×
Ad

ಶಿರೂರು ಶ್ರೀ ನಿಗೂಢ ಸಾವು ಪ್ರಕರಣ: ಪೊಲೀಸರ ಕೈಗೆ ಮರಣೋತ್ತರ ವರದಿಯ ಸಾಧ್ಯತೆ

Update: 2018-07-26 21:51 IST

ಉಡುಪಿ, ಜು. 26: ಶಿರೂರು ಮಠದ ಶ್ರೀಲಕ್ಷ್ಮೀವರ ತೀರ್ಥ ಶ್ರೀ ಸಂಶಯಾಸ್ಪದ ಸಾವಿನ ಹಿನ್ನೆಲೆಯಲ್ಲಿ ಕೆಎಂಸಿ ಆಸ್ಪತ್ರೆಯ ವೈದ್ಯರು ನಡೆಸಿದ ಶ್ರೀಗಳ ಮೃತದೇಹದ ಮರಣೋತ್ತರ ಪರೀಕ್ಷೆಯ ವರದಿ  ಶುಕ್ರವಾರ ಪೊಲೀಸರ ಕೈಸೇರುವ ಸಾಧ್ಯತೆ ಇದೆ ಎಂದು ಪೊಲೀಸ್ ಮೂಲಗಳಿಂದ ತಿಳಿದುಬಂದಿದೆ.

ಪ್ರತಿದಿನವೂ ಹೊಸ ಹೊಸ ಗಾಳಿಸುದ್ದಿಗಳು, ಚಿತ್ರ-ವಿಚಿತ್ರ ತಿರುವುಗಳಿಗೆ ಕಾರಣವಾಗುತ್ತಿರುವ ಶ್ರೀಗಳ ಸಾವಿನ ಪ್ರಕರಣದ ಕುರಿತಂತೆ ಪೊಲೀಸರು ಈಗಾಗಲೇ ಪ್ರಾಥಮಿಕ ಹಂತದ ತನಿಖೆಯನ್ನು ಪೂರ್ಣಗೊಳಿಸಿದ್ದು, ಮರಣೋತ್ತರ ಹಾಗೂ ಎಫ್ ಎಸ್‌ಎಲ್ ವರದಿಗಾಗಿ ಕಾಯುತಿದ್ದಾರೆ. ಈ ವರದಿಗಳು ಕೈಸೇರಿದ ಬಳಿಕವಷ್ಟೇ ಶ್ರೀಗಳ ನಿಗೂಢ ಸಾವಿನ ಕುರಿತಂತೆ ಪೊಲೀಸರಿಗೆ ಸರಿಯಾದ ಕಾರಣ ಗೊತ್ತಾಗಲಿದೆ ಎಂದು ಈ ಮೂಲ ತಿಳಿಸಿದೆ.

ಶಿರೂರು ಮೂಲ ಮಠ ಹಾಗೂ ಉಡುಪಿ ಮಠದಲ್ಲಿ ಹಲವು ಬಾರಿ ತಪಾಸಣೆ ನಡೆಸಿರುವ ಪೊಲೀಸರು ಈಗಾಗಲೇ ಅವರಿಗೆ ಚಿಕಿತ್ಸೆ ನೀಡಿದ ವೈದ್ಯರು, ಶ್ರೀಗಳ ಆಪ್ತವಲಯದಲ್ಲಿ ಗುರುತಿಸಿಕೊಂಡಿದ್ದ ಅನೇಕರನ್ನು ವಿಚಾರಣೆ ಒಳಪಡಿಸಿ ಮಾಹಿತಿ ಕಲೆ ಹಾಕಿದ್ದಾರೆ. ಆದರೆ ಮುಂದಿನ ಕ್ರಮಕ್ಕಾಗಿ ಎಫ್ ಎಸ್‌ಎಲ್ ವರದಿಗಾಗಿ ಕಾಯುತಿದ್ದಾರೆ ಎಂದು ತಿಳಿದುಬಂದಿದೆ.

