×
Ad

ಅಲ್ಪಸಂಖ್ಯಾತರ ವಿವಿಧ ಯೋಜನೆಗಳ ಅರಿವು ಜನರಿಗೆ ತಲುಪಬೇಕು: ಸಾಜಿದ್ ಮುಲ್ಲಾ

Update: 2018-07-25 22:51 IST

ಭಟ್ಕಳ, ಜು. 25: ಸರ್ಕಾರವು ಅಲ್ಪಸಂಖ್ಯಾತರ ಕಲ್ಯಾಣಕ್ಕಾಗಿ ಹಲವು ಯೋಜನೆ ರೂಪಿಸಿದ್ದು ಜನರಿಗೆ ಇದರ ಮಾಹಿತಿ ಸರಿಯಾಗಿ ತಲುಪುತ್ತಿಲ್ಲ ಈ ಕಾರಣಕ್ಕಾಗಿಯೆ ಇಂದು ಯೋಜನೆಗಳ ಅರಿವು ಮೂಡಿಸುವ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಭಟ್ಕಳ ಉಪವಿಭಾಗದ ಸಹಾಯಕ ಆಯುಕ್ತ ಸಾಜಿದ್ ಮುಲ್ಲಾ ಹೇಳಿದರು.

ಅವರು ಬುಧವಾರ ಇಲ್ಲಿನ ಮಜ್ಲಿಸೆ ಇಸ್ಲಾಹ್-ವ-ತಂಝೀಮ್ ಹಾಗೂ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯ ವಿಸ್ತೀರ್ಣಾಧಿಕಾರಿಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದು ಸರ್ಕಾರದ ವಿವಿಧ ಯೋಜನೆಗಳ ಅರಿವು ಮೂಡಿರುವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.

ಭಟ್ಕಳ ತಾಲೂಕಿನ ಅಲ್ಪಸಂಖ್ಯಾತ ಸಮುದಾಯ ಶಿಕ್ಷಿತ ಸಮುದಾಯವಾಗಿದ್ದು ಸರ್ಕಾರದ ಯೋಜನೆಗಳ ಪ್ರಯೋಜನ ಪಡೆಯುವಲ್ಲಿ ಹೆಚ್ಚಿನ ಆಸಕ್ತಿವಹಿಸಬೇಕು, ವಿವಿಧ ಸಂಘಸಂಸ್ಥೆಗಳ ಮುಖಂಡರು ಯೋಜನೆಗಳ ಮಾಹಿತಿಯನ್ನು ಎಲ್ಲರಿಗೂ ತಲುಪಿಸುವ ಕಾರ್ಯವನ್ನು ಮಾಡಬೇಕು ಎಂದರು.

ತಹಶೀಲ್ದಾರ ವಿ.ಎನ್. ಬಾಡ್ಕರ್ ಮಾತನಾಡಿ, ಅಲ್ಪಸಂಖ್ಯಾತರ ಕಲ್ಯಾಣಕ್ಕಾಗಿ ಇರುವ ಯೋಜನೆಗಳು ಭಟ್ಕಳ ತಾಲೂಕಿನಾದ್ಯಂತ ಪರಿಣಾಮಕಾರಿ ಅನುಷ್ಠಾನಗೊಳಿಸುವ ಹೊಣೆ ಸಮುದಾಯದ ಯುವಕರದ್ದಾಗಿದ್ದು ಇದರ ಸಂಪೂರ್ಣ ಪ್ರಯೋಜನ ಪಡೆಯಲು ಮುಂದೆ ಬರಬೇಕು, ಭಟ್ಕಳದಲ್ಲಿ ಮೆಟ್ರಿಕ್ ನಂತರ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಸೌಲಭ್ಯ ಕಲ್ಪಿಸುವ ಉದ್ದೇಶದಿಂದ ಸುಮಾರು 9 ಗುಂಟೆ ಜಾಗವನ್ನು ಮಂಜೂರು ಮಾಡಲಾಗಿದ್ದು ಹಾಸ್ಟೆಲ್ ಕಟ್ಟಡಕ್ಕಾಗಿ ಸಮುದಾಯದ ಪ್ರತಿನಿಧಿಗಳು ಪ್ರಯತ್ನಪಡಬೇಕು ಎಂದರು.

