ಹೆಜಮಾಡಿ ಟೋಲ್‌ಫ್ಲಾಝಾ: ಸಂತ್ರಸ್ಥ ಕುಟುಂಬಗಳಿಗೆ ನಿವೇಶನ
ಪಡುಬಿದ್ರಿ, ಜು. 26: ಹೆಜಮಾಡಿಯಲ್ಲಿ ನಿರ್ಮಾಣವಾದ ರಾಷ್ಟ್ರೀಯ ಹೆದ್ದಾರಿ 66ರ ಟೋಲ್ ಫ್ಲಾಝಾದಿಂದ ಸಂತ್ರಸ್ಥರಾದ 14ಕುಟುಂಬಗಳಿಗೆ ನಿರಂತರ ಹೋರಾಟದ ಫಲವಾಗಿ ಹೆಜಮಾಡಿ ಗ್ರಾಮ ಪಂಚಾಯ್ತಿ ಸಮೀಪ ಸರ್ಕಾರಿ ಜಮೀನು ಮಂಜೂರಾಗಿದ್ದು, ವಸತಿ ಯೋಜನೆಯಡಿ ಮನೆಗಳು ನಿರ್ಮಾಣ ಹಂತದಲ್ಲಿದೆ.
ಹೆಜಮಾಡಿ ಗ್ರಾಮ ಪಂಚಾಯ್ತಿಯ ರಾಷ್ಟ್ರೀಯ ಹೆದ್ದಾರಿ 66ರ ಶಿವನಗರದಲ್ಲಿ ಸುಮಾರು 20 ವರ್ಷಗಳಿಂದ ವಾಸಿಸುತ್ತಿದೆ. ಈ ಕುಟುಂಬಗಳಲ್ಲಿ ಕೆಲವೇ ಮಂದಿಗಷ್ಟೇ ಹಕ್ಕುಪತ್ರ ಲಭಿಸಿತ್ತು. ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಕಾಮಗಾರಿಗೆ ಭೂಸ್ವಾಧೀನಗೊಂಡಾಗ ಈ ಕುಟುಂಬಗಳಿಗೆ ಪರಿಹಾರವೂ ದೊರಕಿತ್ತು. ಆದರೆ ಸೂಕ್ತ ನಿವೇಶನ ಇಲ್ಲದೆ ಭೂಸ್ವಾಧೀನಗೊಂಡ ಜಾಗದಲ್ಲಿಯೇ 14 ಕುಟುಂಬಗಳು ವಾಸಿಸುತಿತ್ತು. ಸೂಕ್ತ ನಿವೇಶನ ನೀಡುವಂತೆ ದಲಿತ ಸಂಘರ್ಷ ಸಮಿತಿಯ ವತಿಯಿಂದ ಹಲವು ಭಾರೀ ಹೋರಾಟ ನಡೆದಿತ್ತು.
ಇದೀಗ ಸಂತ್ರಸ್ಥ ಕುಟುಂಬಗಳಿಗೆ ಪಂಚಾಯತಿ ಬಳಿ ಇರುವ 48 ಸೆಂಟ್ಸ್ ಸರ್ಕಾರಿ ಜಮೀನಿನಲ್ಲಿ ಪ್ರತೀ ಕುಟುಂಬಕ್ಕೂ 2.12 ಸೆಂಟ್ಸ್ ಜಮೀನು ವಿಂಗಡಿಸಲಾಗಿದೆ.
ಸರ್ಕಾರದ ಬಸವ ವಸತಿ ಯೋಜನೆಯಡಿ ತಲಾ 250 ಚದರ ಅಡಿಗಳ 14 ಮನೆಗಳನ್ನು ಇಲ್ಲಿ ನಿರ್ಮಾಣ ಮಾಡಲಾಗುತ್ತಿದೆ. ರಾಷ್ಟ್ರೀಯ ಹೆದ್ದಾರಿ ಗುತ್ತಿಗೆದಾರ ನವಯುಗ ಕಂಪೆನಿಯ ರೂ. 9 ಲಕ್ಷ ಅನುದಾನ ಬಳಸಿ ರೂ 31 ಲಕ್ಷ ವೆಚ್ಚದಲ್ಲಿ ಈ ಮನೆಗಳಿಗೆ ಬಳಸಲಾಗುತ್ತಿದೆ. ಇದರಲ್ಲಿ 6 ಪರಿಶಿಷ್ಟ ಜಾತಿ, ಒಂದು ಅಲ್ಪಸಂಖ್ಯಾತ ಹಾಗೂ ಇತರ ವರ್ಗದ 7 ಕುಟುಂಬಗಳಿವೆ. ಬಸವ ವಸತಿ ಯೋಜನೆಯಡಿ ಪರಿಶಿಷ್ಟ ಜಾತಿಯ 6 ಫಲಾನುಭವಿಗಳಿಗೆ ತಲಾ ರೂ. 1.65 ಲಕ್ಷ ಹಾಗೂ ಇತರರಿಗೆ ತಲಾ ರೂ 1.50 ಲಕ್ಷ ಅನುದಾನ ಬಿಡುಗಡೆಯಾಗಲಿದೆ. ಈಗಾಗಲೇ ಪ್ರಥಮ ಹಂತದ ಮೊತ್ತ ಬಿಡುಗಡೆಯಾಗಿದ್ದು, ಬಾಕಿಯಿರುವ ಮೊತ್ತ ಹಂತ ಹಂತವಾಗಿ ಬಿಡುಗಡೆಯಾಗಲಿದೆ. ವಸತಿ ನಿರ್ಮಾಣ ಕಾಮಗಾರಿಯನ್ನು ಉಡುಪಿ ನಿರ್ಮಿತಿ ಕೇಂದ್ರಕ್ಕೆ ವಹಿಸಿಕೊಡಲಾಗಿದೆ.
ಅಡುಗೆ ಕೋಣೆ, ಹಾಲ್, ಹಾಗೂ ಬೆಡ್‌ರೂಂ ಒಳಗೊಂಡಿದೆ. ಮನೆ ಹೊರಭಾಗದಲ್ಲಿ ಪ್ರತ್ಯೇಕವಾಗಿ ಶೌಚಾಲಯವನ್ನು ನಿರ್ಮಾಣ ಮಾಡಲಾಗುತ್ತಿದೆ. ಮೂರು ತಿಂಗಳಿನೊಳಗೆ ಮನೆ ನಿರ್ಮಾಣ ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದು ಉಡುಪಿ ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಅರುಣ್ ಕುಮಾರ್ ಹೇಳುತ್ತಾರೆ.
ದಸಂಸ, ಹೆದ್ದಾರಿ ಹೋರಾಟ ಸಮಿತಿ ಹಾಗೂ ಇತರ ಸಂಘಟನೆಗಳೊಂದಿಗೆ ನಡೆಸಿದ ಸಂಘಟಿತ ಹೋರಾಟದ ಫಲವಾಗಿ ಸಂತ್ರಸ್ಥ ಕುಟುಂಬಗಳಿಗೆ ಹೆಜಮಾಡಿ ಗ್ರಾಮ ಪಂಚಾಯ್ತಿ ಸಮೀಪವೇ ನಿವೇಶನ ದೊರಕಿದೆ ಎನ್ನುತ್ತಾರೆ ದಸಂಸ ಮುಖಂಡ ಶೇಖರ್ ಹೆಜಮಾಡಿ.