ಕಾಪು: ಗೋ ಹಿಮಾಲಯಾಸ್ ಬೈಕ್ ಯಾತ್ರೆಗೆ ಚಾಲನೆ
ಕಾಪು, ಜು. 26: ಭಾರತ, ನಾಪಾಳ, ಭೂತಾನ್ ದೇಶಗಳ ಜನಜೀವನ, ಸಂಸ್ಕೃತಿ, ಆಹಾರ ಪದ್ಧತಿಗಳ ಬಗ್ಗೆ ಆಧ್ಯಯನ ನಡೆಸಲು ಗೋ ಹಿಮಾಲಯನ್ ಎಂಬ ಬೈಕ್ ಯಾತ್ರೆಯನ್ನು ಕಾಪುವಿನ ಇಬ್ಬರು ಯುವಕರು ಶುಕ್ರವಾರದಿಂಂದ ಕೈಗೊಳ್ಳಲಿದ್ದಾರೆ.
ಕಾಪುವಿನ ಮಲ್ಲಾರಿನ ಸಚಿನ್ ಶೆಟ್ಟಿ ಹಾಗೂ ಆತನ ಸ್ನೇಹಿತ ಹಳೆ ಮಾರಿಗುಡಿ ಬಳಿ ನಿವಾಸಿ ಅಭಿಷೇಕ್ ಶೆಟ್ಟಿ ಅವರು, 40ದಿನಗಳ ಕಾಲ 13,560 ಕಿಮೀ. ಕ್ರಮಿಸಲಿದ್ದಾರೆ. ಶುಕ್ರವಾರ ಬೆಳಗ್ಗೆ 6ಗಂಟೆಗೆ ಕಾಪುವಿನ ಮಾರಿಗುಡಿ ಬಳಿಯಿಂದ ತಮ್ಮ ಯಾತ್ರೆಯನ್ನು ಕೈಗೊಳ್ಳಲಿದ್ದಾರೆ.
ಸಚಿನ್ ರಾಯಲ್ ಎನ್‌ಫೀಲ್ಡ್ ಹಿಮಾಲಯನ್, ಅಭಿಷೇಕ್ ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350 ಬೈಕ್‌ಗಳಲ್ಲಿ ಸಂಚರಿಸಲಿದ್ದಾರೆ. ಈ ಬಾರಿ ಮೂರು ದೇಶಗಳ ಸಂಸ್ಕೃತಿ, ಆಹಾರ ಪದ್ಧತಿ, ಜನಜೀವನದ ಬಗ್ಗೆ ವೀಡಿಯೋ ಚಿತ್ರೀಕರಣಗೊಳಿಸಲಿದ್ದಾರೆ.
ಈ ಹಿಂದೆ ಸಾಕ್ಷ್ಯ ಚಿತ್ರ ನಿರ್ಮಿಸಲು ಸಚಿನ್ ಶೆಟ್ಟಿ ವಿವಿಧ ರಾಜ್ಯಗಳ ಜೀವನ ಪದ್ಧತಿ ಹಾಗೂ ಆಹಾರ ಪದ್ಧತಿ ಬಗ್ಗೆ ಕುರಿತ ಅಧ್ಯಯನ ನಡೆಸಲು ಲೈಟ್ಸ್ ಕೆಮರಾ ಲಡಾಕ್ ಟೂರ್ ಎಂಬ ಹೆಸರಿನಲ್ಲಿ 11,000 ಕಿಮೀ ಲಡಾಕ್‌ವರೆಗೆ ಬೈಕ್ ಯಾತ್ರೆ ನಡೆಸಿ ಗಮನಸೆಳೆದಿದ್ದರು. ಇದೀಗ ಆತನ ಬಾಲ್ಯದ ಸ್ನೇಹಿತ ಅಭಿಷೇಕ್ ಶೆಟ್ಟಿ ಸಚಿನ್ ಶೆಟ್ಟಿ ಯಾತ್ರೆಗೆ ಸಾಥ್ ನೀಡಲಿದ್ದಾರೆ. ಸಚಿನ್ ಉತ್ತಮ ಛಾಯಾಗ್ರಾಹಕನಾಗಿದ್ದು, ಹವ್ಯಾಸಿ ಬೈಕ್ ರೈಡರ್ ಆಗಿದ್ದಾರೆ.