ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮುವಲ್ಲಿ ಇಮ್ರಾನ್ ಖಾನ್ ಅವರ ಪಕ್ಷದ ದಾಪುಗಾಲು
ಇಸ್ಲಾಮಾಬಾದ್,ಜು.26: ಚುನಾವಣಾ ಅಕ್ರಮಗಳು ನಡೆದಿವೆ ಎಂಬ ಎದುರಾಳಿ ಪಕ್ಷಗಳ ಆರೋಪಗಳ ನಡುವೆಯೇ ಪಾಕಿಸ್ತಾನದ ಸಾರ್ವತ್ರಿಕ ಚುನಾವಣೆಗಳಲ್ಲಿ ಮಾಜಿ ಕ್ರಿಕೆಟಿಗ ಹಾಗೂ ಹಾಲಿ ರಾಜಕಾರಣಿ ಇಮ್ರಾನ್ ಖಾನ್ ಅವರ ಪಾಕಿಸ್ತಾನ ತೆಹ್ರಿಕ್-ಎ-ಇನ್ಸಾಫ್(ಪಿಟಿಐ) ಪಾರ್ಟಿಯು ಏಕೈಕ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮುವ ಲಕ್ಷಣಗಳು ಸ್ಪಷ್ಟವಾಗಿವೆ. ಅದು 119 ಕ್ಷೇತ್ರಗಳಲ್ಲಿ ಮುನ್ನಡೆಯನ್ನು ಸಾಧಿಸಿದೆ.
ಬುಧವಾರ ಮತದಾನ ನಡೆದು ಮತ ಎಣಿಕೆ ಆರಂಭಗೊಂಡಿದ್ದು,ಫಲಿತಾಂಶಗಳು ಹೊರಹೊಮ್ಮತೊಡಗಿದಂತೆ ದೇಶದ ರಾಜಕೀಯ ಕೇಂದ್ರವೆಂದೇ ಪರಿಗಣಿಸಲಾಗಿರುವ ಪಂಜಾಬ್ ಪ್ರಾಂತದ ರಾಜಧಾನಿ ಲಾಹೋರ್‌ನಲ್ಲಿ ಪಿಟಿಐ ಬೆಂಬಲಿಗರು ವಿಜಯೋತ್ಸವದಲ್ಲಿ ತೊಡಗಿದ್ದರು.
ರಾಷ್ಟ್ರೀಯ ಅಸೆಂಬ್ಲಿಯ 272 ಸ್ಥಾನಗಳ ಪೈಕಿ 119 ಸ್ಥಾನಗಳಲ್ಲಿ ಪಿಟಿಐ ಮುನ್ನಡೆಯಲ್ಲಿದ್ದರೆ ಅದರ ಮುಖ್ಯ ಪ್ರತಿಸ್ಪರ್ಧಿ ಪಾಕಿಸ್ತಾನ ಮುಸ್ಲಿಂ ಲೀಗ್-ನವಾಝ್(ಪಿಎಂಎಲ್-ಎನ್) 65 ಸ್ಥಾನಗಳಲ್ಲಿ ಮಂದಿದೆ. 44 ಸ್ಥಾನಗಳಲ್ಲಿ ಪಾಕಿಸ್ತಾನ ಪೀಪಲ್ಸ್ ಪಾರ್ಟಿ(ಪಿಪಿಪಿ) ಮತ್ತು 17 ಸ್ಥಾನಗಳಲ್ಲಿ ಇತರ ಪಕ್ಷಗಳು ಮುನ್ನಡೆಯಲ್ಲಿವೆ.
ಪಿಟಿಐ ರಾಷ್ಟ್ರೀಯ ಅಸೆಂಬ್ಲಿಯಲ್ಲಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ ಎನ್ನುವುದನ್ನು ಆರಂಭಿಕ ಫಲಿತಾಂಶಗಳು ಬೆಟ್ಟು ಮಾಡಿವೆ.
