×
Ad

ಉಡುಪಿ: ಸ್ವಚ್ಛ ಸರ್ವೇಕ್ಷಣ ಗ್ರಾಮೀಣ 2018ಕ್ಕೆ ಚಾಲನೆ

Update: 2018-07-28 18:32 IST

ಉಡುಪಿ, ಜು.28: ಸ್ವಚ್ಛ ಭಾರತ್ ಮಿಷನ್, ಉಡುಪಿ ಜಿಲ್ಲಾ ಪಂಚಾ ಯತ್ ಹಾಗೂ ತಾಲೂಕು ಪಂಚಾಯತ್ ವತಿಯಿಂದ ಆ.1ರಿಂದ 31ರವರೆಗೆ ನಡೆಯುವ ‘ಸ್ವಚ್ಛ ಗ್ರಾಮ ಸ್ವಚ್ಛ ಜಿಲ್ಲಾ’ ಸ್ವಚ್ಛ ಸರ್ವೇಕ್ಷಣ ಗ್ರಾಮೀಣ 2018ಕ್ಕೆ ಶನಿವಾರ ಉಡುಪಿ ಶಾಸಕ ಕೆ.ರಘುಪತಿ ಭಟ್ ಉಡುಪಿ ತಾಪಂ ಕಚೇರಿ ಸಭಾಂಗಣದಲ್ಲಿ ಚಾಲನೆ ನೀಡಿದರು.

ಸ್ವಚ್ಛ ಭಾರತ ಅಭಿಯಾನವು ಕೇಂದ್ರ ಸರಕಾರದ ದೂರದೃಷ್ಠಿಯ ಕಾರ್ಯ ಕ್ರಮವಾಗಿದೆ. ಸ್ವಚ್ಛ ಭಾರತ ಎಂಬುದು ಕೇವಲ ಘೋಷಣೆಗಳಿಂದ ಮಾತ್ರವಲ್ಲ ಮನ ಪರಿವರ್ತನೆಯಿಂದ ಮಾತ್ರ ಸಾಧ್ಯ. ಆದುದರಿಂದ ಎಲ್ಲ ವಿಭಾಗಗಳಲ್ಲಿ ಇದಕ್ಕೆ ಪ್ರೋತ್ಸಾಹ ಅಗತ್ಯ ಇದೆ. ನಗರ ಪ್ರದೇಶದಲ್ಲಿ ಸ್ವಚ್ಛತೆ ಎಂಬುದು ಬಹಳ ದೊಡ್ಡ ಸವಾಲು ಆಗಿದೆ. ಎಲ್ಲ ಪಾಲ್ಗೊಳ್ಳುವ ಮೂಲಕ ಮಾತ್ರ ಈ ಅಭಿಯಾನ ಯಶಸ್ವಿಗೊಳಿಸಬಹುದಾಗಿದೆ ಎಂದು ಯೋಜನೆ ಉದ್ಘಾಟಿಸಿದ ರಘುಪತಿ ಭಟ್ ನುಡಿದರು.

ಉಡುಪಿ ಜಿಪಂ ಮುಖ್ಯ ಯೋಜನಾಧಿಕಾರಿ ಶ್ರೀನಿವಾಸ ರಾವ್ ಮಾತ ನಾಡಿ, ಪ್ರಥಮ ಬಾರಿಗೆ ದೇಶಾದ್ಯಂತ ಗ್ರಾಮೀಣ ಪ್ರದೇಶದಲ್ಲಿ ಸ್ವಚ್ಛ ಸಮೀಕ್ಷೆ ನಡೆಯುತ್ತಿದ್ದು, ತಂಡವೊಂದು ಜಿಲ್ಲೆಯ ಆಯ್ದ ಗ್ರಾಮಗಳಿಗೆ ಭೇಟಿ ನೀಡಿ ಸ್ವಚ್ಛತೆ ಬಗ್ಗೆ ಪರಿಶೀಲನೆ ನಡೆಸಲಿದೆ. ಅದರ ಆಧಾರದಲ್ಲಿ ಜಿಲ್ಲೆಗಳಿಗೆ ಅಂಕ ನೀಡಲಾಗುತ್ತದೆ. ಅತ್ಯುತ್ತಮ ಜಿಲ್ಲೆಗೆ ಅ.2ರಂದು ಪ್ರಧಾನ ಮಂತ್ರಿ ಪುರಸ್ಕಾರ ನೀಡಲಿರುವರು ಎಂದರು.

ಈ ಸಮೀಕ್ಷೆಯಲ್ಲಿ ತಂಡವು ಕೇವಲ ಗ್ರಾಮಗಳ ಅಂಕಿಅಂಶಗಳು ಮಾತ್ರ ವಲ್ಲದೆ ಗ್ರಾಮದ ಶಾಲೆಗಳು, ಅಂಗನವಾಡಿ, ದೇವಸ್ಥಾನ, ಪೇಟೆ, ಸಂತೆ ಪ್ರದೇಶ ಗಳಿಗೆ ಭೇಟಿ ನೀಡಿ ಶೌಚಾಲಯ ಹಾಗೂ ಪರಿಸರದ ಸ್ವಚ್ಛತೆ ಬಗ್ಗೆ ಪರಿಶೀಲನೆ ನಡೆಸುತ್ತದೆ. ಅದೇ ರೀತಿ ಜನರ ಅಭಿಪ್ರಾಯಕ್ಕೂ ಈ ಸಮೀಕ್ಷೆಯಲ್ಲಿ ಮಾನ್ಯತೆ ನೀಡಲಾಗುತ್ತದೆ ಎಂದು ಅವರು ತಿಳಿಸಿದರು.

ಕಾರ್ಯಕ್ರಮದಲ್ಲಿ ಕಾಪು ಶಾಸಕ ಲಾಲಾಜ್ ಆರ್.ಮೆಂಡನ್, ಜಿಪಂ ಅಧ್ಯಕ್ಷ ದಿನಕರ ಬಾಬು, ಉಪಾಧ್ಯಕ್ಷೆ ಶೀಲಾ ಕೆ.ಶೆಟ್ಟಿ, ಮುಖ್ಯಕಾರ್ಯನಿರ್ವ ಹಣಾಧಿಕಾರಿ ಶಿವಾನಂದ ಕಾಪಶಿ, ತಾಪಂ ಅಧ್ಯಕ್ಷೆ ನಳಿನಿ ಪ್ರದೀಪ್ ರಾವ್, ಉಪಾಧ್ಯಕ್ಷ ರಾಜೇಂದ್ರ ಪಿ., ಸ್ಥಾಯಿ ಸಮಿತಿ ಅಧ್ಯಕ್ಷ ಭುಜಂಗ ಶೆಟ್ಟಿ ಮೊದ ಲಾದವರು ಉಪಸ್ಥಿತರಿದ್ದರು.

ತಾಪಂ ಕಾರ್ಯನಿರ್ವಹಣಾಧಿಕಾರಿ ಮೋಹನ್ ರಾಜ್ ಸ್ವಾಗತಿಸಿದರು. ಹರಿಕೃಷ್ಣ ಶಿವತ್ತಾಯ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News