×
Ad

ರಫೇಲ್ ಒಪ್ಪಂದ; ದೇಶವನ್ನು ವಂಚಿಸುತ್ತಿರುವ ಮೋದಿ ಸರಕಾರ: ಕಾಂಗ್ರೆಸ್

Update: 2018-07-27 21:32 IST

 ಹೊಸದಿಲ್ಲಿ, ಜು. 26: ಕೇಂದ್ರ ಸರಕಾರ ದೇಶವನ್ನು ವಂಚಿಸುತ್ತಿದೆ ಹಾಗೂ ಬಹುಕೋಟಿಯ ರಫೇಲ್ ವ್ಯಾಪಾರದ ಗುತ್ತಿಗೆಯನ್ನು ಖಾಸಗಿ ಸಂಸ್ಥೆಗೆ ನೀಡುವ ಮೂಲಕ ಕ್ರೋನಿ ಕ್ಯಾಪಿಟಲಿಸಂ (ಉದ್ಯಮಿಗಳು ಹಾಗೂ ಸರಕಾರದ ಪರವಾಗಿರುವ ಬಂಡವಾಳ ಹೂಡಿಕೆ) ಉತ್ತೇಜಿಸುತ್ತಿದೆ ಎಂದು ಕಾಂಗ್ರೆಸ್ ಆರೋಪಿಸಿದೆ. ಪ್ರಧಾನಿ ಮೋದಿ ಅವರು ಇದಕ್ಕೆ ಉತ್ತರ ನೀಡಲೇ ಬೇಕು ಎಂದು ಪಕ್ಷದ ಮುಖ್ಯ ವಕ್ತಾರ ರಣದೀಪ್ ಸುರ್ಜೇವಾಲ ಹೇಳಿದ್ದಾರೆ. ಸಂಸತ್ತಿನ ಪ್ರಸಕ್ತ ಮುಂಗಾರು ಅಧಿವೇಶನದಲ್ಲಿ ರಫೇಲ್ ಒಪ್ಪಂದದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಮಾತನಾಡಬೇಕು ಎಂದು ಕಾಂಗ್ರೆಸ್ ಆಗ್ರಹಿಸಲಿದೆ ಎಂದು ಅವರು ಹೇಳಿದರು. ‘‘ಕ್ರೋನಿ ಕ್ಯಾಪಟಲಿಸಂನ ಸಂಸ್ಕೃತಿ ಮೋದಿ ಸರಕಾರದ ಡಿಎನ್‌ಎ ಆಗಿದೆ. 60,145 ಕೋ. ರೂ. ರಫೇಲ್ ಒಪ್ಪಂದದ ವಿಷಯದಲ್ಲಿ ಇದು ಎಂದಿಗೂ ಸತ್ಯವಾಗಿದೆ’’ ಎಂದು ಅವರು ಹೇಳಿದರು. ರಫೇಲ್ ಒಪ್ಪಂದದಲ್ಲಿ ಭಾರತವನ್ನು ವಂಚಿಸುವ ಕಲೆ ಮೋದಿ ಸರಕಾರದ ಮಂತ್ರ. 36 ರಫೇಲ್ ವಿಮಾನಗಳನ್ನು ಖರೀದಿಸುವ ಮೂಲಕ ಸರಕಾರ ವಂಚಿಸಿದೆ ಹಾಗೂ ಸಾರ್ವಜನಿಕ ಬೊಕ್ಕಸಕ್ಕೆ ಹಾನಿ ಉಂಟು ಮಾಡಿದೆ ಎಂದು ಅವರು ಹೇಳಿದರು. 2015 ಎಪ್ರಿಲ್ 10ರಂದು ಪ್ರಧಾನಿ ನರೇಂದ್ರ ಮೋದಿ ಅವರು ಫ್ರಾನ್ಸ್‌ನಿಂದ 36 ರಫೇಲ್ ವಿಮಾನಗಳನ್ನು ಖರೀದಿಸುವುದಾಗಿ ಘೋಷಣೆ ಮಾಡುವುದಕ್ಕಿಂತ 12 ದಿನಕ್ಕಿಂತ ಮೊದಲು ರಿಲಯನ್ಸ್ ರಕ್ಷಣಾ ಸಾಮಾಗ್ರಿ ಉತ್ಪಾದನಾ ಕಾರ್ಖಾನೆಯನ್ನು ಆರಂಭಿಸಿತ್ತು. ಆದರೆ, ಯುದ್ಧ ವಿಮಾನ ತಯಾರಿಸಲು ಅದು ಪರವಾನಿಗೆ ಪಡೆದುಕೊಂಡಿರಲಿಲ್ಲ ಎಂದು ರಣದೀಪ್ ಸುರ್ಜೇವಾಲ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News