×
Ad

ಸಿಮಂತೂರು ಚಂದ್ರಹಾಸ ಸುವರ್ಣಗೆ ಪಣಿಯಾಡಿ ತುಳು ಕಾದಂಬರಿ ಪ್ರಶಸ್ತಿ

Update: 2018-07-28 20:00 IST

ಉಡುಪಿ, ಜು.28: ಉಡುಪಿಯ ತುಳುಕೂಟ ಸಂಸ್ಥೆಯ ವತಿಯಿಂದ ನೀಡಲಾಗುವ 2017-18ನೇ ಸಾಲಿನ ಪ್ರತಿಷ್ಠಿತ ಎಸ್.ಯು.ಪಣಿಯಾಡಿ ನೆನಪಿನ ‘ಪಣಿಯಾಡಿ ತುಳು ಕಾದಂಬರಿ ಪ್ರಶಸ್ತಿ’ಗೆ ಮುಂಬಯಿಯ ಕನ್ನಡ, ತುಳು ಸಾಹಿತಿ ಸಿಮಂತೂರು ಚಂದ್ರಹಾಸ ಸುವರ್ಣ ಅವರ ‘ಮಣ್ಣ್‌ದ ಮದಿಪು’ ಕಾದಂಬರಿ ಆಯ್ಕೆಯಾಗಿದೆ.

ಚಂದ್ರಹಾಸ ಸುವರ್ಣ ವಿಮಾ ಸಂಸ್ಥೆಯೊಂದರಲ್ಲಿ ಹಿರಿಯ ಅಭಿವೃದ್ಧಿ ಅಧಿಕಾರಿಯಾಗಿ ಕಾರ್ಯನಿರ್ವಹಿಸುತಿದ್ದು, ನಾಟಕಕಾರರಾಗಿ, ನಿರ್ದೇಶಕ ರಾಗಿ, ಸಾಹಿತಿಯಾಗಿ ಗುರುತಿಸಿಕೊಂಡಿದ್ದಾರೆ. ಸಾಹಿತ್ಯ ಕ್ಷೇತ್ರದ ಸಾಧನೆಗಾಗಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಸೇರಿದಂತೆ ಹಲವು ಪುರಸ್ಕಾರ ಗಳಿಗೆ ಭಾಜನರಾಗಿದ್ದಾರೆ.

ಉಡುಪಿ ತುಳುಕೂಟದ ತುಳು ಕಥಾ ಪ್ರಶಸ್ತಿ, ಮುಂಬಯಿ ಅಕ್ಷಯ ಮಾಸಪತ್ರಿಕೆ ಸಾಹಿತ್ಯ ಪ್ರಶಸ್ತಿ, ಬಹರೈನ್ ಹರಿನ್ ಕಾಂಚನ ಫೌಂಡೇಶನ್ ಪ್ರಶಸ್ತಿ ಪಡೆದಿರುವ ಸುವರ್ಣರು ಮುಂಬಯಿ ಪೊವಾಯಿ ಕನ್ನಡ ಸೇವಾ ಸಂಘದ ಕನ್ನಡ ಜ್ಯೋತಿ ಪ್ರಶಸ್ತಿಗೂ ಭಾಜನರಾಗಿದ್ದಾರೆ. ಸುವರ್ಣರ ‘ಕೊರಲ್’ ಮತ್ತು ‘ಗಾಲ’ ಕೃತಿಗೆ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಪುಸ್ತಕ ಗೌರವ ಪ್ರಶಸ್ತಿಯೂ ಲಭಿಸಿದೆ.

ಸುರತ್ಕಲ್ ಗೋವಿಂದಾಸ್ ಕಾಲೇಜಿನಲ್ಲಿ ಪದವಿ ಶಿಕ್ಷಣ ಮುಗಿಸಿರುವ ಚಂದ್ರಹಾಸ ಸುವರ್ಣ, ಬೆಂಗಳೂರಿನ ಕರ್ನಾಟಕ ಹೊಮಿಯೋಫಥಿ ಕಾಲೇಜಿನಲ್ಲಿ ವೈದ್ಯ ಪದವಿಯನ್ನು ಪಡೆದಿದ್ದಾರೆ. ಮೂಲತಃ ದ.ಕ. ಜಿಲ್ಲೆಯ ಮೂಲ್ಕಿ ಶಿಮಂತೂರು ಗ್ರಾಮದ ಚಂದ್ರಹಾಸ ಸುವರ್ಣ, ಉದ್ಯೋಗ ನಿಮಿತ್ತ ಮುಂಬಯಿಯಲ್ಲಿ ನೆಲೆಸಿ, ಸಾಹಿತ್ಯ ಕೃಷಿ ಮಾಡುತ್ತಿದ್ದಾರೆ.

