ಬಂಟ್ವಾಳ: ಒಂಟಿ ಮಹಿಳೆಯ ಮನೆಗೆ ನುಗ್ಗಿದ ಮುಸುಕುದಾರಿ
ಬಂಟ್ವಾಳ, ಜು. 26: ಒಂಟಿ ಮಹಿಳೆಯಿದ್ದ ಮನೆಯೊಂದಕ್ಕೆ ಮುಸುಕುದಾರಿಯೊಬ್ಬ ನುಗ್ಗಿ ಆಕೆಗೆ ಚೂರಿ ತೋರಿಸಿ ನಗ, ನಗದು ದೋಚಿರುವ ಘಟನೆ ಬಂಟ್ವಾಳ ಗ್ರಾಮಾಂತರ ಠಾಣೆ ವ್ಯಾಪ್ತಿಯ ಪಾಪುತಡ್ಕ ಎಂಬಲ್ಲಿ ಗುರುವಾರ ನಡೆದಿದೆ.
ಬಂಟ್ವಾಳ ತಾಲೂಕಿನ ಕುರಿಯಾಳ ಗ್ರಾಮದ ಪಾಪುತಡ್ಕ ನಿವಾಸಿ ಜಗನ್ನಾಥ ಪೂಜಾರಿ ಎಂಬವರ ಮನೆಗೆ ನುಗ್ಗಿದ ಮುಸುಕುದಾರಿ ತನ್ನ ಗರ್ಭಿಣಿ ಪತ್ನಿಗೆ ಚೂರಿ ತೋರಿಸಿ ನಗ, ನಗದು ನೀಡುವಂತೆ ಬೆದರಿಕೆಯೊಡ್ಡಿದ್ದಾನೆ. ಬಳಿಕ ಕಪಾಟಿನಲ್ಲಿದ್ದ 8 ಪವನು ಚಿನ್ನ ಹಾಗೂ ನಗದು 13 ಸಾವಿರ ರೂ.ವನ್ನು ದೋಚಿ ಪರಾರಿಯಾಗಿದ್ದಾನೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಘಟನೆಯ ಬಗ್ಗೆ ಮಾಹಿತಿ ಪಡೆದ ಬಂಟ್ವಾಳ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ, ಜಗನ್ನಾಥ ಅವರ ದೂರಿನಂತೆ ಪ್ರಕರಣ ದಾಖಲಿಸಿದ್ದಾರೆ. ಕೃತ್ಯಕ್ಕೆ ಸಂಬಂಧಿಸಿ ಸ್ಥಳೀಯ ನಿವಾಸಿಯೊಬ್ಬರನ್ನು ಸಂಜೆಯ ವೇಳೆ ಪೊಲೀಸರು ವಶಕ್ಕೆ ಪಡೆದು ತೀವ್ರ ವಿಚಾರಣೆಗೆ ಗುರಿಪಡಿಸಿದ್ದಾರೆ ಎಂದು ತಿಳಿದು ಬಂದಿದೆ.
ಆರೋಪಿಯ ಬಂಧನ:
ಒಂಟಿ ಮಹಿಳೆಯಿದ್ದ ಮನೆಗೆ ನುಗ್ಗಿ ಚೂರಿ ತೋರಿಸಿ ನಗ, ನಗದು ದೋಚಿರುವ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯೋರ್ವನ್ನು ಬಂಟ್ವಾಳ ಪೊಲೀಸರು ಗುರುವಾರ ವಶಕ್ಕೆ ಪಡೆದುಕೊಂಡಿದ್ದಾರೆ.
ಇಲ್ಲಿನ ನಿವಾಸಿ ಶೇಖರ್ ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ. ಕಳವಿನ ಬಗ್ಗೆ ಪೊಲೀಸ್ ಬೀಟ್‌ನಲ್ಲಿ ವ್ಯಕ್ತಿಯೊಬ್ಬರು ಶೇಖರ್ ಎಂಬಾತನ ಮೇಲೆ ಅನುಮಾನ ವ್ಯಕ್ತಪಡಿದ್ದರು. ಈ ಸಂಬಂಧ ಆತನನ್ನು ವಶಪಡಿಸಿ ವಿಚಾರ ಮಾಡಿದಾಗ ಕಳವು ಮಾಡಿರುವ ಬಗ್ಗೆ ತಪ್ಪೊಪ್ಪಿಕೊಂಡಿದ್ದಾನೆ. ಅಲ್ಲದೆ, ಕಳವು ಮಾಡಿರುವ ಸೊತ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ ಎಂದು ಎಸ್ಪಿ ರವಿಕಾಂತೇ ಗೌಡ ಅವರು ಮಾಹಿತಿ ನೀಡಿದ್ದಾರೆ.