ಪಾಕಿಸ್ತಾನದ ರಾಷ್ಟ್ರೀಯ ಅಸೆಂಬ್ಲಿಯು ಒಟ್ಟು 342 ಸದಸ್ಯರನ್ನು ಹೊಂದಿದ್ದು,ಈ ಪೈಕಿ 272 ಸದಸ್ಯರನ್ನು ನೇರವಾಗಿ ಚುನಾಯಿಸಲಾಗುತ್ತದೆ. ಉಳಿದ 60 ಸ್ಥಾನಗಳು ಮಹಿಳೆಯರಿಗೆ ಮತ್ತು 10 ಸ್ಥಾನಗಳು ಧಾರ್ಮಿಕ ಅಲ್ಪಸಂಖ್ಯಾತರಿಗೆ ಮೀಸಲಾಗಿದ್ದು,ಇವುಗಳಿಗೆ ಶೇ.ಐದಕ್ಕೂ ಹೆಚ್ಚು ಮತಗಳನ್ನು ಗಳಿಸಿರುವ ಪಕ್ಷಗಳ ಪ್ರತಿನಿಧಿತ್ವಕ್ಕನುಗುಣವಾಗಿ ಆಯ್ಕೆಯು ನಂತರ ನಡೆಯುತ್ತದೆ.
ಒಟ್ಟು 172 ಸ್ಥಾನಗಳನ್ನು ಗಳಿಸುವ ಪಕ್ಷವು ಮಾತ್ರ ಸರಕಾರವನ್ನು ರಚಿಸುವ ಹಕ್ಕನ್ನು ಹೊಂದಿರುತ್ತದೆ. ಯಾವುದೇ ಒಂದು ಪಕ್ಷವು ನೇರವಾಗಿ ಚುನಾಯಿತಗೊಂಡ ಕನಿಷ್ಠ 137 ಸದಸ್ಯರನ್ನು ಹೊಂದಿದ್ದರೆ ಅದು ಸ್ವಂತಬಲದಲ್ಲಿ ಸರಕಾರವನ್ನು ರಚಿಸಲು ಸಾಧ್ಯವಾಗುತ್ತದೆ.
ಮತ ಎಣಿಕೆ ಪ್ರಕ್ರಿಯೆಯ ಪಾರದರ್ಶಕತೆಯನ್ನು ಪ್ರಶ್ನಿಸಿರುವ ಪಿಎಂಎಲ್-ಎನ್ ಮತ್ತು ಪಿಪಿಪಿ ತಮ್ಮ ಚುನಾವಣಾ ಏಜೆಂಟ್‌ಗಳಿಗೆ ಮತ ಎಣಿಕೆ ಕೇಂದ್ರಗಳಿಗೆ ಪ್ರವೇಶ ನಿರಾಕರಿಸುವ ಮೂಲಕ ಕಾನೂನನ್ನು ಉಲ್ಲಂಘಿಸಲಾಗಿದೆ ಎಂದು ಆರೋಪಿಸಿವೆ.
ಭ್ರಷ್ಟಚಾರ ಪ್ರಕರಣದಲ್ಲಿ ತನ್ನ ಸೋದರ ಹಾಗೂ ಮಾಜಿ ಪ್ರಧಾನಿ ನವಾಝ್ ಶರೀಫ್ ಅವರು ಜೈಲುಪಾಲಾದ ಬಳಿಕ ಪ್ರಧಾನಿಯಾಗುವ ಆಕಾಂಕ್ಷೆಯನ್ನು ಹೊಂದಿದ್ದ ಪಿಎಂಎಲ್-ಎನ್ ಅಧ್ಯಕ್ಷ ಶಾಬಾಜ್ ಶರೀಫ್ ಅವರು ಚುನಾವಣಾ ಫಲಿತಾಂಶಗಳನ್ನು ಸಾರಾಸಗಟಾಗಿ ತಿರಸ್ಕರಿಸಿದ್ದಾರೆ. ರಾಜಾರೋಷ ಚುನಾವಣಾ ಅಕ್ರಮಗಳು ನಡೆದಿವೆ ಎಂದು ಅವರು ಆರೋಪಿಸಿದ್ದಾರೆ.
