ, ನ್ಯೂಝಿಲ್ಯಾಂಡ್, ಹಾಂಗ್ ಕಾಂಗ್, ಸಿಂಗಾಪುರ್ ಮತ್ತು ಮಲೇಷಿಯಾದಂತಹ 26 ದೇಶಗಳನ್ನು ಒಳಗೊಂಡಿದೆ.

ಡಾ. ಸಂತೋಷ್ ಸೋನ್ಸ್ ಈ ಪ್ರಶಸ್ತಿಯನ್ನು ಪಡೆದ ಮೂರನೇ ಭಾರತೀಯ ಮಕ್ಕಳ ವೈದ್ಯ. ಆ.28 ರಂದು ಇಂಡೋನೇಷ್ಯಾದ ನುಸಾ ದುವಾ-ಬಾಲಿಯಲ್ಲಿ ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಅವರು ಪ್ರಶಸ್ತಿ ಸ್ವೀಕರಿಸಲಿದ್ದಾರೆ.

16ನೇ ಏಷಿಯಾ ಪೆಸಿಫಿಕ್ ಕಾಂಗ್ರೆಸ್ ಆಫ್ ಪೀಡಿಯಾಟ್ರಿಕ್ಸ್ 2018, ಇಂಡೋನೇಷಿಯನ್ ಪೀಡಿಯಾಟ್ರಿಕ್ ಸೊಸೈಟಿಯ 9ನೆ ವಾರ್ಷಿಕ ವೈಜ್ಞಾನಿಕ ಸಭೆ ಮತ್ತು ಆ. 23ರಿಂದ ಬಾಲಿ ನಸಾ ಡವಾ ಕನ್ವೆನ್ಶನ್ ಸೆಂಟರ್, ನುಸಾದಲ್ಲಿ ನಡೆಯಲಿರುವ 6ನೇ ಏಷ್ಯಾ ಪೆಸಿಫಿಕ್ ಕಾಂಗ್ರೆಸ್ ಆಫ್ ಪೀಡಿಯಾಟ್ರಿಕ್ ನರ್ಸಿಂಗ್ ಸಮಾವೇಶದಲ್ಲಿ ಪ್ರಶಸ್ತಿ ಪ್ರದಾನ ಆಗಲಿದೆ.

ಮಂಗಳೂರು ಪ್ರದೇಶದಲ್ಲಿ ಪೀಡಿಯಾಟ್ರಿಕ್ ತೀವ್ರ ನಿಗಾ ಚಿಕಿತ್ಸೆಯ ಪ್ರವರ್ತಕರಾದ ಡಾ. ಸಂತೋಷ್ ಸೋನ್ಸ್ ಒಬ್ಬ ಅನುಭವಿ ವೈದ್ಯಕೀಯ ಉಪನ್ಯಾಸಕ ಮತ್ತು ಮಕ್ಕಳ ತಜ್ಞರಾಗಿದ್ದಾರೆ. ಸೋನ್ಸ್ ಅವರು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ವೈದ್ಯಕೀಯ ಸಮ್ಮೇಳನಗಳಿಗೆ ಭಾಷಣಕಾರರಾಗಿ ಹೆಸರುವಾಸಿಯಾಗಿದ್ದಾರೆ. ಸೋನ್ಸ್ ಅವರು ಎರಡು ಪುಸ್ತಕಗಳನ್ನು ಬರೆದಿದ್ದು, ಹಲವಾರು ವೈದ್ಯಕೀಯ ಪಠ್ಯ ಪುಸ್ತಕಗಳಿಗೆ ಅಧ್ಯಾಯಗಳನ್ನು ನೀಡಿದ್ದಾರೆ ಮತ್ತು ಹಲವಾರು ವೈದ್ಯಕೀಯ ನಿಯತಕಾಲಿಕಗಳಲ್ಲಿ ಅವರ ಲೇಖನಗಳು ಪ್ರಕಟವಾಗಿವೆ.