ಮೂಲಮಠಕ್ಕೆ ವಿಧಿ ವಿಜ್ಞಾನ ತಂಡ

ಶ್ರೀಗಳ ಸಾವಿನ ಬಳಿಕ ಶಿರೂರಿನ ಮೂಲ ಮಠವನ್ನು ತನ್ನ ಸುಪರ್ದಿಗೆ ಪಡೆದಿರುವ ಪೊಲೀಸರು, ಈಗಾಗಲೇ ಹಲವು ಬಾರಿ ತಪಾಸಣೆ ನಡೆಸಿ ಅಮೂಲ್ಯ ಮಾಹಿತಿ ಸಂಗ್ರಹಿಸಿದ್ದಾರೆ. ಪಶ್ಚಿಮ ವಲಯ ಐಜಿಪಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಕನಿಷ್ಠ 2-3 ಬಾರಿ ಖುದ್ದಾಗಿ ಸ್ಥಳಕ್ಕೆ ಭೇಟಿ ಕೊಟ್ಟು ಪರಿಶೀಲನೆ ನಡೆಸಿದ್ದಾರೆ.

ಇಂದು ವಿಧಿವಿಜ್ಞಾನ ಪ್ರಯೋಗಾಲಯದ ಅಧಿಕಾರಿಗಳು ಮತ್ತೊಮ್ಮೆ ಮಠಕ್ಕೆ ಭೇಟಿ ನೀಡಿ ತಪಾಸಣೆ ನಡೆಸಿದ್ದಾರೆಂದು ತಿಳಿದುಬಂದಿದೆ. ಗುರುವಾರ ಸುಮಾರು ಮೂರು ಗಂಟೆಗಳಿಗೂ ಅಧಿಕ ಕಾಲ ಅವರು ಮೂಲ ಮಠದಲ್ಲಿದ್ದು, ತನಿಖೆ, ಪರಿಶೀಲನೆ ನಡೆಸಿದ್ದಾರೆಂದು ಹೇಳಲಾಗಿದೆ. ತಪಾಸಣೆ ವೇಳೆ ಸಂಪೂರ್ಣ ವೀಡಿಯೋ ಚಿತ್ರೀಕರಣ ಮಾಡಿದ್ದು, ಅಗತ್ಯ ಮಾಹಿತಿ ಕಲೆ ಹಾಕಿದ್ದಾರೆ ಎನ್ನಲಾಗಿದೆ. ಆದರೆ ಇಂದಿನ ಭೇಟಿಯ ಸ್ಪಷ್ಟ ಕಾರಣ ಇನ್ನಷ್ಟೇ ತಿಳಿಯಬೇಕಿದೆ.

ಅಜ್ಞಾತ ಸ್ಥಳದಲ್ಲಿ ವಿಚಾರಣೆ

ಈ ನಡುವೆ ಪೊಲೀಸರು ತಮ್ಮ ವಶದಲ್ಲಿರುವ ಶಿರೂರು ಶ್ರೀಗಳ ಆಪ್ತರ ವಿಚಾರಣೆಯನ್ನು ಇಂದು ಅಜ್ಞಾತ ಸ್ಥಳದಲ್ಲಿ ನಡೆಸಿದ್ದಾರೆ ಎಂದೂ ಹೇಳಲಾಗಿದೆ. ಪೊಲೀಸರು ಶ್ರೀಗಳಿಗೆ ಆಪ್ತರಾಗಿದ್ದ ಮಹಿಳೆ ಅಲ್ಲದೇ ಮೂಲ ಮಠದಲ್ಲಿ ಊಟ ತಯಾರಿಸುತಿದ್ದ ಅಡುಗೆಯಾಳುಗಳಿಂದ ಇಂದು ಮತ್ತೊಮ್ಮೆ ಹೇಳಿಕೆ ಪಡೆದುಕೊಂಡಿದ್ದಾರೆಂದು ಹೇಳಲಾಗಿದೆ.

ಬುಲೆಟ್ ಗಣೇಶ್ ಸ್ಪಷ್ಟೀಕರಣ

ವಿವಿಧ ಮಾಧ್ಯಮಗಳಲ್ಲಿ ಇಂದು ಶಿರೂರು ಶ್ರೀಗಳ ಆಪ್ತ ಮಹಿಳೆಗೂ ತನಗೂ ಸಂಬಂಧ ಕಲ್ಪಿಸಿ, ಅವರಲ್ಲಿದ್ದ ಚಿನ್ನಾಭರಣಗಳನ್ನು ತಾನು ಮಹಿಳೆಗೆ ನೀಡಿರುವುದಾಗಿ ಬಂದಿರುವ ವರದಿಯನ್ನು ಮಲ್ಪೆಯ ಉದ್ಯಮಿ ಬುಲೆಟ್ ಗಣೇಶ್ ನಿರಾಕರಿಸಿದ್ದಾರೆ. 

