ಉಡುಪಿ ಜಿಲ್ಲೆಯ 2,53,720 ಮಂದಿಗೆ ಜಂತುಹುಳು ಮಾತ್ರೆ ವಿತರಣೆ: ಕಾಪಶಿ
ಉಡುಪಿ, ಜು.26:ರಾಷ್ಟ್ರೀಯ ಜಂತುಹುಳು ನಿವಾರಣಾ ದಿನದ ಅಂಗವಾಗಿ ಜಿಲ್ಲೆಯಲ್ಲಿ, ಒಂದರಿಂದ 19 ವರ್ಷದೊಳಗಿನ 2,53,720 ಮಂದಿಗೆ ಆ.10 ರಂದು ಜಂತುಹುಳು ನಿವಾರಣಾ ಮಾತ್ರೆ ವಿತರಿಸಲಾಗುವುದು ಎಂದು ಉಡುಪಿ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಿವಾನಂದ ಕಾಪಶಿ ತಿಳಿಸಿದ್ದಾರೆ.
ಗುರುವಾರ ಮಣಿಪಾಲದ ಜಿಪಂ ಸಭಾಂಗಣದಲ್ಲಿ ನಡೆದ ಜಿಲ್ಲಾ ಸಮನ್ವಯ ಸಮಿತಿ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು. ಜಂತುಹುಳುಗಳ ಬಾಧೆಯಿಂದ ಮಕ್ಕಳು ಶಾಲೆಗೆ ಹಾಜರಾಗಲು ಸಾದ್ಯವಾಗದೇ ಶೈಕ್ಷಣಿಕ ಪ್ರಗತಿ ಕುಂಠಿತಗೊಳ್ಳುವ ಸಾಧ್ಯತೆಗಳಿವೆ. ಅಲ್ಲದೇ ಮಕ್ಕಳಲ್ಲಿ ಅಪೌಷ್ಠಿಕತೆ ಹಾಗೂ ರಕ್ತ ಹೀನತೆ ಉಂಟಾಗಿ ಮಕ್ಕಳ ಶಾರೀರಿಕ ಮತ್ತು ಬೌದ್ಧಿಕ ಬೆಳವಣಿಗೆ ಮೇಲೆ ಅದು ಪರಿಣಾಮ ಬೀರುತ್ತದೆ. ಆದ್ದರಿಂದ ಎಲ್ಲಾ ಪೋಷಕರು ತಮ್ಮ ಮಕ್ಕಳಿಗೆ ಜಂತುಹುಳು ನಾಶಪಡಿಸುವ ಆಲ್ಬೆಂಡರೆಲ್ ಮಾತ್ರೆಗಳನ್ನು ನೀಡುವಂತೆ ಕಾಪಶಿ ಹೇಳಿದರು.
ಜಿಲ್ಲೆಯ ಸರಕಾರಿ ಮತ್ತು ಖಾಸಗಿ ಶಾಲಾ ಕಾಲೇಜು ಸೇರಿದಂತೆ ಒಟ್ಟು 1313 ಶಾಲಾ-ಕಾಲೇಜು ಮತ್ತು ಅಂಗನವಾಡಿಗಳಲ್ಲಿ ಆ.10ರಂದು ಜಂತು ಹುಳು ನಿವಾರಣಾ ಮಾತ್ರೆ ವಿತರಿಸಲು ಕ್ರಮ ಕೈಗೊಳ್ಳಲಾಗಿದ್ದು, ಎಲ್ಲಾ ಇಲಾಖೆ ಗಳು ಸಮನ್ವಯದಿಂದ ಕಾರ್ಯ ನಿರ್ವಹಿಸುವಂತೆ ಸಿಇಒ ತಿಳಿಸಿದರು.
ಜಿಲ್ಲೆಯ ಎಲ್ಲಾ ಗ್ರಾಪಂಗಳು ತಮ್ಮ ವ್ಯಾಪ್ತಿಯಲ್ಲಿ ಜಂತುಹುಳು ನಿವಾರಣಾ ದಿನದ ಕುರಿತು ಸಾರ್ವಜನಿಕರಿಲ್ಲಿ ಅರಿವು ಮೂಡಿಸುವಂತೆ, ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು ಮನೆ ಮನೆಗೆ ತೆರಳಿ ಮಾಹಿತಿ ನೀಡುವಂತೆ ತಿಳಿಸಿದ ಕಾಪಶಿ, ಸ್ವಚ್ಛತೆ ಕಾಪಾಡುವುದರಿಂದ ರೋಗಗಳ ನಿಯಂತ್ರಣ ಸಾದ್ಯ ವಿದ್ದು, ಶಾಲೆಗಳಲ್ಲಿ ಮಕ್ಕಳಿಗೆ ಸ್ವಚ್ಛತೆಯ ಕುರಿತು ಶಿಕ್ಷಕರು ಮಾಹಿತಿ ನೀಡುವಂತೆ ನುಡಿದರು.
ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರೋಹಿಣಿ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.