×
Ad

ಅಣ್ಣನ ಬೈಗುಳದಿಂದ ಬೇಸರಗೊಂಡ ತಂಗಿ ಆತ್ಮಹತ್ಯೆ !

Update: 2018-07-25 20:41 IST

ಮೂಡುಬಿದಿರೆ, ಜು.25: ಅಣ್ಣ ಬೈದನೆಂಬ ಕಾರಣಕ್ಕೆ ಬೇಸರಗೊಂಡ ತಂಗಿ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ದರೆಗುಡ್ಡೆಯ ಕೆಲ್ಲಪುತ್ತಿಗೆ ಎಂಬಲ್ಲಿ ಬುಧವಾರ ನಡೆದಿದೆ.

ಮೂಡುಮಾರ್ನಾಡಿನ ಕರುಣಾಕರ ಪೂಜಾರಿ ಅವರ ಪುತ್ರಿ ಸೀಮಾ (24) ಆತ್ಮಹತ್ಯೆ ಮಾಡಿಕೊಂಡವರು. ಸೀಮಾ ತನ್ನ ಸಹೋದರ ಸಂತೋಷ್ ಜತೆ ದರೆಗುಡ್ಡೆಯ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಆಕೆಗೆ ನಾರಾವಿಯ ಬಸ್ ಚಾಲಕನೊಬ್ಬ ಮೊಬೈಲ್ ಕೊಟ್ಟಿದ್ದು, ಈ ವಿಚಾರ ಸಂತೋಷ್‌ಗೆ ಗೊತ್ತಾಗಿ ಬಸ್ ಚಾಲಕನನ್ನು ತರಾಟೆಗೆ ತೆಗೆದುಕೊಂಡು ತನ್ನ ತಂಗಿಯ ಸುದ್ದಿಗೆ ಬರದಂತೆ ಎಚ್ಚರಿಕೆ ನೀಡಿದ್ದ ಎನ್ನಲಾಗಿದೆ.

ಇದಾದ ನಂತರ ಬಸ್ ಚಾಲಕ ಸೀಮಾ ಮೊಬೈಲ್‌ಗೆ ಕರೆ ಮಾಡಿ ಆಕೆಯ ಅಣ್ಣ ತನಗೆ ಜೋರು ಮಾಡಿದ ವಿಷಯ ತಿಳಿಸಿ ನಿನಗೆ ಮೊಬೈಲ್ ಬೇಡದಿದ್ದಲ್ಲಿ ಬಾವಿಗೆ ಎಸೆದು ಬಿಡು. ನಿನ್ನ ಸಹವಾಸಕ್ಕೆ ನಾನು ಬರುವುದಿಲ್ಲ, ನೀನು ಕೂಡ ನನ್ನ ಸಹವಾಸಕ್ಕೆ ಬರುವುದು ಬೇಡ ಎಂದು ತಾಕೀತು ಮಾಡಿದ್ದಾನೆನ್ನಲಾಗಿದೆ.

ಬುಧವಾರ ಬೆಳಗ್ಗೆ ಸಂತೋಷ ಕೆಲಸಕ್ಕೆ ಹೋದ ಬಳಿಕ ಆತನ ಪತ್ನಿ ಮಕ್ಕಳನ್ನು ಶಾಲೆಗೆ ಬಿಡಲು ಹೋಗಿದ್ದರು. ಈ ಸಂದರ್ಭ ಮನೆಯಲ್ಲಿ ಏಕಾಂಗಿ ಯಾಗಿದ್ದ ಸೀಮಾ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸೀಮಾಳ ಅತ್ತಿಗೆ ವಾಪಾಸು ಮನೆಗೆ ಬಂದಾಗ ಈ ಪ್ರಕರಣ ಬೆಳಕಿಗೆ ಬಂದಿದೆ.

ಮೂಡುಬಿದಿರೆ ಪೊಲೀಸರು ಪ್ರಕರಣ ದಾಖಲಿಸಿ, ತನಿಖೆ ನಡೆಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News