×
Ad

​ಕೆಎಂಸಿ ವೈದ್ಯರಿಂದ ಅಪರೂಪದ ರಕ್ತ ಗುಂಪು ‘ಪಿ ನಲ್’ ಪತ್ತೆ

Update: 2018-07-26 22:50 IST

ಮಣಿಪಾಲ, ಜು.26: ಮಣಿಪಾಲ ಕೆಎಂಸಿಯ ರಕ್ತನಿಧಿ (ಬ್ಲಡ್‌ಬ್ಯಾಂಕ್) ವಿಭಾಗದ ಮುಖ್ಯಸ್ಥೆ ಡಾ. ಶಮೀ ಶಾಸ್ತ್ರಿ ನೇತೃತ್ವದಲ್ಲಿ ವೈದ್ಯರ ತಂಡವೊಂದು ಅಪರೂಪದ ಹೊಸ ರಕ್ತ ಗುಂಪೊಂದನ್ನು ಪತ್ತೆ ಹಚ್ಚಿದೆ.

ತಾವು ಪತ್ತೆ ಹಚ್ಚಿನ ಹೊಸ ರಕ್ತ ಗುಂಪಿಗೆ ‘ಪಿಪಿ’ ಅಥವಾ ‘ಪಿ ನಲ್’ ಎಂದು ಹೆಸರಿಸಿದೆ. ಎ,ಬಿ,ಒ ಹಾಗೂ ಆರ್‌ಎಚ್‌ಡಿ ಈಗ ರಕ್ತ ಗುಂಪುಗಳಲ್ಲಿ ಸಾಮಾನ್ಯವಾಗಿರುವ ವರ್ಗೀಕರಣಗಳು. ಆದರೆ ಸುಮಾರು 200ಕ್ಕೂ ಅಧಿಕ ಸಣ್ಣ ಸಣ್ಣ ರಕ್ತ ಗುಂಪುಗಳ ಪ್ರತಿಜನಕಗಳನ್ನು ಈಗಾಗಲೇ ಗುರುತಿಸಲಾಗಿದೆ.
ಒಂದು ಸಾವಿರಕ್ಕಿಂತಲೂ ಕಡಿಮೆ ಜನರಲ್ಲಿ ಗುರುತಿಸಲಾಗುವ ವಿಶೇಷ ರಕ್ತದ ಗುಂಪನ್ನು ಅಪರೂಪದ ರಕ್ತ ವರ್ಗ ಎಂದು ಕರೆಯಲಾಗುತ್ತದೆ.

ವ್ಯಕ್ತಿಯೊಬ್ಬರಿಗೆ ತುರ್ತಾಗಿ ರಕ್ತ ನೀಡುವುದಕ್ಕಾಗಿ ಕೆಎಂಸಿಯ ರಕ್ತ ಬ್ಯಾಂಕ್‌ಗೆ ಆ ವ್ಯಕ್ತಿಯ ರಕ್ತದ ಸ್ಯಾಂಪಲ್‌ನ್ನು ಕಳುಹಿಸಲಾಗಿತ್ತು. ಆದರೆ ಅದಕ್ಕೆ ಸರಿ ಹೊಂದುವ ರಕ್ತದ ಯುನಿಟ್‌ನ್ನು ಗುರುತಿಸಲು ವೈದ್ಯರು ವಿಫಲರಾಗಿದ್ದರು. ಇದಕ್ಕಾಗಿ 80ಕ್ಕೂ ಅಧಿಕ ರಕ್ತದ ಯುನಿಟ್‌ನ್ನು ಪರೀಕ್ಷೆಗೊಳಪಡಿಸಲಾಗಿತ್ತು. ಕೊನೆಗೆ ಕೆಎಂಸಿಯ ಬ್ಲಡ್ ಬ್ಯಾಂಕ್ ತಂಡ ಈ ರಕ್ತವನ್ನು ವಿಶೇಷ ಪರೀಕ್ಷೆಗೊಳ ಪಡಿಸಿದಾಗ ಇದೊಂದು ಅಪರೂಪದ ರಕ್ತದ ಗುಂಪೆಂದು ಪತ್ತೆಯಾಯಿತು.
ಇದನ್ನು ಇನ್ನಷ್ಟು ಖಚಿತಪಡಿಸಿಕೊಳ್ಳಲು ವ್ಯಕ್ತಿಯ ರಕ್ತದ ಸ್ಯಾಂಪಲ್‌ನ್ನು ಬ್ರಿಟನ್‌ನ ಬ್ರಿಸ್ಟಾಲ್‌ನಲ್ಲಿರುವ ಅಂತಾರಾಷ್ಟ್ರೀಯ ಬ್ಲಡ್‌ಗ್ರೂಪ್ ರೆಫರೆನ್ಸ್ ಪ್ರಯೋಗಾಲಯಕ್ಕೆ (ಐಬಿಜಿಆರ್‌ಎಲ್) ಕಳುಹಿಸಲಾಯಿತು. ಅಲ್ಲಿ ರಕ್ತವನ್ನು ವಿವಿಧ ಪರೀಕ್ಷೆಗೊಳಪಡಿಸಿದ ಬಳಿಕ ಅದೊಂದು ಅಪರೂಪದ ‘ಪಿಪಿ’ ಟೈಪ್ ರಕ್ತದ ಗುಂಪೆಂದು ಖಚಿತವಾಯಿತು ಎಂದು ಕೆಎಂಸಿ ಪ್ರಕಟಣೆಯಲ್ಲಿ ತಿಳಿಸಿದೆ.

ಭಾರತದಲ್ಲಿ ‘ಪಿ ನಲ್’ ಮಾದರಿ ರಕ್ತದ ಗುಂಪು ಪತ್ತೆಯಾಗಿರುವುದು ಇದೇ ಮೊದಲು ಎಂದು ಮಾಹೆಯ ಪ್ರೊ ವೈಸ್ ಚಾನ್ಸಲರ್ ಡಾ.ಪೂರ್ಣಿಮಾ ಬಾಳಿಗಾ ತಿಳಿಸಿದ್ದಾರೆ. ಈ ಭಾಗದಲ್ಲಿ ಅಪರೂಪದ ರಕ್ತ ಗುಂಪುಗಳನ್ನು ಹೊಂದಿರುವ ದಾನಿಗಳ ರಕ್ತ ಸಂಗ್ರಹದ ಅಗತ್ಯತೆಯನ್ನು ಅವರು ಹೇಳಿದ್ದಾರೆ.

‘ರೋಗಿಯು ಅತೀ ಅಪರೂಪದ ‘ಪಿ ನಲ್’ ರಕ್ತ ಗುಂಪನ್ನು ಹೊಂದಿದ್ದು, ಇವರಿಗಾಗಿ ಅಪರೂಪದ ರಕ್ತ ಗುಂಪನ್ನು ಹೊಂದಿರುವ ದಾನಿಗಳಿಂದ ರಕ್ತ ಸಂಗ್ರಹಿಸುವ ಅಗತ್ಯತೆಯನ್ನು ಒತ್ತಿ ಹೇಳಿದ್ದಾರೆ. ತುರ್ತು ಸಂದರ್ಭಗಳಲ್ಲಿ ಇದು ಅತೀ ಅಗತ್ಯವಾಗಿದೆ. ಅವರಿಗೆ ಬೇರೆ ಗುಂಪಿನ ರಕ್ತ ಪ್ರಯೋಜನಕ್ಕೆ ಬಾರದು ಎಂದು ಡಾ.ಶಮೀ ಶಾಸ್ತ್ರಿ ನುಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News