×
Ad

ಧರ್ಮಸಂಸದ್‌ಗೆ ಭರದ ಸಿದ್ಧತೆ: ಕನ್ಯಾಡಿ ಶ್ರೀ

Update: 2018-07-25 22:18 IST

ಮಂಗಳೂರು, ಜು.25: ಧರ್ಮಸ್ಥಳ ನಿತ್ಯಾನಂದ ನಗರದ ಕನ್ಯಾಡಿ ಶ್ರೀರಾಮ ಕ್ಷೇತ್ರದಲ್ಲಿ ಸೆ.3ರಂದು ನಡೆಯಲಿರುವ ಧರ್ಮಸಂಸದ್‌ಗೆ ಭರದ ಪೂರ್ವಸಿದ್ದತೆ ನಡೆಯುತ್ತಿದೆ ಎಂದು ಕನ್ಯಾಡಿ ಶ್ರೀರಾಮ ಕ್ಷೇತ್ರದ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ತಿಳಿಸಿದರು.

ಬುಧವಾರ ನಗರದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು ಧರ್ಮಸಂಸದ್‌ಗೆ ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ, ಆದಿಚುಂಚನಗಿರಿ ಮಠಾಧೀಶರು, ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ, ಮುಖ್ಯಮಂತ್ರಿ ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿಗಳಾದ ಯಡಿಯೂರಪ್ಪ, ಸಿದ್ದರಾಮಯ್ಯ ಅವರನ್ನು ಆಹ್ವಾನಿಸಲಾಗಿದೆ. ಬದರಿ, ಕೇದಾರ, ಗಂಗೋತ್ರಿ, ನೇಮಿಶಾರಣ್ಯ, ಚಿತ್ರಕೂಟ, ಉಜ್ಜಯಿನಿ, ನಾಸಿಕ್, ರಾಮೇಶ್ವರ, ಅಸ್ಸಾಂ, ಕೇರಳ, ತಮಿಳುನಾಡು ಸೇರಿದಂತೆ ದೇಶ ವಿದೇಶದಿಂದ 2 ಸಾವಿರಕ್ಕೂ ಅಧಿಕ ಸಾಧು ಸಂತರು ಭಾಗವಹಿಸಲಿದ್ದಾರೆ. ಈಗಾಗಲೇ ಉತ್ತರಭಾರತ, ದಕ್ಷಿಣ ಭಾರತ ಪ್ರವಾಸ ಕೈಗೊಳ್ಳಲಾಗಿದೆ. 25ಸಾವಿರಕ್ಕೂ ಹೆಚ್ಚು ಮಂದಿ ಭಾಗವಹಿಸುವ ನಿರೀಕ್ಷೆಯಿದೆ ಎಂದು ಹೇಳಿದರು.

 ಸುದ್ದಿಗೋಷ್ಠಿಯಲ್ಲಿ ಒಡಿಯೂರಿನ ಗುರುದೇವಾನಂದ ಸ್ವಾಮೀಜಿ, ಬಲ್ಯೊಟ್ಟುವಿನ ವಿಖ್ಯಾತಾನಂದ ಸ್ವಾಮೀಜಿ, ಕೇಮಾರುವಿನ ಈಶ ವಿಠಲದಾಸ ಸ್ವಾಮೀಜಿ, ತೀರ್ಥಹಳ್ಳಿಯ ರೇಣುಕಾನಂದ ಸ್ವಾಮೀಜಿ, ಬಾಳೆಕೋಡಿಯ ಶಶಿಕಾಂತ ಮಣಿ ಸ್ವಾಮೀಜಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News