‘ನನಗೂ ಶಿರೂರು ಶ್ರೀಗಳ ಆಪ್ತೆ ಎನ್ನಲಾದ ಮಹಿಳೆಗೂ ಯಾವುದೇ ಸಂಬಂಧವಿಲ್ಲ. ಶ್ರೀಗಳ ಚಿನ್ನಾಭರಣ ಸಹಿತ ಯಾವ ವ್ಯವಹಾರದಲ್ಲಿ ನನ್ನ ಕೈವಾಡವಿಲ್ಲ ಎಂದು ಅವರು ಇಂದು ಪತ್ರಕರ್ತರ ಎದುರು ಹಾಜರಾಗಿ ಸ್ಪಷ್ಟಪಡಿಸಿದರು.

ನಾನು ಕೇವಲ ಮಠದ ಭಕ್ತ. ವಾರಕೊಮ್ಮೆ ನಾನು ಶಿರೂರು ಮಠದ ದೇವಸ್ಥಾನಕ್ಕೆ ಹೋಗಿ ಕೈ ಮುಗಿಯುತ್ತಿದ್ದೆ. ಇದನ್ನೇ ಆಧಾರವಾಗಿಟ್ಟು ಕೊಂಡು ದೃಶ್ಯ ಮಾಧ್ಯಮದವರು ನನ್ನ ಮಾನಹಾನಿಯಾಗುವಂತೆ ಸುಳ್ಳು ಸುದ್ದಿ ಪ್ರಸಾರ ಮಾಡುವುದು ಸರಿಯಲ್ಲ. ಇದೇ ರೀತಿ ಮುಂದುವರಿದರೆ ಮಾನನಷ್ಟ ದಾವೆ ಹೂಡುವುದಾಗಿ’ ಗಣೇಶ್ ಎಚ್ಚರಿಸಿದರು.

ಶಿರೂರುಶ್ರೀಗಳ ಆಪ್ತೆ ಎನ್ನಲಾದ ಮಹಿಳೆಯನ್ನು ನಾನು ನೋಡಿಯೇ ಇಲ್ಲ. ಆಕೆಯ ಕುರಿತು ನನಗೆ ಏನೇನೂ ಗೊತ್ತಿಲ್ಲ. ಟಿವಿ ಮಾಧ್ಯಮದವರು ಟಿಆರ್‌ಪಿಗಾಗಿ ಇನ್ನೊಬ್ಬರನ್ನು ಬಗ್ಗೆ ಕೆಟ್ಟದಾಗಿ ಬಿಂಬಿಸುವುದು ಎಷ್ಟು ಸರಿ? ನಮಗೂ ಕುಟುಂಬವಿದೆ. ಏನಾದರೂ ಹೆಚ್ಚು ಕಮ್ಮಿಯಾದರೆ ನೀವೇ  ಹೊಣೆ’ ಎಂದವರು ಎಚ್ಚರಿಸಿದರು.

ಶಿರೂರು ಶ್ರೀಗಳು ಪ್ರತಿ ವರ್ಷವೂ ಮಲ್ಪೆ ಸರ್ವೇಶ್ವರ ದೇವಸ್ಥಾನಕ್ಕೆ ಬರುತ್ತಿದ್ದು, ದೇಣಿಗೆ ಕೊಡುತ್ತಿದ್ದರು. ಸಮಾಜ ಸೇವಕರಾಗಿ ಅವರು ನನಗೆ ಅಚ್ಚುಮೆಚ್ಚು. ಆದರೆ ಅವರ ವ್ಯವಹಾರಕ್ಕಾಗಲಿ, ನನ್ನ ಬೋಟ್, ಭೂ ವ್ಯವಹಾರಕ್ಕಾಗಲಿ ಯಾವುದೇ ಸಂಬಂಧವೇ ಇಲ್ಲ. ಶಿರೂರು ಶ್ರೀಗಳು ಬಡವರ ಪರವಾಗಿದ್ದು, ತುಂಬಾನೇ ಸಹಾಯ ಮಾಡಿದ್ದರು. ಅವರ ವೈಯಕ್ತಿಕ ಬದುಕಿನ ಬಗ್ಗೆ ಗೊತ್ತಿಲ್ಲ ಎಂದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News