‘ಆರೋಗ್ಯ ಕರ್ನಾಟಕ’ ಯೋಜನೆ : ಆತುರ ಬೇಡ
ಮಂಗಳೂರು, ಜು.26: ‘ಆರೋಗ್ಯ ಕರ್ನಾಟಕ’ ಯೋಜನೆಯಡಿಯಲ್ಲಿ ಪ್ರಾಥಮಿಕ, ದ್ವಿತೀಯ, ತೃತೀಯ ಹಂತದ ಬಹುತೇಕ ಚಿಕಿತ್ಸೆಗಳು ಬಿಪಿಎಲ್ ಕಾರ್ಡುದಾರಿಗೆ ಉಚಿತವಾಗಿದ್ದು, ಎಪಿಎಲ್ ಕಾರ್ಡುದಾರರಿಗೆ ಸಹಪಾವತಿ ಚಿಕಿತ್ಸೆ ಕಲ್ಪಿಸಲಾಗಿದೆ. ಆದರೆ, ಕಾರ್ಡ್ ಮಾಡಿಸಲು ಯಾವುದೇ ಆತುರ ಬೇಡ ಎಂದು ಆರೋಗ್ಯ ಇಲಾಖೆಯ ಅಧಿಕಾರಿ ಡಾ.ಜಗನ್ನಾಥ ತಿಳಿಸಿದ್ದಾರೆ.
ಅನಾರೋಗ್ಯ ಕಾಡಿದಾಗ ಮಾತ್ರ ಪಡಿತರ ಚೀಟಿ ಮತ್ತು ಆಧಾರ್ ಕಾರ್ಡ್‌ನೊಂದಿಗೆ ಸರಕಾರಿ ಆಸ್ಪತ್ರೆಗೆ ತೆರಳಬಹುದು. ಆರೋಗ್ಯ ಕಾರ್ಡ್ ಮಾಡಿಸಲು ಮುಂಚಿತವಾಗಿ ಸಾಲುಗಟ್ಟಿ ನಿಲ್ಲಬೇಕಾದ ಅಗತ್ಯವಿಲ್ಲ. ಸೌಲಭ್ಯದ ಬಗ್ಗೆ ಆತಂಕ ಪಡುವ ಅಗತ್ಯವೂ ಇಲ್ಲ. ಇದರಿಂದಾಗಿ ನಿಜವಾದ ರೋಗಿಗಳಿಗೆ ತೊಂದರೆಯಾಗುತ್ತದೆ. ಆರೋಗ್ಯ ಕಾರ್ಡ್ ನೋಂದಣಿಯು ನಿರಂತರವಾಗಿರುತ್ತದೆ. ಸುಳ್ಳು ವದಂತಿಗಳಿಗೆ ಕಿವಿಗೊಡಬೇಡಿ ಎಂದು ಡಾ. ಜಗನ್ನಾಥ ಮನವಿ ಮಾಡಿದ್ದಾರೆ.
ಆರೋಗ್ಯ ಕಾರ್ಡ್ ಇಲ್ಲದಿದ್ದರೂ ಆತಂಕ ಪಡಬೇಕಿಲ್ಲ. ಪಡಿತರ ಚೀಟಿ ಮತ್ತು ಆಧಾರ್ ಕಾರ್ಡ್ ತಂದಾಗಲೂ ಚಿಕಿತ್ಸೆ ಪಡೆಯಬಹುದಾಗಿದೆ. ಹೆಚ್ಚಿನ ಮಾಹಿತಿಗೆ ದೂ.ಸಂ: 104 ಅಥವಾ 1800 4258330ನ್ನು ಸಂಪರ್ಕಿಸಲು ಪ್ರಕಟನೆ ತಿಳಿಸಿದೆ.