ಉಡುಪಿ: ರಾಷ್ಟ್ರೀಯ ಹೆದ್ದಾರಿ ಅವ್ಯವಸ್ಥೆ, ಅಪಘಾತಗಳ ಬಗ್ಗೆ ಶಾಸಕರ ಸಭೆ
ಉಡುಪಿ, ಜು.26: ಜಿಲ್ಲೆಯ ಬೈಂದೂರು, ಕುಂದಾಪುರ, ಉಡುಪಿ ಮೂಲಕ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿಯ ಅವ್ಯವಸ್ಥೆ, ಹೊಂಡ-ಗುಂಡಿಗಳ ನಾ-ದುರಸ್ಥಿ, ಮೇಲ್ಸೇತುವೆ ನಿರ್ಮಾಣ ಕಾಮಗಾರಿಯಲ್ಲಾಗುತ್ತಿರುವ ವಿಳಂಬ ದಿಂದ ಸಾರ್ವಜನಿಕರಿಗಾಗುತ್ತಿರುವ ತೊಂದರೆಗಳ ಕುರಿತಂತೆ ವಿಧಾನಪರಿಷತ್ ನಲ್ಲಿ ವಿಪಕ್ಷದ ನಾಯಕರಾಗಿರುವ ಕೋಟ ಶ್ರೀನಿವಾಸ ಪೂಜಾರಿ ನೇತೃತ್ವದಲ್ಲಿ ಜಿಲ್ಲೆಯ ಶಾಸಕರು ಇಂದು ಜಿಲ್ಲಾಧಿಕಾರಿ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ಜೊತೆ ಚರ್ಚೆ ನಡೆಸಿದ್ದು, ಅವ್ಯವಸ್ಥೆಗಳ ನಿವಾರಣೆೆ 15 ದಿನಗಳ ಗಡುವು ನೀಡಿದ್ದಾರೆ.
ಮಣಿಪಾಲದಲ್ಲಿರುವ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ, ಬೈಂದೂರು ಶಾಸಕ ಬಿ.ಎಂ.ಸುಕುಮಾರ್ ಶೆಟ್ಟಿ, ಕಾಪು ಶಾಸಕ ಲಾಲಾಜಿ ಮೆಂಡನ್ ಹಾಗೂ ವಿಧಾನ ಪರಿಷತ್ ಸದಸ್ಯ ಪ್ರತಾಪ್‌ಚಂದ್ರ ಶೆಟ್ಟಿ ಭಾಗವಹಿಸಿದ್ದು, ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.
ಬೈಂದೂರಿನ ಒತ್ತಿನೆಣೆಯಲ್ಲಿ ನಿರಂತರವಾಗಿ ಭೂಕುಸಿತವಾಗುತಿದ್ದು, ರಾಷ್ಟ್ರೀಯ ಹೆದ್ದಾರಿಗಾಗುವ ಅಡೆತಡೆಯನ್ನು ತಕ್ಷಣವೇ ಸರಿಪಡಿಸಬೇಕೆಂದು ಬೈಂದೂರು ಶಾಸಕ ಸುಕುಮಾರ ಶೆಟ್ಟಿ ಒತ್ತಾಯಿಸಿದರು.
ಕುಂದಾಪುರ ಶಾಸ್ತ್ರೀ ಸರ್ಕಲ್‌ನ ಮೇಲ್ಸೇತುವೆ ಕಾಮಗಾರಿ ವಿಳಂಬ ಹಾಗೂ ಶಾಸ್ತ್ರೀ ಸರ್ಕಲ್‌ನಿಂದ ವಿನಾಯಕ ಟಾಕೀಸಿವರೆಗೆ ಕಳಪೆ ರಸ್ತೆ ಕಾಮಗಾರಿಯ ಬಗ್ಗೆ ಅಧಿಕಾರಿಗಳ ಗಮನ ಸೆಳೆದ ಹಾಲಾಡಿ ಶ್ರೀನಿವಾಸ ಶೆಟ್ಟಿ, ಕೂಡಲೇ ರಸ್ತೆ ಯನ್ನು ದುರಸ್ತಿ ಮಾಡುವಂತೆ ಆಗ್ರಹಿಸಿದರು.
