ಭಾರತೀಯ ಸೇನೆಯ ಸೇವೆಗೆ ಗೌರವಿಸಿ: ಡಿಸಿಪಿ ಉಮಾಪ್ರಶಾಂತ್
ಮಂಗಳೂರು, ಜು.26: ದೇಶ ಮತ್ತು ನಾಗರಿಕರನ್ನು ರಕ್ಷಿಸುವಲ್ಲಿ ಭಾರತೀಯ ಸೈನ್ಯದ ಪಾತ್ರ ಹೆಚ್ಚಿದೆ. ನಾವೆಲ್ಲರೂ ಭಾರತೀಯ ಸೈನ್ಯವನ್ನು ಗೌರವಿಸ ಬೇಕು ಎಂದು ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ಉಮಾ ಪ್ರಶಾಂತ್ ತಿಳಿಸಿದ್ದಾರೆ.
ನಗರದ ಕದ್ರಿಯ ಲಯನ್ಸ್ ಸೇವಾ ಮಂದಿರದಲ್ಲಿ ದ.ಕ. ಜಿಲ್ಲಾ ಮಾಜಿ ಸೈನಿಕರ ಸಂಘ, ಲಯನ್ಸ್ ಕ್ಲಬ್ ನೇತೃತ್ವದಲ್ಲಿ ಕಾರ್ಗಿಲ್ ದಿನಾಚರಣೆಯ ಅಂಗವಾಗಿ ಗುರುವಾರ ಹಮ್ಮಿಕೊಳ್ಳಲಾಗಿದ್ದ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಮಾಜಿ ಸೈನಿಕರಾದ ಹರೀಶ್‌ಚಂದ್ರ ಶೆಟ್ಟಿ, ಭುಜಂಗ ಶೆಟ್ಟಿ ಮತ್ತು ಜನಾರ್ದನ ಅವರನ್ನು ಡಿಸಿಪಿ ಉಮಾ ಪ್ರಶಾಂತ್ ಸನ್ಮಾನಿಸಿದರು.
ಕರ್ನಲ್ ಎನ್.ಶರತ್ ಭಂಡಾರಿ ಕಾರ್ಗಿಲ್ ವಿಜಯೋತ್ಸವದ ಕುರಿತು ವಿವರಿಸಿದರು. ಈ ಸಂದರ್ಭದಲ್ಲಿ ದ.ಕ. ಜಿಲ್ಲಾ ಮಾಜಿ ಸೈನಿಕರ ಸಂಘ ದ ಅಧ್ಯಕ್ಷ ವಿಕ್ರಮ್ ದತ್ತ, ಡಾ.ಉದಯಕುಮಾರ್ ಬರ್ಕೂರ್, ಲೆ. ಕೆ.ದೇವದಾಸ್ ಭಂಡಾರಿ, ವಿಜಯವಿಷ್ಣು ಮಯ್ಯ, ಶ್ರೀನಿವಾಸ್ ನಂದಗೋಪಾಲ್, ಸಚಿತಾ ನಂದಗೋಪಾಲ್ ಮತ್ತಿತರರಿದ್ದರು.