ಆ.10: ಸಂತ ಲಾರನ್ಸ್ ಚರ್ಚ್ ನ ವಾರ್ಷಿಕ ಮಹೋತ್ಸವ
ಮಂಗಳೂರು, ಜು. 26 : ಕರಾವಳಿ ಕ್ರೈಸ್ತರ ಪುಣ್ಯ ಕ್ಷೇತ್ರವಾದ ಸಂತ ಲಾರನ್ಸ್ ಚರ್ಚ್ ನ ವಾರ್ಷಿಕ ಮಹೋತ್ಸವ ಆ.10ರಂದು ಬೊಂದೆಲ್ ಚರ್ಚ್ ಹಾಲ್‌ನಲ್ಲಿ ನಡೆಯಲಿದೆ.
ಈ ವರ್ಷದ ಹಬ್ಬದ ಆಚರಣೆ ಜು. 31 ರಿಂದ ಆಗಸ್ಟ್ 10ರವರೆಗೆ ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ ಎಂದು ಚರ್ಚ್‌ನ ಪ್ರಧಾನ ಧರ್ಮ ಗುರುಗಳಾದ ವಂ. ಆ್ಯಂಡ್ರೋ ಲಿಯೊ ಡಿಸೋಜ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.
ಜುಲೈ 31ರಂದು ಸಂಜೆ 5 ಗಂಟೆಗೆ ಮೇರಿ ಹಿಲ್ ಕಾರ್ಮೆಲ್ ಸೆಂಟ್ರಲ್ ಸ್ಕೂಲ್ ಮೈದಾನದಿಂದ ಬೊಂದೆಲ್ ಚರ್ಚ್‌ಗೆ ಹೊರೆ ಕಾಣಿಕೆ ಮೆರವಣಿಗೆ ನಡೆಯಲಿದೆ. ಆಗಸ್ಟ್ 1 ರಂದು ಬೆಳಗ್ಗೆ 10.30ಕ್ಕೆ ಧ್ವಜಾರೋಹಣ, ಆ.1ರಿಂದ ಆಗಸ್ಟ್ 9ರವರೆಗೆ ಪ್ರತಿದಿನ ಬೆಳಗ್ಗೆ 11ಗಂಟೆಗೆ ಮತ್ತು ಸಾಯಂಕಾಲ 6 ಗಂಟೆಗೆ ಬಲಿಪೂಜೆ ನಡೆಯಲಿದೆ.
ಆಗಸ್ಟ್ 10ರಂದು ವಾರ್ಷಿಕ ಮಹೋತ್ಸವ ಪೂ.10.30ಕ್ಕೆ ಬಲಿಪೂಜೆಯನ್ನು ಮಂಗಳೂರಿನ ಕ್ರೈಸ್ತ ಧರ್ಮ ಪ್ರಾಂತದ ಅತೀ.ವಂ.ಅಲೊಶಿಯಸ್ ಪೌಲ್ ಡಿ ಸೋಜ ನೆರವೇರಿಸಲಿರುವರು. ಸಂಜೆ 6 ಗಂಟೆಯ ಬಲಿಪೂಜೆಯ ನೇತೃತ್ವವನ್ನು ಮಂಗಳೂರು ಕ್ಯಾಥೊಲಿಕ್ ಕ್ರೈಸ್ತ ಧರ್ಮ ಪ್ರಾಂತ್ಯದ ನಿಯೋಜಿತ ಅಧ್ಯಕ್ಷ ಅತೀ.ವಂ.ಪೀಟರ್ ಪೌಲ್ ಸಲ್ದಾನಾ ವಹಿಸಲಿರುವರು. ಇದೇ ಸಂದರ್ಭದಲ್ಲಿ ಸಾರ್ವಜನಿಕ ಅನ್ನ ಸಂತರ್ಪಣೆ ನಡೆಯಲಿದೆ ಎಂದು ಆ್ಯಂಡ್ರೊ ಲಿಯೋ ಡಿ ಸೋಜ ತಿಳಿಸಿದ್ದಾರೆ.
ಸಮಾರಂಭದಲ್ಲಿ ಸಚಿವ ಯು.ಟಿ.ಖಾದರ್, ಶಾಸಕ ವೇದವ್ಯಾಸ ಕಾಮತ್, ಭರತ್‌ಶೆಟ್ಟಿ, ಮನಪಾ ಮೇಯರ್ ಭಾಸ್ಕರ್ ಮೊಯ್ಲಿ, ಶಾಸಕ ಉಮಾನಾಥ ಕೋಟ್ಯಾನ್ ಮೊದಲಾದವರು ಉಪಸ್ಥಿತರಿರುವರು.
ಸುದ್ದಿಗೋಷ್ಠಿಯಲ್ಲಿ ಧರ್ಮ ಗುರುಗಳಾದ ವಂ. ಕ್ಲಿಫರ್ಡ್ ಸೈಮನ್ ಪಿಂಟೋ, ವಂ.ಲಿಯೋವೇಗಸ್, ಹೆನ್ಭರ್ಟ್ ಪಿಂಟೋ, ರೂಡಿ ಪಿಂಟೋ, ಫ್ರಾನ್ಸಿಸ್ ವೇಗಸ್, ಸ್ಟಾನಿ ಆಲ್ವಾರೀಸ್ ಮೊದಲಾದವರು ಉಪಸ್ಥಿತರಿದ್ದರು.