ಚುನಾವಣಾ ಅಕ್ರಮಗಳನ್ನು ನಡೆಸಿರುವವರನ್ನು ಅವರು ಹೆಸರಿಸಲಿಲ್ಲವಾದರೂ, ದೇಶದ ಪ್ರಭಾವಿ ಸೇನೆಯ ವಿರುದ್ಧ ಚುನಾವಣಾ ಅಕ್ರಮಗಳ ಆರೋಪಗಳು ಕೇಳಿಬಂದಿವೆ.
ತಮ್ಮ ಚುನಾವಣಾ ಏಜೆಂಟ್‌ಗಳನ್ನು ಮತ ಎಣಿಕೆ ಕೇಂದ್ರದಿಂದ ಹೊರಗೆ ಹಾಕಲಾಗಿದೆ ಅಥವಾ ಪ್ರಮಾಣೀಕೃತ ಫಲಿತಾಂಶಗಳನ್ನು ಒದಗಿಸಲು ಚುನಾವಣಾಧಿಕಾರಿಗಳು ನಿರಾಕರಿಸಿದ್ದಾರೆ ಎಂದು ಆವಾಮಿ ನ್ಯಾಷನಲ್ ಪಾರ್ಟಿ,ಮುತ್ತಹಿದಾ ಕ್ವಾಮಿ ಮೂವ್‌ಮೆಂಟ್-ಪಾಕಿಸ್ತಾನ,ಪಾಕ್ ಸರ್‌ಝಮೀನ್ ಪಾರ್ಟಿ,ಮುತ್ತಹಿದಾ ಮಜ್ಲಿಸ್-ಇ-ಅಮಲ್ ಮತ್ತು ತಹ್ರಿಕ್-ಇ-ಲಬ್ಬೈಕ್ ಪಾಕಿಸ್ತಾನ ಆರೋಪಿಸಿವೆ.
ಪಿಪಿಪಿ ಸೇರಿದಂತೆ ಇತರ ಐದು ಪಕ್ಷಗಳು ಚುನಾವಣಾ ಅಕ್ರಮಗಳ ವಿರುದ್ಧ ಧ್ವನಿಯೆತ್ತಿವೆ ಮತ್ತು ಅವುಗಳೊಂದಿಗೆ ಸಮಾಲೋಚಿಸಿದ ಬಳಿಕ ಮುಂದಿನ ಕ್ರಮವನ್ನು ಪ್ರಕಟಿಸುವುದಾಗಿ ಶರೀಫ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಈ ಅನ್ಯಾಯದ ವಿರುದ್ಧ ಹೋರಾಡುತ್ತೇವೆ ಮತ್ತು ಅದಕ್ಕಾಗಿ ಎಲ್ಲ ಮಾರ್ಗಗಳನ್ನೂ ಬಳಸಿಕೊಳ್ಳುತ್ತೇವೆ ಎಂದರು.
