ಶಿರೂರು ಶ್ರೀ ನಿಗೂಢ ಸಾವಿನ ಬಗ್ಗೆ ಮಾತ್ರ ಧ್ವನಿ ಎತ್ತಿದ್ದೇನೆ: ಕೇಮಾರು ಶ್ರೀ
ಮಂಗಳೂರು, ಜು.25: ಉಡುಪಿ ಅಷ್ಟಮಠದ ಆಂತರಿಕ ವಿಷಯದಲ್ಲಿ ನಾನು ಯಾವುದೇ ಹಸ್ತಕ್ಷೇಪ ಮಾಡಿಲ್ಲ, ಮಾಡುವುದೂ ಇಲ್ಲ. ಶಿರೂರು ಶ್ರೀಗಳ ನಿಗೂಢ ಸಾವಿನ ಬಗ್ಗೆ ಮಾತ್ರ ತಾನು ಧ್ವನಿ ಎತ್ತಿದ್ದೇನೆ ಎಂದು ಕೇಮಾರು ಶ್ರೀ ಈಶ ವಿಠಲದಾಸ ಸ್ವಾಮೀಜಿ ಹೇಳಿದ್ದಾರೆ.
ನಗರದಲ್ಲಿ ಬುಧವಾರ ಸುದ್ದಿಗಾರರ ಜತೆ ಮಾತನಾಡಿದ ಕೇಮಾರು ಸ್ವಾಮೀಜಿ, ಉಡುಪಿ ಅಷ್ಟ ಮಠ ಹಾಗೂ ಶೀರೂರು ಶ್ರೀ ಲಕ್ಷ್ಮಿವರ ತೀಥ ಸ್ವಾಮೀಜಿ ಅವರ ವೈಯಕ್ತಿಕ ವಿಷಯ ತನಗೆ ಸಂಬಂಧಿಸಿದ್ದಲ್ಲ. ಶೀರೂರು ಸ್ವಾಮೀಜಿ ಸಾವಿಗೆ ಮುನ್ನ ಅವರ ದೇಹದಲ್ಲಿ ವಿಷ ಸೇರಿಕೊಂಡಿತ್ತು ಎಂದು ವೈದ್ಯರು ತಿಳಿಸಿದ್ದಾರೆ. ಶ್ರೀಗಳ ಆಹಾರವೇ ವಿಷವಾಗಿತ್ತೇ ಅಥವಾ ಆಹಾರಕ್ಕೆ ವಿಷ ಬೆರೆಸಲಾಗಿದೆಯೇ ಎಂಬ ಬಗ್ಗೆ ತನಿಖೆ ನಡೆಸಬೇಕು ಎಂದು ಪೊಲೀಸ್ ಇಲಾಖೆಯನ್ನು ಒತ್ತಾಯಿಸಿದ್ದೆ. ಈ ಬಗ್ಗೆ ಸಮರ್ಪಕ ತನಿಖೆ ನಡೆಸುವುದಾಗಿ ಉಡುಪಿ ಎಸ್ಪಿ ಭರವಸೆ ನೀಡಿದ್ದಾರೆ. ತನಿಖೆ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಯಾವುದೇ ಪ್ರತಿಭಟನೆ, ಹೋರಾಟ ನಡೆಸುವುದಿಲ್ಲ ಎಂದರು.
ನಾನು ದೇಶದ ಸಂವಿಧಾನದಲ್ಲಿ ನಂಬಿಕೆ ಉಳ್ಳವ. ಶ್ರೀರೂರು ಸ್ವಾಮೀಜಿ ತಪ್ಪು ಮಾಡಿದ್ದರೆ ಅದಕ್ಕೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲು ಅವಕಾಶವಿತ್ತು. ಅವರನ್ನು ಕೊಲ್ಲುವ ಅಧಿಕಾರ ಯಾರಿಗೂ ಇಲ್ಲ. ಮರಣೋತ್ತರ ಪರೀಕ್ಷೆ ಹಾಗೂ ವಿಧಿವಿಜ್ಞಾನ ಪರೀಕ್ಷೆಯ ವರದಿಯಿಂದ ಸಾವು ಹೇಗೆ ಸಂಭವಿಸಿತು ಎನ್ನುವುದು ಸ್ಪಷ್ಟವಾಗಲಿದೆ ಎಂದರು.
ಶೀರೂರು ಸ್ವಾಮೀಜಿ ಅವರ ಆತ್ಮಕಥೆಯನ್ನು ಬೆಂಗಳೂರಿನ ವ್ಯಕ್ತಿಯೊಬ್ಬರು ಬರೆಯುವ ಬಗ್ಗೆ ಮಾಹಿತಿ ಇದೆ. ಅವರು ಯಾರೆಂಬುದನ್ನು ಈ ಹಂತದಲ್ಲಿ ಅವರಲ್ಲಿ ಕೇಳದೆ ಹೇಳಲಾರೆ. ಅವರು ಶ್ರೀಗಳ ಆತ್ಮಕಥೆ ಬರೆದಿದ್ದಾರೋ ಇಲ್ಲವೋ ಎಂಬ ಬಗ್ಗೆ ಮಾಹಿತಿ ಇಲ್ಲ ಎಂದು ಕೇಮಾರು ಶ್ರೀ ಹೇಳಿದರು.
‘ಸಾಮಾಜಿಕ ಜಾಲತಾಣಗಳ ಮೂಲಕ ಬೆದರಿಕೆ’
ಶೀರೂರು ಶ್ರೀಗಳ ನಿಧನದ ಬಳಿಕ ಈ ಬಗ್ಗೆ ತನಿಖೆ ಆಗ್ರಹಿಸಿದ ಕಾರಣ ತನಗೆ ಕೆಲ ದಿನಗಳಿಂದ ವಾಟ್ಸ್ಆ್ಯಪ್, ಫೇಸ್‌ಬುಕ್ ಮೂಲಕ ಬೆದರಿಕೆಗಳು ಬರುತ್ತಿವೆ. ಶ್ರೀಗಳ ನಿಧನದ ಬಗ್ಗೆ ವೈದ್ಯರ ಹೇಳಿಕೆ ಹಿನ್ನೆಲೆಯಲ್ಲಿ ಸಂಶಯ ಹುಟ್ಟಿಕೊಂಡಿತ್ತು. ಈ ನಿಟ್ಟಿನಲ್ಲಿ ತನಿಖೆಗೆ ಆಗ್ರಹಿಸಿದ್ದೆ. ಅದನ್ನು ನೆಪವಾಗಿರಿಸಿ ನನಗೆ ಬೆದರಿಕೆ ಒಡ್ಡಲಾಗಿದೆ. ಈ ಬಗ್ಗೆ ಪೊಲೀಸ್ ದೂರು ನೀಡುವ ಬಗ್ಗೆ ಆಲೋಚನೆ ಮಾಡುತ್ತೇನೆ ಎಂದು ಕೇಮಾರು ಶ್ರೀ ಹೇಳಿದರು.