×
Ad

​ಬೀಡಿ ಉದ್ಯಮ ಉಳಿಸಿಕೊಡಿ: ಎಚ್‌ಎಂಎಸ್ ಆಗ್ರಹ

Update: 2018-07-27 18:56 IST

ಮಂಗಳೂರು, ಜು.27: ಕಳೆದ ಐದು ವರ್ಷದಿಂದ ಬೀಡಿ ಉದ್ಯಮವು ದೇಶಾದ್ಯಂತ ನಶಿಸುತ್ತಿದ್ದು, ಬೀಡಿ ಉದ್ಯಮವನ್ನೇ ನಂಬಿ ಬದುಕು ಸಾಗಿಸುವ ಕೋಟ್ಯಂತರ ಕಾರ್ಮಿಕರು ಸಂಕಷ್ಟಕ್ಕೀಡಾಗಿದ್ದಾರೆ.ಹಾಗಾಗಿ ಕೇಂದ್ರ ಮತ್ತು ರಾಜ್ಯ ಸರಕಾರವು ಬೀಡಿ ಉದ್ಯಮವನ್ನು ಉಳಿಸಿಕೊಡುವ ಮೂಲಕ ಬೀಡಿ ಕಾರ್ಮಿಕರನ್ನು ರಕ್ಷಿಸುವಂತೆ ಸೌತ್ ಕೆನರಾ-ಉಡುಪಿ ಜಿಲ್ಲಾ ಬೀಡಿ ಗುತ್ತಿಗೆದಾರರ ಯೂನಿಯನ್ ಆಗ್ರಹಿಸಿದೆ.

ನಗರದ ಖಾಸಗಿ ಹೊಟೇಲ್‌ನಲ್ಲಿ ಶುಕ್ರವಾರ ಸುದ್ದಿಗೋಷ್ಠಿ ನಡೆಸಿದ ಯೂನಿಯನ್‌ನ ಕಾರ್ಯಾಧ್ಯಕ್ಷ ಮುಹಮ್ಮದ್ ರಫಿ ಭಾರತವು ತಂಬಾಕು ಬೆಳೆಯಲ್ಲಿ 2ನೆ ಸ್ಥಾನದಲ್ಲಿದೆ. ಸುಮಾರು 2 ಕೋಟಿ ಜನರು ತಂಬಾಕು ಉತ್ಪಾದನೆ ಆಧಾರಿತ ಕೈಗಾರಿಕೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. 75 ಲಕ್ಷ ಆದಿವಾಸಿ ಬುಡಕಟ್ಟು ಜನರು ಬೀಡಿಗೆ ಬೇಕಾದ ಎಲೆ ಸಂಗ್ರಹದಲ್ಲಿ ತೊಡಗಿಸಿಕೊಂಡಿದ್ದಾರೆ. ಗೃಹ ಉದ್ಯಮವನ್ನಾಗಿಸಿಕೊಂಡ ಬೀಡಿಯಲ್ಲಿ ಶೇ.80ರಷ್ಟು ಮಹಿಳೆಯರು ತೊಡಗಿಸಿಕೊಂಡಿದ್ದಾರೆ. ಆದರೆ ಬೀಡಿ ಉದ್ಯಮ ನಶಿಸುವುದರಿಂದ ಎಲ್ಲರ ಬದುಕು ಶೋಚನೀಯವಾಗಿದೆ ಎಂದರು.