ಉಡುಪಿಯ ಕರಾವಳಿ ಜಂಕ್ಷನ್‌ನ ಮೇಲ್ಸೇತುವೆ ಕಾಮಗಾರಿಯಲ್ಲಿ ಆದ ವಿಳಂಬ ಮತ್ತು ಕಾಪು ರಾಷ್ಟ್ರೀಯ ಹೆದ್ದಾರಿ ಹಾಗೂ ಪಡುಬಿದ್ರೆ ಬಳಿ ರಸ್ತೆ ದುರಾವಸ್ಥೆಯಿಂದ ವಾಹನಗಳು ಗಂಟೆಗಟ್ಟಲೆ ಕ್ಯೂ ನಿಲ್ಲುವ ಬಗ್ಗೆ ಕೋಟ ಶ್ರೀನಿವಾಸ ಪೂಜಾರಿ ಗಮನ ಸೆಳೆದರು.
ಹೆದ್ದಾರಿ ರಸ್ತೆ ವಿಭಾಜಕದ ನಡುವೆ ಇರುವ ನೀರು ಹರಿಯುವ ಕಂದಕದ ಮೂಲಕ ದ್ವಿ-ಚಕ್ರ ವಾಹನ ಚಲಾವಣೆಯಿಂದ ಆಗುವ ಸತತ ಅಪಘಾತದ ಕುರಿತು ಉಲ್ಲೇಖಿಸಿದ ಕೋಟ, ವಿಭಾಜಕಗಳಿಗೆ ತಡೆಗೋಡೆ ನಿರ್ಮಾಣ ಮತ್ತು ರಸ್ತೆ ದುರಸ್ತಿ ಮಾಡದಿದ್ದರೆ ಸಂಬಂಧಪಟ್ಟ ಕಾಮಗಾರಿ ಮಾಡುವ ಕಂಪನಿ ಮತ್ತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವಿರುದ್ಧ ಪ್ರಕರಣ ದಾಖಲು ಮಾಡುವಂತೆ ಜಿಲ್ಲಾಧಿಕಾರಿಗಳನ್ನು ಒತ್ತಾಯಿಸಿದರು.
ಪ್ರಾಧಿಕಾರ ಮತ್ತು ಗುತ್ತಿಗೆದಾರರು ಇನ್ನು ಮೂರು ದಿನಗಳವರೆಗೆ ರಸ್ತೆಯ ಹೊಂಡ ಮುಚ್ಚಿಸಿ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಹಾಗೂ ಆಗಸ್ಟ್ 10ರೊಳಗೆ ವಿಭಾಜಕಗಳ ನಡುವೆ ಇರುವ ಕಂದಕಕ್ಕೆ ತಕ್ಷಣ ತಡೆಬೇಲಿ ಅಥವಾ ದ್ವಿ-ಚಕ್ರ ವಾಹನ ಚಲಿಸದಂತೆ ತಡೆಗೋಡೆ ನಿರ್ಮಾಣ ಮಾಡಬೇಕು ಎಂಬ ಶಾಸಕರ ಬೇಡಿಕೆಗೆ ಸಂಬಂಧಿಸಿದ ಅಧಿಕಾರಿಗಳು ಸಮ್ಮತಿ ಸೂಚಿಸಿದರು.