ಸಿಮಂತೂರು ಚಂದ್ರಹಾಸ ಸುವರ್ಣರ ‘ಮಣ್ಣ್‌ದ ಮದಿಪು’ ಕಾದಂಬರಿ ತುಳುಮಣ್ಣಿನ ಅಪ್ಪಟ ತುಳು ಸೊಗಡಿನ ನವಿರಾದ ಕಥೆಯನ್ನೊಳಗೊಂಡ ಅಪರೂಪದ ಕಾದಂಬರಿಯಾಗಿ ಹಸ್ತಪ್ರತಿಯಲ್ಲಿ ಮೂಡಿಬಂದಿದೆ. ತುಳು ಭಾಷೆ, ಸಾಹಿತ್ಯ ಹಾಗೂ ಸಂಸ್ಕೃತಿಯ ಉಳಿವಿಗಾಗಿ, ತುಳು ಭಾಷೆಯಲ್ಲಿ ಉತ್ತಮ ಕಾದಂಬರಿಗಳು ಪ್ರಕಟಗೊಳ್ಳಬೇಕೆಂಬ ಆಶಯದೊಂದಿಗೆ ಪಣಿಯಾಡಿ ತುಳು ಕಾದಂಬರಿ ಸ್ಪರ್ಧೆಯನ್ನು ತುಳುವಿನ ಮೊತ್ತಮೊದಲ ಕಾದಂಬರಿಕಾರ ದಿ.ಎಸ್.ಯು. ಪಣಿಯಾಡಿ ಹೆಸರಿನಲ್ಲಿ ನಡೆಸಲಾಗುತ್ತಿದೆ.

ಕಳೆದ 23ವರ್ಷಗಳಿಂದ ತುಳುಕೂಟ ಉಡುಪಿ ಈ ಪ್ರಶಸ್ತಿಯನ್ನು ನೀಡುತ್ತಿದೆ. ಪ್ರಶಸ್ತಿಯು 8 ಸಾವಿರ ರೂ. ನಗದು ಸಹಿತ ಪ್ರಶಸ್ತಿ ಫಲಕವನ್ನು ಒಳಗೊಂಡಿದೆ. ಆ.15ರಂದು ಉಡುಪಿಯಲ್ಲಿ ನಡೆಯುವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ‘ಮಣ್ಣ್‌ದ ಮದಿಪು’ ಕಾದಂಬರಿ ಬಿಡುಗಡೆಯೊಂದಿಗೆ ಪಣಿಯಾಡಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.

ಕಾದಂಬರಿ ಸ್ಪರ್ಧೆಯ ತೀರ್ಪುಗಾರರಾಗಿ ಹಿರಿಯಡ್ಕ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಭಾರ ಪ್ರಾಂಶುಪಾಲೆ ಡಾ. ನಿಕೇತನ, ಉಡುಪಿ ಮಹೇಶ್ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕಿ ಗೀತಾ ಕುಮಾರಿ, ಸಾಹಿತಿ, ನಾಟಕಕಾರ ಗಂಗಾಧರ್ ಕಿದಿಯೂರು ಸಹಕರಿಸಿದ್ದರು ಎಂದು ತುಳುಕೂಟ ಉಡುಪಿ ಅಧ್ಯಕ್ಷ ಬಿ.ಜಯಕರ್ ಶೆಟ್ಟಿ ಇಂದ್ರಾಳಿ, ಪಣಿಯಾಡಿ ಕಾದಂಬರಿ ಪ್ರಶಸ್ತಿ ಸಂಚಾಲಕ ಪ್ರಕಾಶ ಸುವರ್ಣ ಕಟಪಾಡಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News