ಡಾ. ಸಂತೋಷ್ ಸೋನ್ಸ್ ಪ್ರಸ್ತುತ ಭಾರತೀಯ ಅಕಾಡೆಮಿ ಆಫ್ ಪೀಡಿಯಾಟ್ರಿಕ್ಸ್ (ಐಎಪಿ) ಯ ರಾಷ್ಟ್ರೀಯ ಅಧ್ಯಕ್ಷರಾಗಿದ್ದಾರೆ. ಅವರು ಮೂರು ದಶಕಗಳ ಕಾಲ ಐಎಪಿ ನಲ್ಲಿ ಸಕ್ರಿಯರಾಗಿದ್ದಾರೆ ಮತ್ತು ರಾಷ್ಟ್ರೀಯ ಉಪಾಧ್ಯಕ್ಷರಾಗಿ (2010), ರಾಷ್ಟ್ರೀಯ ಅಧ್ಯಕ್ಷ, ತೀವ್ರವಾದ ಆರೈಕೆ ಅಧ್ಯಾಯ (2013) ಮತ್ತು ಕರ್ನಾಟಕ ರಾಜ್ಯ ಅಧ್ಯಕ್ಷರಾಗಿ (2015) ಕಾರ್ಯನಿರ್ವಹಿಸಿದ್ದಾರೆ.

ಮೂಲತಃ ಕುಂದಾಪುರದವರಾದ ಡಾ. ಸೋನ್ಸ್ ಮಂಗಳೂರು ಮತ್ತು ಮಣಿಪಾಲ್ ಕಸ್ತೂರ್ಬಾ ಮೆಡಿಕಲ್ ಕಾಲೇಜಿನ ಹಳೆ ವಿದ್ಯಾರ್ಥಿ. ಅವರು ಮಂಗಳೂರಿನ ಎ.ಜೆ ವೈದ್ಯಕೀಯ ಕಾಲೇಜಿನಲ್ಲಿ ಪ್ರೊಫೆಸರ್ ಮತ್ತು ಪೀಡಿಯಾಟ್ರಿಕ್ಸ್ ಇಲಾಖೆಯ ಮುಖ್ಯಸ್ಥ ಹಾಗೂ ಎನ್‌ಐಸಿಯು / ಪಿಐಸಿಯು ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರು ಮೊದಲು ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜಿನಲ್ಲಿ ಬೋಧಕರಾಗಿ ಸೇವೆ ಸಲ್ಲಿಸಿದ್ದಾರೆ.

"ಏಷ್ಯಾ ಪೆಸಿಫಿಕ್ ಪೀಡಿಯಾಟ್ರಿಕ್ ಅಸೋಸಿಯೇಷನ್ ಅವರ ಈ ಅಪರೂಪದ ಅಂತಾರಾಷ್ಟ್ರೀಯ ಗೌರವಕ್ಕೆ ಪಾತ್ರನಾಗಿದ್ದೇನೆಂದು ತಿಳಿದು ನಾನು ವಿನೀತನಾಗಿದ್ದೇನೆ. ನನ್ನ ಕುಟುಂಬ, ಸಹೋದ್ಯೋಗಿಗಳು ಮತ್ತು ನನ್ನ ಜೀವನ ಪ್ರಯಾಣದ ಮೂಲಕ ನನ್ನನ್ನು ಬೆಂಬಲಿಸಿದ ಗೆಳೆಯರಿಗೆ ನಾನು ಕೃತಜ್ಞನಾಗಿದ್ದೇನೆ. ನಾನು ಈ ಪ್ರಶಸ್ತಿಯನ್ನು ಭಾರತೀಯ ಶಿಶು ವೈದ್ಯ ಸಮುದಾಯದವರ ಶ್ರದ್ದೆಗೆ ಸಮರ್ಪಿಸುತ್ತೇನೆ" ಎಂದು ಪ್ರಶಸ್ತಿಗೆ ಪ್ರತಿಕ್ರಿಯಿಸಿದ ಡಾ. ಸಂತೋಷ್ ಸೋನ್ಸ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News