ಕುಂದಾಪುರ ಮೇಲ್ಸೆತುವೆಯ ಹೆಚ್ಚುವರಿ ಕಾಮಗಾರಿ ಪ್ರಸ್ತಾವನೆಯಾದ್ದರಿಂದ ಬರುವ ಮಾರ್ಚ್ ಒಳಗೆ ಕಾಮಗಾರಿಯನ್ನು ಮುಗಿಸುತ್ತೇವೆ ಹಾಗೂ ಉಡುಪಿ ಕರಾವಳಿ ಜಂಕ್ಷನ್‌ನಲ್ಲಿರುವ ಮೇಲ್ಸೇತುವೆಯನ್ನು ಮೂರು ತಿಂಗಳುಗಳಲ್ಲಿ ಮುಗಿಸುತ್ತೇವೆ. ಕಾಪು, ಪಡುಬಿದ್ರಿಯಲ್ಲಿ ದುರಾವಸ್ಥೆಯಲ್ಲಿರುವ ರಸ್ತೆ ರಿಪೇರಿ ಕಾಮಗಾರಿ ಪ್ರಗತಿಯಲ್ಲಿದೆ ಎಂದು ಅಧಿಕಾರಿಗಳು ಸಭೆಗೆ ತಿಳಿಸಿದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಪ್ರಾನ್ಸಿಸ್, ಹೆಚ್ಚುವರಿ ಪೋಲಿಸ್ ವರಿಷ್ಠಾಧಿಕಾರಿ ಕುಮಾರಚಂದ್ರ, ಕುಂದಾಪುರ ವಿಭಾಗಾಧಿಕಾರಿ ಭೂಬಾಲನ್, ಜಿಪಂ ಮುಖ್ಯಕಾರ್ಯ ನಿರ್ವಾಹಣಾಧಿಕಾರಿ ಶಿವಾನಂದ್ ಕಾಪಾಶಿ ಉಪಸ್ಥಿತ ರಿದ್ದರು.
ಟೋಲ್ ಬಂದ್‌ನ ಎಚ್ಚರಿಕೆ
ವಿಧಾನ ಪರಿಷತ್ ಸದಸ್ಯ ಪ್ರತಾಪ್‌ಚಂದ್ರ ಶೆಟ್ಟಿ ಮಾತನಾಡಿ ಸಾರ್ವಜನಿಕ ರಿಗಾಗುತ್ತಿರುವ ಸಮಸ್ಯೆಯನ್ನು ನೋಡಿ ಸುಮ್ಮನಿರಲು ಸಾಧ್ಯವಿಲ್ಲ. ಸಮಸ್ಯೆ ಯನ್ನು ಸರಿಪಡಿಸದೇ ಇದ್ದರೆ, ಹೋರಾಟಕ್ಕೆ ಇಳಿಯಬೇಕಾಗುತ್ತದೆ ಎಂದು ಅಧಿಕಾರಿಗಳಿಗೆ ಎಚ್ಚರಿಸಿದರು. ಜಿಪಂ ಅಧ್ಯಕ್ಷ ದಿನಕರ ಬಾಬು ಮಾತನಾಡಿ, ಬಲಾಯಿಪಾದೆಯಲ್ಲಿರುವ ಹೈ-ಮಾಸ್ಟ್ ದೀಪವನ್ನು ಸೌಜನ್ಯಕ್ಕಾದರೂ ಸರಿ ಮಾಡುವ ಇಚ್ಛೆ ಪ್ರಾಧಿಕಾರದ ಅಧಿಕಾರಿಗಳಿಗಿಲ್ಲ ಎಂದರು.
ಹೆದ್ದಾರಿಯ ದುರವಸ್ಥೆಯ ಕುರಿತು ಸಾಕಷ್ಟು ಚರ್ಚೆಯ ನಂತರ ಇನ್ನು 15 ದಿನಗಳಲ್ಲಿ ಈ ಎಲ್ಲಾ ಅನಾಹುತಗಳನ್ನು ತಡೆಯದಿದ್ದರೆ ಮತ್ತು ದುರಸ್ಥಿಯ ಲ್ಲಿರುವ ರಸ್ತೆಯನ್ನು ಸರಿಪಡಿಸದೇ ಇದ್ದರೆ ಸಾರ್ವಜನಿಕರೊಂದಿಗೆ ಸೇರಿಕೊಂಡು ಟೋಲ್ ಬಂದ್ ಮಾಡಲಾಗುವುದು ಎಂದು ಸಭೆಗೆ ತಿಳಿಸಿದರು.