ಚುನಾವಣಾ ಆಯೋಗದಿಂದ ಆರೋಪಗಳ ತಿರಸ್ಕಾರ
ಬುಧವಾರ ಅನಿರೀಕ್ಷಿತ ಸುದ್ದಿಗೋಷ್ಠಿಯಲ್ಲಿ ಪಾಕಿಸ್ತಾನದ ಮುಖ್ಯ ಚುನಾವಣಾ ಆಯುಕ್ತ ಮುಹಮ್ಮದ್ ರಝಾ ಖಾನ್ ಅವರು ಚುನಾವಣಾ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದಕ್ಕಾಗಿ ಪಾಕಿಸ್ತಾನದ ಜನತೆಯನ್ನು ಅಭಿನಂದಿಸಿದರು. ಇದೇ ವೇಳೆ ಚುನಾವಣಾ ಫಲಿತಾಂಶಗಳನ್ನು ಪ್ರಕಟಿಸುವಲ್ಲಿ ಉಂಟಾಗಿರುವ ವಿಳಂಬವು ಸ್ವಲ್ಪ ಮಟ್ಟಿಗೆ ಆಕ್ರೋಶಕ್ಕೆ ಕಾರಣವಾಗಿದೆ ಎಂದು ಒಪ್ಪಿಕೊಂಡ ಅವರು,ಚುನಾವಣಾ ಆಯೋಗವು ಹೊಸದಾಗಿ ಜಾರಿಗೆ ತಂದಿರುವ ಫಲಿತಾಂಶ ಪ್ರಸರಣ ವ್ಯವಸ್ಥೆಯು ಇದಕ್ಕೆ ಕಾರಣವಾಗಿದೆ ಎಂದರು.
ಚುನಾವಣಾ ಫಲಿತಾಂಶಗಳ ಕುರಿತು ಶಂಕೆಗಳು ಮತ್ತು ಆರೋಪಗಳನ್ನು ತಳ್ಳಿಹಾಕಿದ ಅವರು,ನಮ್ಮ ಕರ್ತವ್ಯವನ್ನು ನಾವು ಸರಿಯಾಗಿ ನಿರ್ವಹಿಸಿದ್ದೇವೆ ಎನ್ನುವುದನ್ನು ರುಜುವಾತು ಮಾಡುತ್ತೇವೆ ಎಂದರು.
ಚುನಾವಣೆಗಳು ಮುಕ್ತ ಮತ್ತು ನ್ಯಾಯಸಮ್ಮತವಾಗಿ ನಡೆದಿದ್ದು,ಆಯೋಗಕ್ಕೆ ಯಾವುದೇ ದೂರು ಬಂದಿಲ್ಲ. ಯಾರಾದರೂ ಪುರಾವೆಗಳನ್ನು ಸಲ್ಲಿಸಿದರೆ ನಾವು ಸೂಕ್ತ ಕ್ರಮವನ್ನು ಕೈಗೊಳ್ಳುತೇವೆ ಎಂದರು.
ಪ್ರಾಂತೀಯ ಅಸೆಂಬ್ಲಿ ಚುನಾವಣೆ
ಸಾರ್ವತ್ರಿಕ ಚುನಾವಣೆಗಳ ಜೊತೆ ಪಂಜಾಬ್,ಸಿಂಧ್,ಬಲೂಚಿಸ್ತಾನ ಮತ್ತು ಖೈಬರ್-ಪಖ್ತುಂಖ್ವಾ ಪ್ರಾಂತೀಯ ಅಸೆಂಬ್ಲಿಗಳಿಗೂ ಚುನಾವಣೆಗಳು ನಡೆದಿದ್ದವು.
ತಾತ್ಕಾಲಿಕ ಫಲಿತಾಂಶಗಳಂತೆ ಪಂಜಾಬ್‌ನಲ್ಲಿ ಒಟ್ಟು 299 ಸ್ಥಾನಗಳ ಪೈಕಿ 129ರಲ್ಲಿ ಪಿಎಂಎಲ್-ಎನ್ ಮತ್ತು 121ರಲ್ಲಿ ಪಿಟಿಐ ಮುನ್ನಡೆಯಲ್ಲಿವೆ. ಪಿಟಿಐ ಸಿಂಧ್‌ನಲ್ಲಿ 73 ಮತ್ತು ಖೈಬರ್-ಪಖ್ತುಂಖ್ವಾದಲ್ಲಿ 60 ಸ್ಥಾನಗಳಲ್ಲಿ ಮುನ್ನಡೆಯಲ್ಲಿದ್ದರೆ, ಬಲೂಚಿಸ್ತಾನದಲ್ಲಿ ಬಲೂಚಿಸ್ತಾನ ಅವಾಮಿ ಪಾರ್ಟಿಯು ಇತರ ಪಕ್ಷಗಳಿಗಿಂತ ಮುಂದಿದೆ.
