ಮೂಡುಬಿದಿರೆ: ನಾಪತ್ತೆಯಾಗಿದ್ದ ಕಾರಂತ್ ಚೆನ್ನೈಯಲ್ಲಿ ಪತ್ತೆ
ಮೂಡುಬಿದಿರೆ, ಜು. 26: ವಯೋವೃದ್ಧರೋರ್ವರು ರೈಲಿನಿಂದ ಇಳಿದು ನಾಪತ್ತೆಯಾಗಿದ್ದ ಪ್ರಕರಣದಲ್ಲಿ ಸಾಮಾಜಿಕ ಕಾರ್ಯಕರ್ತರ ಸಕಾಲಿಕ ಸ್ಪಂದನೆ ಮತ್ತು ವಾಟ್ಸಾಪ್ ಬಳಗದ ಸಹಕಾರದಿಂದ ಮರಳಿ ಮನೆ ಸೇರಿದ ಪ್ರಕರಣ ಎಡಪದವಿನಲ್ಲಿ ನಡೆದಿದೆ.
ಎಡಪದವಿನ ಶಿಬ್ರಿಕೆರೆ ನಿವಾಸಿ ವಿಶ್ರಾಂತ ಎಲೆಕ್ಟ್ರಿಕಲ್ ಎಕ್ಸಿಕ್ಯೂಟಿವ್ ಎಂಜಿನಿಯರ್ ಸುಬ್ರಾಯ ಕಾರಂತ್ (78) ಜುಲೈ 15ರಂದು ತಿರುಪತಿಯಲ್ಲಿ ನಾಪತ್ತೆಯಾಗಿ ಬಳಿಕ ಜು. 20 ರಂದು ಚೆನ್ನೈನಲ್ಲಿ ಮನೆಮಂದಿಗೆ ಮರಳಿ ಸಿಕ್ಕಿದ್ದಾರೆ.
ನಡೆದಿದ್ದೇನು ?
ಜು.14ರ ರಾತ್ರಿ ಆಂಧ್ರದ ಶ್ರೀಕಾಕುಳಂನಲ್ಲಿನ ತನ್ನ ಮಗಳ ಮನೆಗೆ ಪತ್ನಿ ಸಮೇತ ಸುಬ್ರಾಯ ಕಾರಂತ್ ಮಂಗಳೂರಿನಿಂದ ರೈಲಿನಲ್ಲಿ ಹೊರಟಿದ್ದರು. ಮರೆವಿನ ಸಮಸ್ಯೆ, ಅನಾರೋಗ್ಯ ಪೀಡಿತರಾಗಿದ್ದ ಅವರು ಈ ಮಧ್ಯೆ ಜು.15ರಂದು ತಿರುಪತಿ ನಿಲ್ದಾಣದಲ್ಲಿ ಗೊಂದಲದಿಂದ ಇಳಿದಿದ್ದಾರೆ. ಇದು ಪತ್ನಿಯ ಗಮನಕ್ಕೆ ಬಂದಿಲ್ಲ. ಬಳಿಕ ಇನ್ನೊಂದು ರೈಲು ಹತ್ತಿದ್ದ ಕಾರಂತ್ ಚೆನ್ನೈ ತಲುಪಿದ್ದರು.
ಕಾರಂತ್ ನಾಪತ್ತೆಯಾಗಿದ್ದು ತಿಳಿಯುತ್ತಿದ್ದಂತೆ ಮನೆಮಂದಿ ತಿರುಪತಿಗೆ ಧಾವಿಸಿ ನಾಲ್ಕು ದಿನಗಳ ಕಾಲ ಅಲ್ಲಿನ ಹಲವು ಸ್ಥಳಗಳಲ್ಲಿ ಜಾಲಾಡಿ ಸಿಸಿಟಿವಿ ಪರಿಶೀಲಿಸಿದಾಗ ಕಾರಂತ್ ಚೆನ್ನೈ ರೈಲು ಹತ್ತಿರುವ ಅಸ್ಪಷ್ಟ ಸೂಚನೆ ಸಿಕ್ಕಿದೆ.
ಈ ನಡುವೆ ಚೈನ್ನೈನಲ್ಲಿ ಇಳಿದು ಅಲೆದಾಡಿದ ಕಾರಂತ್ ತೀವ್ರ ಅಸ್ವಸ್ಥರಾಗಿ ಕುಸಿದಿದ್ದಾರೆ. ಅಲ್ಲಿನ ಸಾಮಾಜಿಕ ಕಾರ್ಯಕರ್ತ ವೆಂಕಟೇಶ್ ಕೂಡಲೇ ಕಾರಂತರ ಆರೈಕೆಗೆ ಧಾವಿಸಿದ್ದು ಕಾರಂತರ ಕಿಸೆಯಲ್ಲಿ ಮೂಡುಬಿದಿರೆ 'ಸಿಎಚ್' ಮೆಡಿಕಲ್ ಮದ್ದಿನ ಚೀಟಿ ಗಮನಿಸಿದ್ದಾರೆ. ಸಂಪರ್ಕಿಸಿದಾಗ ತಕ್ಷಣ ಚುರುಕಾದ ಸಾಮಾಜಿಕ ಕಾರ್ಯಕರ್ತರೂ ಆಗಿರುವ ಸಿ.ಎಚ್ ಅಬ್ದುಲ್ ಗಫೂರ್ ಕಾರಂತರ ಚಿತ್ರವನ್ನು ಮೊಬೈಲ್‌ನಲ್ಲಿ ಪಡೆದುಕೊಂಡು ತನ್ನ ಬ್ಲಡ್‌ಗ್ರೂಫ್ ವಾಟ್ಸಾಪ್ ಬಳಗಕ್ಕೆ ಸ್ಪಂದನೆಗಾಗಿ ರವಾನಿಸಿದ್ದಾರೆ. ಈ ಗ್ರೂಪ್‌ನ ಅಡ್ಮಿನ್ ರಿಝ್ವಾನ್ ಸಹಕಾರದಿಂದ ಕಾರಂತ್ ಬಗ್ಗೆ ಸ್ಪಷ್ಟ ಮಾಹಿತಿ ಕಲೆ ಹಾಕಿದಸಿ ಅಬ್ದುಲ್ ಗಫೂರ್ ಅವರು ಕಾರಂತ್ ಮನೆಮಂದಿಯನ್ನು ಸಂಪರ್ಕಿಸಿ, ಚೆನ್ನೈನಿಂದ ಮನೆಮಂದಿ ಕಳೆದ ಶನಿವಾರ ಕಾರಂತರನ್ನು ಮರಳಿ ಮನೆಗೆ ಕರೆತರುವಲ್ಲಿ ಯಶಸ್ವಿಯಾಗಿದ್ದಾರೆ.
ಸಾಮಾಜಿಕ ಕಾರ್ಯಕರ್ತರ ಬೆಲೆಕಟ್ಟಲಾಗದ ಶ್ರಮ, ಕಾಳಜಿ ಮತ್ತು ವಾಟ್ಸಾಪ್ ಬಳಗದ ಸ್ಪಂದನಕ್ಕೆ ಕಾರಂತರ ಮನೆ ಮಂದಿ ಕೃತಜ್ಞತೆ ಸಲ್ಲಿಸಿದ್ದಾರೆ.