×
Ad

ಶಿರೂರು ಸ್ವಾಮೀಜಿ ನಿಗೂಢ ಸಾವು ಪ್ರಕರಣ: ಎರಡು ದಿನಗಳೊಳಗೆ ಮರಣೋತ್ತರ ಪರೀಕ್ಷೆ ವರದಿ

Update: 2018-07-27 21:40 IST

ಉಡುಪಿ, ಜು.27: ಶಿರೂರು ಮಠಾಧೀಶ ಶ್ರೀಲಕ್ಷ್ಮೀವರ ತೀರ್ಥ ಸ್ವಾಮೀಜಿ ನಿಗೂಢ ಸಾವಿನ ಪ್ರಕರಣಕ್ಕೆ ಸಂಬಂಧಿಸಿದ ಮರಣೋತ್ತರ ಪರೀಕ್ಷೆ ವರದಿಯು ಎರಡು ದಿನಗಳೊಳಗೆ ಕೈಸೇರಲಿದೆ. ಇದನ್ನು ಅಧಿಕೃತ ಪೊಲೀಸ್ ಮೂಲವೊಂದು ಖಚಿತ ಪಡಿಸಿದೆ.

ಸ್ವಾಮೀಜಿಯ ಮರಣೋತ್ತರ ಪರೀಕ್ಷೆ ನಡೆಸಿದ ಮಣಿಪಾಲ ಕೆಎಂಸಿ ಆಸ್ಪತ್ರೆಯವರು ಆ ವರದಿಯನ್ನು ಜು. 28 ಅಥವಾ ಜು.30ರಂದು ಇಲಾಖೆಗೆ ಒಪ್ಪಿ ಸುವ ಸಾಧ್ಯತೆ ಇದೆ. ಆಸ್ಪತ್ರೆಯ ವೈದ್ಯಾಧಿಕಾರಿಗಳು ಈ ಭರವಸೆಯನ್ನು ಪೊಲೀಸ್ ಇಲಾಖೆಗೆ ನೀಡಿದ್ದಾರೆ. ಪ್ರಕರಣದ ತನಿಖೆಯನ್ನು ಚುರುಕುಗೊಳಿ ಸುವುದಕ್ಕಾಗಿ ಪೊಲೀರು ಈ ವರದಿಯ ನಿರೀಕ್ಷೆಯಲ್ಲಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಅಗತ್ಯ ಇರುವವರನ್ನು ಕರೆದು ವಿಚಾರಣೆ ಮಾಡುತ್ತಿದ್ದೇವೆಯೇ ಹೊರತು ಈವರೆಗೆ ಯಾರನ್ನು ಕೂಡ ವಶಕ್ಕೆ ತೆಗೆದು ಕೊಂಡಿಲ್ಲ. ಹೊರಗಡೆ ಹರಡುತ್ತಿರುವ ಸುಳ್ಳು ಸುದ್ದಿಗಳಿಂದ ಪೊಲೀಸ್ ತನಿಖೆಗೆ ತೊಂದರೆ ಆಗುತ್ತಿದೆ ಎಂದು ಅದೇ ಮೂಲ ಹೇಳಿಕೊಂಡಿದೆ.

ಸದ್ಯಕ್ಕೆ ಶಿರೂರು ಮೂಲ ಮಠ ಪೊಲೀಸ್ ವಶದಲ್ಲಿದ್ದು, ಇಲ್ಲಿಗೆ ವಿಧಿ ವಿಜ್ಞಾನ ಪ್ರಯೋಗಾಲಯದ ತಜ್ಞರ ತಂಡ ಜು.26ರಂದು ಮತ್ತೆ ಭೇಟಿ ನೀಡಿ ಅವರಿಗೆ ಬೇಕಾದ ಕೆಲವೊಂದು ಮಾದರಿಗಳನ್ನು ಸಂಗ್ರಹಿಸಿ ತೆಗೆದು ಕೊಂಡು ಹೋಗಿದ್ದಾರೆ. ಈ ಹಿನ್ನೆಲೆಯಲ್ಲಿ ವಿಧಿ ವಿಜ್ಞಾನ ಪ್ರಯೋಗಾಲಯದ ತನಿಖೆ ಪೂರ್ಣಗೊಳ್ಳದಿರುವುದರಿಂದ ಅದರ ವರದಿ ಬರಲು ಇನ್ನಷ್ಟು ವಿಳಂಬವಾಗಲಿದೆ ಎಂದು ಪೊಲೀಸ್ ಮೂಲ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News