ಕರ್ನಾಟಕದಲ್ಲೂ ಬೀಡಿ ಉದ್ಯಮದ ಸ್ಥಿತಿಯೂ ಚಿಂತಾಜನಕವಾಗಿದೆ. ರಾಜ್ಯದಲ್ಲಿ ಸುಮಾರು 7 ಲಕ್ಷ ಬೀಡಿ ಕಾರ್ಮಿಕರಿದ್ದಾರೆ. ಅದರಲ್ಲೂ ದ.ಕ. ಮತ್ತು ಉಡುಪಿ ಜಿಲ್ಲೆಯಲ್ಲಿ 3 ಲಕ್ಷ ಬೀಡಿ ಕಾರ್ಮಿಕರು ಇಂದಿಗೂ ದುಡಿಯುತ್ತಿದ್ದಾರೆ. ಅಲ್ಲದೆ ಸುಮಾರು 2 ಸಾವಿರಕ್ಕೂ ಅಧಿಕ ಬೀಡಿ ಗುತ್ತಿಗೆದಾರರು ಇದರಲ್ಲಿ ತೊಡಗಿಸಿಕೊಂಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ಕೇಂದ್ರ ಸರಕಾರವು ಬೀಡಿ ಉದ್ಯಮದ ಮೇಲೆ ವಿಧಿಸಿದ ಕಾನೂನು ಹತಾಶೆ ಹುಟ್ಟಿಸಿವೆ. ಈ ನೀತಿಯಿಂದ ದೇಶಾದ್ಯಂತ ಬೀಡಿ ಉದ್ಯಮದಲ್ಲಿ ದುಡಿಯುವ 3 ಕೋಟಿಗೂ ಅಧಿಕ ಕಾರ್ಮಿಕ ವರ್ಗವನ್ನು ಬೀದಿಪಾಲು ಮಾಡಿದಂತಾಗಿದೆ. ಭವಿಷ್ಯದ ದಿನಗಳಲ್ಲಿ ಇವರಿಗೆ ನಿರುದ್ಯೋಗ ಭೀತಿ ಕಾಡುತ್ತಿದೆ ಎಂದು ಮುಹಮ್ಮದ್ ರಫಿ ಹೇಳಿದರು.

ತೆರಿಗೆ ಅಧಿಕಾರಿಗಳಿಂದ ಕಿರುಕುಳ: ಬೀಡಿ ಗುತ್ತಿಗೆದಾರರು ಆಯಾಯ ಬೀಡಿ ಕಂಪೆನಿಯಿಂದ ಎಲೆ ಮತ್ತು ತಂಬಾಕು ಸರಬರಾಜು ಮಾಡುವಾಗ ಅದಕ್ಕೆ ತಕ್ಕ ದಾಖಲೆಯನ್ನು ನೀಡುತ್ತಾರೆ. ಅದರಲ್ಲಿ ಜಿಎಸ್‌ಟಿ ಮತ್ತು ಇ-ವೇ ಬಿಲ್ ನೀಡುತ್ತಾರೆ. ಅದಾಗ್ಯೂ ಎಲೆ ಮತ್ತು ತಂಬಾಕು ಸಾಗಿಸುವಾಗ ತೆರಿಗೆ ಅಧಿಕಾರಿಗಳು ತಪಾಸಣೆ ನೆಪದಲ್ಲಿ ದಂಡ ತೆರುವಂತೆ ಒತ್ತಾಯಿಸುತ್ತಾರೆ. ದಂಡ ತೆತ್ತರೂ ರಶೀದಿ ನೀಡದೆ ವಂಚಿಸುತ್ತಾರೆ. ಈ ಬಗ್ಗೆ ತೆರಿಗೆ ಇಲಾಖೆಯ ಆಯುಕ್ತರ ಗಮನ ಸೆಳೆಯಲಾಗಿದೆ ಎಂದು ಮುಹಮ್ಮದ್ ರಫಿ ಆಪಾದಿಸಿದರು.

ಸುದ್ದಿಗೋಷ್ಠಿಯಲ್ಲಿ ಸಂಘದ ಗೌರವಾಧ್ಯಕ್ಷ ಎಂ. ಸುರೇಶ್ಚಂದ್ರ ಶೆಟ್ಟಿ, ಅಧ್ಯಕ್ಷ ಹರೀಶ್ ಕೆ.ಎಸ್., ಪ್ರಧಾನ ಕಾರ್ಯದರ್ಶಿ ಕಿರಣ್ ಸುವರ್ಣ, ಕೋಶಾಧಿಕಾರಿ ಇಸ್ಮಾಯೀಲ್ ಡಿ.ಎಸ್., ಸದಸ್ಯರಾದ ಮುಹಮ್ಮದ್, ಉಮರಬ್ಬ, ಅಬ್ದುಲ್ ಅಝೀಝ್, ಸಿದ್ದೀಕ್ ಅರ್ಕಾಣ ಉಪಸ್ಥಿತರಿದ್ದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News