×
Ad

ವಿಟ್ಲ: ಅಧಿಕಾರಿಗಳಿಂದ ಬಡಕುಟುಂಬದ ಮನೆ ಧ್ವಂಸಕ್ಕೆ ಯತ್ನ; ಆರೋಪ

Update: 2018-07-26 18:09 IST

ಬಂಟ್ವಾಳ, ಜು. 26: ವಿಟ್ಲ ಕಸಬಾ ಗ್ರಾಮದ ಕೈಂತಿಲ ಎಂಬಲ್ಲಿರುವ ಬಡಕುಟುಂಬದ ಮನೆಯನ್ನು ಕಂದಾಯ ಇಲಾಖೆ ಹಾಗೂ ಪಟ್ಟಣ ಪಂಚಾಯತ್ ಅಧಿಕಾರಿಗಳು ಧ್ವಂಸ ಮಾಡಲು ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿ ಹಾಗೂ ಕುಟುಂಬಕ್ಕೆ ಸೂಕ್ತ ರಕ್ಷಣೆ ನೀಡುವಂತೆ ಒತ್ತಾಯಿಸಿ ವಾದಿರಾಜ ಆಚಾರಿ ಕುಟುಂಬದ ರಕ್ಷಣಾ ಸಮಿತಿ ವತಿಯಿಂದ ವಿಟ್ಲ ಪಟ್ಟಣ ಪಂಚಾಯತ್ ಮುಂಭಾಗದಲ್ಲಿ ಗುರುವಾರ ಧರಣಿ ನಡೆಸಲಾಯಿತು.

ವಾದಿರಾಜ ಆಚಾರಿ ಕುಟುಂಬದ ರಕ್ಷಣಾ ಸಮಿತಿ ಅಧ್ಯಕ್ಷ ರಾಮಣ್ಣ ವಿಟ್ಲ ಮಾತನಾಡಿ, ವಿಟ್ಲ ಕಸಬಾ ಗ್ರಾಮದ ಕೈಂತಿಲ ಎಂಬಲ್ಲಿ ದಿ.ಕಾಂತಪ್ಪ ಆಚಾರಿ ಕುಟುಂಬವು ಕೃಷಿ ಭೂಮಿ ಹೊಂದಿ ವಾಸಿಸಿಕೊಂಡು ಬರುತ್ತಿದ್ದು, ಭೂ ಮಸೂದೆ ಕಾಯಿದೆ ಪ್ರಕಾರ ಮಂಜೂರಾದ ಭೂಮಿಯನ್ನು ಭೂ ಮಾಲಕರು ಮೋಸದಿಂದ ಮನೆಯನ್ನು 2016ರಲ್ಲಿ ಧ್ವಂಸ ಮಾಡಿದ್ದರು. ಬಳಿಕ ಕುಟುಂಬವು ಅಕ್ರಮ-ಸಕ್ರಮಕ್ಕೆ ಅರ್ಜಿ ಹಾಕಿದ ಜಾಗದಲ್ಲಿ ಸಾರ್ವಜನಿಕ ನೆರವಿ ನೊಂದಿಗೆ ಮನೆ ನಿರ್ಮಿಸಿ ವಾಸ ಮಾಡುತ್ತಿದ್ದರು. 2018ರ ಜನವರಿಯಲ್ಲಿ ವಿಟ್ಲ ಪಟ್ಟಣ ಪಂಚಾಯತ್ ಅಧಿಕಾರಿಗಳು ಕುಟುಂಬವನ್ನು ಹೊರ ಹಾಕಿ ಮನೆಯನ್ನು ಧ್ವಂಸ ಮಾಡಿದ್ದರು ಎಂದು ಆರೋಪಿಸಲಾಗಿದೆ.

ಧ್ವಂಸದ ಬಳಿಕ ಸಾರ್ವಜನಿಕರು ಸೇರಿ ಮನೆ ನಿರ್ಮಿಸಿ ಕೊಟ್ಟಿದ್ದರು. ಭೂ ಮಾಲಕರ ಕುಮ್ಮಕ್ಕಿನಿಂದ ಹಾಗೂ ಹಣದ ಪ್ರಭಾವದಿಂದ ಬಂಟ್ವಾಳ ತಹಶೀಲ್ದಾರ ಹಾಗೂ ವಿಟ್ಲ ಪಟ್ಟಣ ಪಂಚಾಯತ್ ಅಧಿಕಾರಿಗಳು ಜು. 17ರಂದು ಮನೆ ತೆರವಿಗೆ ನೋಟಿಸ್ ಜಾರಿ ಮಾಡಿ ಕಂದಾಯ ಅಧಿಕಾರಿಗಳು, ವಿಟ್ಲ ಪೊಲೀಸರು, ವಿಟ್ಲ ಪಟ್ಟಣ ಪಂಚಾಯತ್ ಕಸ ಗುಡಿಸುವ ಸಿಬ್ಬಂದಿ ಜೆಸಿಬಿ ಮೂಲಕ ತೆರವುಗೊಳಿಸಲು ಆಗಮಿಸಿದ್ದರು. ಸಾರ್ವಜನಿಕರು ಪ್ರತಿರೋಧ ತೋರಿದಾಗ ಅರ್ಧದಲ್ಲಿ ಬಿಟ್ಟು ತೆರಳಿದ್ದಾರೆ. ಇಂತಹ ಕಾನೂನು ಬಾಹಿರ ಪ್ರವೃತ್ತಿಯನ್ನು ನಿಲ್ಲಿಸಬೇಕು ಅವರು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಕರ್ನಾಟಕ ಪ್ರಾಂತ ರೈತ ಸಂಘದ ಅಧ್ಯಕ್ಷ ಕೃಷ್ಣಪ್ಪ ಸಾಲಿಯಾನ್, ಪ್ರಧಾನ ಕಾರ್ಯದರ್ಶಿ ಯಾದವ ಶೆಟ್ಟಿ, ವಾದಿರಾಜ ಆಚಾರಿ ಕುಟುಂಬದ ರಕ್ಷಣಾ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News