ಕೇರಳ ವಿಧಾನಸಭೆಯಲ್ಲಿ ಪ್ರಥಮ ಬಾರಿ ಕನ್ನಡದ ಕಹಳೆ ಮೊಳಗಿಸಿದ್ದ ಚೆರ್ಕಳಂ ಅಬ್ದುಲ್ಲಾ

Update: 2018-07-27 05:45 GMT

ಕಾಸರಗೋಡು, ಜು.27: ಹಿರಿಯ ರಾಜಕಾರಣಿ, ಮಾಜಿ ಸಚಿವ ಚೆರ್ಕಳಂ ಅಬ್ದುಲ್ಲಾ ಕನ್ನಡ ಪ್ರೇಮಿಯಾಗಿದ್ದು, ಕೇರಳದ ವಿಧಾನಸಭೆಯಲ್ಲಿ ಪ್ರಥಮ ಬಾರಿ ಕನ್ನಡದ ಕಹಳೆ ಮೊಳಗಿಸಿದ ಹೆಗ್ಗಳಿಕೆಗೆ ಪಾತ್ರರಾದವರು.

1987ರಿಂದ 2001ರ ತನಕ ನಾಲ್ಕು ಬಾರಿ ಮಂಜೇಶ್ವರ ವಿಧಾನಸಭಾ ಕ್ಷೇತ್ರದಿಂದ ಶಾಸಕರಾಗಿ ವಿಧಾನಸಭೆ ಪ್ರವೇಶಿಸಿದ್ದ ಚೆರ್ಕಳಂ 2001ರಲ್ಲಿ ಎ.ಕೆ. ಆ್ಯಂಟನಿ ನೇತೃತ್ವದ ಸಚಿವ ಸಂಪುಟದಲ್ಲಿ ಸ್ಥಳೀಯಾಡಳಿತ ಖಾತೆ ಸಚಿವರಾಗಿದ್ದರು. ಅಂದು ಸಚಿವರಾಗಿ ಅವರು ಕನ್ನಡದಲ್ಲೇ ಪ್ರಮಾಣ ವಚನ ಸ್ವೀಕರಿಸಿ ಎಲ್ಲರ ಗಮನಸೆಳೆದಿದ್ದರು. ಗಡಿನಾಡ ಕನ್ನಡಿಗರ ಪರವಾಗಿ ಹಲವು ಬಾರಿ ಅವರು ಸದನದಲ್ಲಿ ಧ್ವನಿಯೆತ್ತಿದ್ದರು.

1942ರಲ್ಲಿ ಬರಿಕಾಡ್ ಮುಹಮ್ಮದ್ ಹಾಗೂ ಹಾಗೂ ಆಸಿಯಮ್ಮ ದಂಪತಿಯ ಪುತ್ರನಾಗಿ ಜನಿಸಿದ ಚೆರ್ಕಳಂ ಅಬ್ದುಲ್ಲಾ ಕನ್ನಡ ಮಾಧ್ಯಮದಲ್ಲೇ ಪ್ರಾಥಮಿಕ ಶಿಕ್ಷಣವನ್ನು ಪೂರೈಸಿದ್ದರು. ಕನ್ನಡದ ಬಗ್ಗೆ ವಿಶೇಷ ಕಾಳಜಿ ಹೊಂದಿದ್ದ ಅವರು ಸ್ಥಳೀಯವಾಗಿ ತನ್ನ ಆಪ್ತರಿಗೆ ಕನ್ನಡದಲ್ಲೇ ಪತ್ರ ಬರೆಯುವ ಮೂಲಕ ಕನ್ನಡ ಪ್ರೇಮ ಮೆರೆಯುತ್ತಿದ್ದರು. ಕಾಸರಗೋಡು ಜಿಲ್ಲೆಯಲ್ಲಿ ಮುಸ್ಲಿಂ ಲೀಗ್ ಪಕ್ಷವನ್ನು ಕಟ್ಟಿ ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಚೆರ್ಕಳಂ ಅಬ್ದುಲ್ಲಾ ಹಲವು ವರ್ಷಗಳ ಕಾಲ ಮುಸ್ಲಿಂ ಲೀಗ್‌ಕಾಸರಗೋಡು ಜಿಲ್ಲಾ ಸಮಿತಿಯ ಅಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸಿದ್ದರು. 19 ವರ್ಷಗಳ ಕಾಲ ಮಂಜೇಶ್ವರ ಶಾಸಕರಾಗಿದ್ದರು.

 ಇತ್ತೀಚಿನ ಕೆಲವು ದಿನಗಳಿಂದ ತೀವ್ರ ಅನಾರೋಗ್ಯಕ್ಕೀಡಾಗಿದ್ದ ಚೆರ್ಕಳಂ ಅಬ್ದುಲ್ಲಾ ಅವರು ಮಂಗಳೂರಿನ ಕೆಎಂಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಕಳೆದ ರಾತ್ರಿ ವೈದ್ಯರ ಸೂಚನೆಯಂತೆ ಅವರನ್ನು ವಾಪಸ್ ಮನೆಗೆ ಕರೆತರಲಾಗಿತ್ತು. ಇಂದು ಬೆಳಗ್ಗೆ 8:20ರ ಸುಮಾರಿಗೆ ಅವರು ಸ್ವಗೃಹದಲ್ಲಿ ಕೊನೆಯುಸಿರೆಳೆದಿದ್ದಾರೆ.

ಮೃತರ ಅಂತ್ಯ ಸಂಸ್ಕಾರವು ಇಂದು ಸಂಜೆ 6 ಗಂಟೆ ಚೆರ್ಕಳಂ ಮುಹಿಯುದ್ದೀನ್ ಜುಮಾ ಮಸೀದಿ ವಠಾರದಲ್ಲಿ ನೆರವೇರಲಿದೆ. ಅಂತ್ಯಕ್ರಿಯೆಯಲ್ಲಿ ಪ್ರತಿಪಕ್ಷ ನಾಯಕ ರಮೇಶ್ ಚೆನ್ನಿತ್ತಲ ಹಾಗೂ ಪಕ್ಷದ ರಾಜ್ಯ, ರಾಷ್ಟ್ರ ಮಟ್ಟದ ಮುಖಂಡರು ಪಾಲ್ಗೊಳ್ಳುವರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News