ತಾಲೂಕು ವಿಸ್ತೀರ್ಣಾಧಿಕಾರಿ ಶಮ್ಸುದ್ದೀನ್ ಅಲ್ಪಸಂಖ್ಯಾತರ ವಿವಿಧ ಯೋಜನೆ, ಅವುಗಳು ಪಡೆಯಲು ಇರುವ ಮಾನದಂಡ, ಆರ್ಹತೆ ಮತ್ತಿತರ ವಿಷಯಗಳನ್ನು ವಿಸ್ತಾರವಾಗಿ ಸಾರ್ವಜನಿಕರ ಮುಂದಿಟ್ಟು ಈ ಎಲ್ಲ ಯೋಜನೆಗಳನ್ನು ಪ್ರಯೋಜನ ಪಡೆದುಕೊಳ್ಳುವಂತೆ ಮನವಿ ಮಾಡಿಕೊಂಡರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಂಝೀಮ್ ಸಂಸ್ಥೆಯ ಉಪಾಧ್ಯಕ್ಷ ಇನಾಯತುಲ್ಲಾ ಶಾಬಂದ್ರಿ ವಹಿಸಿದ್ದರು. ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಆರ್.ಮುಂಜಿ, ತಂಝೀಮ್ ಮುಖಂಡರಾದ ಫಾರೂಖ್ ಪಟೇಲ್ ಶಾಬಂದ್ರಿ, ಮೊಹತೆಶಮ್ ಜಾಫರ್, ಪುರಸಭೆ ಅಧ್ಯಕ್ಷ ಮುಹಮ್ಮದ್ ಸಾದಿಖ್ ಮಟ್ಟಾ, ಜಾಲಿ ಗ್ರಾ.ಪಂ ಅಧ್ಯಕ್ಷ ಆದಂ ಪಣಂಬೂರು ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ತಂಝೀಮ್ ಪ್ರಧಾನ ಕಾರ್ಯದರ್ಶಿ ಮುಹಿದ್ದೀನ್ ಅಲ್ತಾಫ್ ಖರೂರಿ ಪ್ರಸ್ತಾವಿಕವಾಗಿ ಮಾತನಾಡಿ ಎಲ್ಲರನ್ನು ಸ್ವಾಗತಿಸಿದರು. ಕಾರ್ಯದರ್ಶಿ ಮೌಲಾನ ಸೈಯ್ಯದ್ ಯಾಸಿರ್ ನದ್ವಿ ಬರ್ಮಾವರ್ ಕಾರ್ಯಕ್ರಮ ನಿರೂಪಿಸಿದರು.

ಈ ಸಂದರ್ಭದಲ್ಲಿ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯಿಂದ ವಿವಿಧ ಯೋಜನೆಗಳ ಮಾಹಿತಿ ಪುಸ್ತಕವನ್ನು ಸಹಾಯಕ ಆಯುಕ್ತ ಸಾಜಿದ್ ಮುಲ್ಲಾ ಬಿಡುಗಡೆಗೊಳಿಸಿದರು.

ಭಟ್ಕಳಕ್ಕೆ ಬೇಕು ಉರ್ದು ಭವನ-ಇನಾಯತುಲ್ಲಾ 

ನಮ್ಮಲ್ಲಿನ ಸಣ್ಣಪುಟ್ಟ ಸಮುದಾಯಗಳು ತಮ್ಮದೆ ಆದ ಪ್ರತ್ಯೇಕ ಸಮುದಾಯ ಭವನಗಳನ್ನು ಹೊಂದಿದ್ದು ಸರ್ಕಾರದ ಅನುದಾನಗಳ ಮೂಲಕ ನಿರ್ಮಿಸಿ ಕೊಂಡಿದ್ದಾರೆ. ಆದರೆ ಭಟ್ಕಳದಲ್ಲಿ ಶೇ. 30ರಷ್ಟಿರುವ ಮುಸ್ಲಿಮರಿಗೆ ಮಾತ್ರ ಇದುವರೆಗೆ ಯಾವುದೇ ಭವನವಾಗಲಿ ಕಲ್ಯಾಣಮಂಟಪವಾಗಲಿ ಇರುವುದಿಲ್ಲ. ಸರ್ಕಾರ ಈ ಬಗ್ಗೆ ಗಮನ ಹರಿಸಿ ಎಲ್ಲ ರೀತಿಯಿಂದ ಪ್ರಯೋಜನಕ್ಕೆ ಬರುವ ಉರ್ದು ಭವನ ನಿರ್ಮಾಣಕ್ಕೆ ಮುಂದಾಗಬೇಕೆಂದು ತಂಝೀಮ್ ಉಪಾಧ್ಯಕ್ಷ ಇನಾಯತುಲ್ಲಾ ಶಾಬಂದ್ರಿ ಅಭಿಪ್ರಾಯ ಪಟ್ಟರು.

ಅವರು ಬುಧವಾರ ತಂಝೀಮ್ ಕಾರ್ಯಲಯದಲ್ಲಿ ನಡೆದ ಅಲ್ಪಸಂಖ್ಯಾತ ಕಲ್ಯಾಣಕ್ಕಾಗಿ ಇರುವ ವಿವಿಧ ಯೋಜನೆಗಳ ಮಾಹಿತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸರ್ಕಾರದಿಂದ ಅಲ್ಪಸಂಖ್ಯಾತರಿಗೆ ದೊರೆಯುವ ಪ್ರತಿಯೊಂದ ಸೌಲಭ್ಯಗಳನ್ನು ಜನರಿಗೆ ತಲುಪಿಸುವ ಪ್ರಯತ್ನ ತಂಝೀಮ್ ಸಂಸ್ಥೆ ಮುಂದಿನ ದಿನಗಳಲ್ಲಿ ಮಾಡಲಿದೆ. ಶಾದಿ ಮಹಲ್ ನ ಬೇಡಿಕೆ ಭಟ್ಕಳದಲ್ಲಿ ಈಗ ಕೇಳಿ ಬರುತ್ತಿದ್ದು ಅದಕ್ಕಾಗಿ ಸರ್ಕಾರದ ಮಟ್ಟದಲ್ಲಿ ಪ್ರಯತ್ನಿಸುವುದಾಗಿ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News