×
Ad

ತುಂಬೆ ವೆಂಟೆಡ್ ಡ್ಯಾಂ ಸಂತ್ರಸ್ತರ ಹೋರಾಟ ಸಮಿತಿ ಜಿಲ್ಲಾಧಿಕಾರಿಗೆ ಮನವಿ

Update: 2018-07-27 22:40 IST

ಬಂಟ್ವಾಳ, ಜು. 27: ತುಂಬೆ ನೂತನ ವೆಂಟೆಡ್ ಡ್ಯಾಂನಲ್ಲಿ 6 ಮೀ. ನೀರು ಸಂಗ್ರಹಿಸಿ 6 ತಿಂಗಳಾದರೂ ಮುಳುಗಡೆ ಜಮೀನಿಗೆ ನೆಲಬಾಡಿಗೆ ಅಥವಾ ಶಾಶ್ವತ ಬಾಡಿಗೆ ನೀಡದಿರವುದನ್ನು ಪ್ರಶ್ನಿಸಿ ರಾಜ್ಯ ಹೈಕೋರ್ಟ್‌ನಲ್ಲಿ ಹೂಡಲಾದ ದಾವೆಗೆ ಜು. 10ರಂದು ಹೈಕೊಟ್9 ಹೊರಡಿಸಿದ ತೀರ್ಪಿನಂತೆ ಕ್ರಮಕೈಗೊಳ್ಳಲು ಆಗ್ರಹಿಸಿ ತುಂಬೆ ವೆಂಟೆಡ್ ಡ್ಯಾಂ ಸಂತ್ರಸ್ಥರ ಹೋರಾಟ ಸಮಿತಿ ಜಿಲ್ಲಾಧಿಕಾರಿ ಅವರನ್ನು ಮನವಿ ಮೂಲಕ ಒತ್ತಾಯಿಸಿದೆ.

ಹಾಗೆಯೇ ಮಂಗಳೂರು ಮಹಾನಗರ ಪಾಲಿಕೆ ಮೇಯರ್, ಬಂಟ್ವಾಳ ಶಾಸಕ ಯು.ರಾಜೇಶ್ ನಾಯ್ಕಾ ಅವರಿಗೂ ಕೂಡ ಹೋರಾಟ ಸಮಿತಿಯ ಅಧ್ಯಕ್ಷ ಎಂ.ಸುಬ್ರಹ್ಮಣ್ಯ ಭಟ್ ನೇತೃತ್ವದಲ್ಲಿ ರೈತ ಮುಖಂಡರಾದ ಮನೋಹರ ಶೆಟ್ಟಿ, ಸುದೇಶ್ ಮಯ್ಯಿ, ಅಬ್ದುಲ್ ರಹಿಮಾನ್, ರೋನಾಲ್ಡ್ ಡಿಸೋಜ ಮತ್ತಿತರರನ್ನೊಳಗೊಂಡ ನಿಯೋಗ ಮನವಿ ಸಲ್ಲಿಸಿದೆ.

ಡ್ಯಾಂನಲ್ಲಿ 6 ಮೀ. ನೀರು ಸಂಗ್ರಹಿಸಿದರೂ ಮುಳುಗಡೆ ಪ್ರದೇಶದ ಜಮೀನಿಗೆ ನೆಲಬಾಡಿಗೆ,ಶಾಶ್ವತ ಬಾಡಿಗೆ ನೀಡದ ಹಿನ್ನಲೆಯಲ್ಲಿ ಡ್ಯಾಂ ಸಂತ್ರಸ್ಥ ಹೋರಾಟ ಸಮಿತಿ, ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ಹೈಕೋರ್ಟ್ ನಲ್ಲಿ ದಾವೆ ಹೂಡಿತ್ತು. ಇದರ ವಿಚಾರಣೆ ನಡೆಸಿದ ನ್ಯಾಯಾಲಯ 3 ತಿಂಗಳ ಒಳಗಾಗಿ ರೈತರ ಸಮಕ್ಷಮದಲ್ಲಿಯೇ ವರತೆ ಪ್ರದೇಶ ಸೇರಿಸಿ ಸರ್ವೇ ನಡೆಸಿ ಮಾಹಿತಿ ನೀಡಬೇಕು ಮತ್ತು 2 ತಿಂಗಳ ಒಳಗಾಗಿ ಸೂಕ್ತ ಪರಿಹಾರ ನೀಡುವಂತೆ ಕಂದಾಯ ಇಲಾಖೆಯ ಕಾರ್ಯದರ್ಶಿ, ದ.ಕ.ಜಿಲ್ಲಾಧಿಕಾರಿ, ಮಂಗಳೂರು ಮಹಾನಗರಪಾಲಿಕೆ ಆಯುಕ್ತರು, ಪಾಲಿಕೆ ಭೂಸ್ವಧೀನಾಧಿಕಾರಿ, ಸಹಾಯಕ ಆಯುಕ್ತರು, ತಹಶೀಲ್ದಾರರು, ಕ.ನ.ನೀ.ಸ.ಒ.ಮಂಡಳಿ ಮುಖ್ಯ ಅಭಿಯಂತರರು ಹಾಗೂ ಕಾರ್ಯ ನಿರ್ವಾಹಕ ಅಭಿಯಂತರರಿಗೆ ಸೂಚಿಸಿ 5 ತಿಂಗಳ ಒಳಗೆ ಸಮಸ್ಯೆ ಪರಿಹರಿಸಿ ವರದಿ ನೀಡುವಂತೆ ಜು. 10 ರಂದು ಆದೇಶ ಹೊರಡಿಸಿತ್ತು.

ಇದರಂತೆ 14 ವರ್ಷದ ದೀರ್ಘ ಕಾಲದ ಸಮಸ್ಯೆಗೆ ಸ್ಪಂದಿಸಿ ಯಾವುದೇ ತಾರತಮ್ಯವಿಲ್ಲದೆ ವರತೆ ಪ್ರದೇಶವನ್ನು ಸೇರಿಸಿ ಸಂತ್ರಸ್ತ ರೈತರಿಗೆ ನ್ಯಾಯೋ ಚಿತ ಸೂಕ್ತ ಪರಿಹಾರ ನೀಡುವಂತೆ ಮನವಿಯಲ್ಲಿ ಒತ್ತಾಯಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News