ಬುಧವಾರ ಮತದಾನದ ಸಂದರ್ಭದಲ್ಲಿ ಭೀಕರ ಆತ್ಮಹತ್ಯಾದಾಳಿಯಲ್ಲಿ ಹಲವಾರು ಜನರು ಮೃತಪಟ್ಟಿದ್ದಾರೆ. ಚುನಾವಣಾ ಪ್ರಕ್ರಿಯೆಯಲ್ಲಿ ಸೇನೆಯ ಹಸ್ತಕ್ಷೇಪವನ್ನು ಆರೋಪಿಸಲಾಗಿದ್ದು,ಹಲವಾರು ಪಕ್ಷಗಳು ಇಡೀ ಚುನಾವಣಾ ಪ್ರಕ್ರಿಯೆ ಬಗ್ಗೆ ಆಕ್ಷೇಪಗಳನ್ನೆತ್ತಿವೆ.
ಈ ಚುನಾವಣೆಯು ದೇಶದ 70 ವರ್ಷಗಳ ಇತಿಹಾಸದಲ್ಲಿ ಎರಡನೇ ಬಾರಿ ಪ್ರಜಾಸತ್ತಾತ್ಮಕವಾಗಿ ಅಧಿಕಾರ ವರ್ಗಾವಣೆಗೆ ಸಾಕ್ಷಿಯಾಗುತ್ತಿದೆ.
ಚುನಾವಣೆಗೆ ಮುನ್ನ ಮಾಧ್ಯಮಗಳ ವಿರುದ್ಧ ವ್ಯಾಪಕ ದಾಳಿಗಳು ನಡೆದಿದ್ದು,ಸೇನೆಯು ಇಮ್ರಾನ್ ಖಾನ್ ಅವರ ಚುನಾವಣಾ ಪ್ರಚಾರವನ್ನು ರಹಸ್ಯವಾಗಿ ಬೆಂಬಲಿಸಿತ್ತು ಮತ್ತು ಅವರ ರಾಜಕೀಯ ವಿರೋಧಿಗಳನ್ನು ಗುರಿಯಾಗಿಸಿಕೊಂಡಿತ್ತು ಎಂಬ ಆರೋಪಗಳಿವೆ.
ದೇಶದ ಇತಿಹಾಸದಲ್ಲಿ ಅರ್ಧಕ್ಕೂ ಹೆಚ್ಚಿನ ಅವಧಿಗೆ ವಿವಿಧ ಬಂಡಾಯಗಳ ಮೂಲಕ ಸೇನೆಯು ಪಾಕಿಸ್ತಾನವನ್ನು ಆಳಿದೆ.
ಮತಗಟ್ಟೆಗಳ ಒಳಗೆ ಮತ್ತು ಹೊರಗೆ ಸೇನೆಯನ್ನು ನಿಯೋಜಿಸಿದ್ದಕ್ಕಾಗಿ ಚುನಾವಣಾ ಆಯೋಗವು ಟೀಕೆಗೆ ಗುರಿಯಾಗಿದೆ.
ಭಯೋತ್ಪಾದಕ ಗುಂಪುಗಳಿಗೆ ಚುನಾವಣೆಯಲ್ಲಿ ಭಾಗವಹಿಸಲು ಅವಕಾಶ ನೀಡಿದ್ದರ ಕುರಿತು ವಿವಾದಗಳೂ ಎದ್ದಿವೆ. ಮುಂಬೈ ದಾಳಿಯ ರೂವಾರಿ ಹಫೀಜ್ ಸಯೀದ್ ನೇತೃತ್ವದ ಜಮಾತ್-ಉದ್-ದಾವಾ ಇವುಗಳಲ್ಲಿ ಪ್ರಮುಖವಾಗಿದೆ.